ಬಾಲಿವುಡ್ ಸುಂದರಿ ಜಾಹ್ನವಿಯ ಡಯಟ್ ರಹಸ್ಯ ರಿವೀಲ್; '15-15-15' ಆಹಾರ ಸೂತ್ರದ ತಾಕತ್ತೇನು?
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಈಗಿನ ಯುವ ಪೀಳಿಗೆಯ ಟ್ರೆಂಡಿಂಗ್ ಸ್ಟಾರ್. ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಕಡಿಮೆ ಸಮಯದಲ್ಲಿಯೇ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿದ್ದಾರೆ. ಅವರ ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿರುವವರು ಅದೆಷ್ಟು ಮಂದಿನೋ.. ಹಾಗಂತ ಕೇವಲ ಬಾಲಿವುಡ್‌ನಲ್ಲಷ್ಟೇ ಅಲ್ಲ. ದಕ್ಷಿಣ ಭಾರತದಲ್ಲಿಯೂ ಇವರ ಕ್ರೇಜ್ ದುಪ್ಪಟ್ಟಾಗುತ್ತಿದೆ.
ರಾಮ್ ಚರಣ್ ಸಿನಿಮಾ 'ಪೆದ್ದಿ'ಯಲ್ಲಿ ನಾಯಕಿಯಾಗಿ ನಟಿಸಿರುವ ಜಾಹ್ನವಿ ಕಪೂರ್‌ಗೆ ಮತ್ತಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ತಮ್ಮ ಆಕರ್ಷಕ ನೋಟ ಹಾಗೂ ಫಿಟ್ನೆಸ್ ವಿಚಾರದಲ್ಲಿ ಸದಾ ಸುದ್ದಿಯಲ್ಲಿರೋ ನಟಿ ಈ ಸಿನಿಮಾದಲ್ಲೂ ಪಡ್ಡೆ ಹುಡುಗರಿಗೆ ಕಿಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಜಾಹ್ನವಿ ಕಪೂರ್ ಸೌಂದರ್ಯದ ಗುಟ್ಟು ಅವರ ಫುಡ್ ಹ್ಯಾಬಿಟ್‌ನಲ್ಲಿ ಅಡಗಿದೆ.

ಜಾಹ್ನವಿ ಕಪೂರ್ ಫೋಟೋ ಶೂಟ್‌ಗಳು, ಡ್ಯಾನ್ಸ್ ವಿಡಿಯೋಳು, ಸಮಾರಂಭಗಳಲ್ಲಿ ಅಂದದ ಉಡುಪುಗಳ ಮೇಲೆ ನೆಟ್ಟಿಗರು ಕಣ್ಣಿಟ್ಟಿರುತ್ತಾರೆ. ಇವೆಲ್ಲದಕ್ಕೂ ಕಾರಣ ಅವರ ಮೈಮಾಟ. ಸಿನಿಮಾದಲ್ಲಿ ಸುಂದರವಾಗಿ ಕಾಣುವುದಕ್ಕೆ ಜಾಹ್ನವಿ ಕಪೂರ್ ತಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಂಡಿದ್ದಾರೆ. ಈ ನಟಿಯ ಆಹಾರ ಪದ್ಧತಿಗೆ ವೈದ್ಯರೇ ಫಿದಾ ಆಗಿದ್ದಾರೆ. ಅಷ್ಟಕ್ಕೂ ಜಾಹ್ನವಿಯ ಫುಡ್ ಹ್ಯಾಬಿಟ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
ತಾರೆಯ ಆಹಾರ ಕ್ರಮದಿಂದ ವೈದ್ಯರಿಗೆ ಸಿಕ್ಕ ಹೊಸ ಪಾಠ
ಸಿನಿಮಾ ತಾರೆಯರು ಆರೋಗ್ಯ ಮತ್ತು ಅಂದದ ವಿಷಯದಲ್ಲಿ ತುಂಬಾ ಶಿಸ್ತಿನಿಂದ ಇರುತ್ತಾರೆ. ಅದರಲ್ಲೂ ಅವರ ಫುಡ್ ಹ್ಯಾಬಿಟ್ ವೈದ್ಯರ ಗಮನ ಸೆಳೆಯುತ್ತಿದೆ. ಆ ಕಾರಣ ಏನು ಎಂದು ಈಗ ನೋಡೋಣ. ಜಾಹ್ನವಿ ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದರು. ಈ ವೇಳೆ ರಸ್ತೆಯಲ್ಲಿ ಸಿಗುವ ಸ್ನಾಕ್ಸ್ ತಿನ್ನುತ್ತಿದ್ದ ದೃಶ್ಯವನ್ನು ಯಾರೋ ವಿಡಿಯೋ ಮಾಡಿದ್ದಾರೆ. ಅಲ್ಲಿ ಅವರು ತಿನ್ನುತ್ತಿದ್ದ ವಿಧಾನ ವಿಶೇಷವಾಗಿತ್ತು. ಈ ದೃಶ್ಯವನ್ನು ಕಂಡ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಾಲ್ ಮಾಣಿಕ್ಕಮ್ ಜಾಹ್ನವಿ ಆಹಾರ ಸೇವಿಸುವ ಈ ಶೈಲಿಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಈ ವಿಧಾನದಿಂದ ಹೇಗೆ ಅತಿಯಾಗಿ ತಿನ್ನುವುದನ್ನು ತಡೆಯಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.

ಜಾಹ್ನವಿ ಆಹಾರ ಶೈಲಿ ಏನು?
ನಟಿ ಜಾಹ್ನವಿ ಕಪೂರ್ ಅವರು ರಸ್ತೆ ಬದಿಯ ಸ್ನಾಕ್ಸ್ ಅನ್ನು ದೊಡ್ಡ ತುಂಡುಗಳಲ್ಲಿ ಕಚ್ಚುತ್ತಿದ್ದರು. ಆದರೆ ಅವರು ಅದನ್ನು ಬಹಳ ನಿಧಾನವಾಗಿ, ಕಡಿಮೆ ಪ್ರಮಾಣದಲ್ಲಿ ಜಗಿದು ತಿನ್ನುತ್ತಿದ್ದರು. ಜಾಹ್ನವಿ ನಿಧಾನವಾಗಿ ಊಟ ಮಾಡುವ ವಿಧಾನವನ್ನು ಕಂಡು ಡಾ. ಪಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಊಟ ಮಾಡುವಾಗ ಮತ್ತೆ ಮತ್ತೆ ಬಡಿಸಿಕೊಂಡು ತಿನ್ನುವುದನ್ನು ನಿಲ್ಲಿಸಲು ಈ ಕ್ರಮ ಬಹಳ ಮುಖ್ಯ. ಪ್ರತಿ ತುತ್ತನ್ನು ಸರಿಯಾಗಿ ಅಗೆದು ನುಂಗುವುದು ಆರೋಗ್ಯಕ್ಕೂ ಉತ್ತಮ. ಈ ರೀತಿ ಉದ್ದೇಶಪೂರ್ವಕವಾಗಿ ನಿಧಾನವಾಗಿ ಊಟ ಮಾಡುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ. ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಕಡಿಮೆಯಾಗುತ್ತವೆ. ಅತಿಯಾಗಿ ತಿನ್ನುವ ಅಭ್ಯಾಸವನ್ನು ಇದು ಸಹಜವಾಗಿ ತಡೆಯುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಅಗೆದು ತಿಂದರೆ ಅದ್ಭುತ
ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ ಎನ್ನುತ್ತಾರೆ ಡಾ. ಪಾಲ್. ನಿಧಾನವಾಗಿ ಪ್ರತಿ ತುತ್ತನ್ನು ಅಗೆದು ನುಂಗುವುದರಿಂದ ನಮ್ಮ ಹೊಟ್ಟೆ ಮತ್ತು ಮೆದುಳಿನ ನಡುವಿನ ಸಂಪರ್ಕ ಸುಧಾರಿಸುತ್ತದೆ. ಸುಮಾರು 19ನೇ ಶತಮಾನದಲ್ಲಿ ಹಾರೇಸ್ ಫ್ಲೆಚರ್ ಎಂಬ ಅಮೆರಿಕನ್ ಆಹಾರ ಪದ್ಧತಿ ಸುಧಾರಕರು ಈ ಕ್ರಮವನ್ನು ಜನಪ್ರಿಯಗೊಳಿಸಿದ್ದರು. ಅವರು ಆಹಾರ ಬಹುತೇಕ ನೀರಾಗುವ ವರೆಗೆ ಅಗೆಯಬೇಕು ಎಂದು ಹೇಳುತ್ತಿದ್ದರು. ಅವರ ಮಾತಿನ ಪ್ರಕಾರ ನಾವು ಕನಿಷ್ಠ 32 ಬಾರಿ ಅಗೆದು ತಿನ್ನಬೇಕು. ವೈದ್ಯರ ಪ್ರಕಾರ ನಿಧಾನವಾಗಿ ಜಗಿಯುವಾಗ ಹೊಟ್ಟೆ ಮತ್ತು ಮೆದುಳಿನ ನಡುವಿನ 'ವೇಗಸ್ ನರ್ವ್' (Vagus Nerve) ಮೂಲಕ ಸಂಪರ್ಕ ಕಲ್ಪಿಸುತ್ತೆ. ಇದರಿಂದ ಹೊಟ್ಟೆ ಬೇಗನೆ ತುಂಬಿದೆ ಎಂಬ ಸಂದೇಶ ಮೆದುಳಿಗೆ ಹೋಗುತ್ತೆ.
ಏನಿದು '15-15-15' ವಿಧಾನ?
ಪ್ರತಿ ತುತ್ತನ್ನು 32 ಬಾರಿ ಅಗೆಯುವ ಹಿಂದಿನ ವಿಧಾನವು ಇಂದಿನ ವೇಗದ ಬದುಕಿನಲ್ಲಿ ಕಷ್ಟ. ಇದಕ್ಕಾಗಿ ಡಾ. ಪಾಲ್ ಮಾಣಿಕ್ಕಮ್ ಒಂದು ಸುಲಭವಾದ ಹೊಸ ಸೂತ್ರವನ್ನು ಸೂಚಿಸಿದ್ದಾರೆ. ಇದನ್ನು '15-15-15 ಕ್ರಮ' ಎಂದು ಕರೆಯಲಾಗುತ್ತದೆ. ಈ ವಿಧಾನವನ್ನು ಸುಲಭವಾಗಿ ರೂಢಿಸಿಕೊಳ್ಳಬಹುದು. ಇದಕ್ಕೆ ಬೇಕಾಗಿರುವುದು ಕೇವಲ ನಿಧಾನ ಮತ್ತು ಏಕಾಗ್ರತೆ.
ಮೊದಲ ಹೆಜ್ಜೆ: ಆಹಾರದ ಒಂದು ತುತ್ತನ್ನು ಬಾಯಿಗೆ ಹಾಕಿ.
ಎರಡನೇ ಹೆಜ್ಜೆ: ಅದನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿ 15 ಸೆಕೆಂಡುಗಳ ಕಾಲ ಅಗೆಯಿರಿ.
ಮೂರನೇ ಹೆಜ್ಜೆ: ಅಗೆದು ಮುಗಿಸಿದ ನಂತರ 15 ಸೆಕೆಂಡುಗಳ ಕಾಲ ಸುಮ್ಮನೆ ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳಿ.
ನಾಲ್ಕನೇ ಹೆಜ್ಜೆ: ಇಡೀ ಊಟವನ್ನು 15 ನಿಮಿಷಗಳಲ್ಲಿ ಮುಗಿಸಿ.
ಊಟ ಮಾಡುವಾಗ ಯಾವುದೇ ಫೋನ್ ಅಥವಾ ಗ್ಯಾಜೆಟ್‌ಗಳನ್ನು ಹತ್ತಿರ ಇಡಬೇಡಿ. ಬೇರೆ ವಿಷಯಗಳ ಕಡೆಗೆ ಗಮನ ಕೊಡಬೇಡಿ. ವೇಗವಾಗಿ ತಿನ್ನುವುದು ಮತ್ತು ಸುಮ್ಮನೆ ತಿನ್ನುವುದು ಅತಿಯಾದ ಆಹಾರ ಸೇವನೆಗೆ ಮೂಲ ಕಾರಣ. ಬಾಲಿವುಡ್ ನಟಿ ಜಾಹ್ನವಿಯ ಈ ಸರಳ ಅಭ್ಯಾಸ ಎಲ್ಲರಿಗೂ ಒಂದು ಒಳ್ಳೆಯ ಮಾದರಿಯಾಗಿದೆ.


Click it and Unblock the Notifications











