ಕಾನ್ ಚಿತ್ರೋತ್ಸವದಲ್ಲಿ ಕಣ್ಮನ ಸೆಳೆದ ದಿಶಾ ಮದನ್, ವಿಶೇಷ ಸೀರೆ ಧರಿಸಿ ಮಿಂಚಿದ ಲಕ್ಷ್ಮೀ ನಿವಾಸ ನಟಿ..!
ಕಾನ್ ಚಿತ್ರೋತ್ಸವ ಮತ್ತು ಭಾರತದ ನಡುವೆ ಇರುವ ಸಂಬಂಧ ಇಂದು ನಿನ್ನೆಯದಲ್ಲ. ಇದಕ್ಕೆ ಅನೇಕ ವರ್ಷದ ಇತಿಹಾಸ ಇದೆ. 1946ರಲ್ಲಿ ಮೊದಲ ಬಾರಿ ಈ ಚಿತ್ರೋತ್ಸವ ಆರಂಭವಾದಾಗ್ಲೇ ಭಾರತದ ಜೊತೆ ಕಾನ್ ಕೊಂಡಿ ಬೆಸೆದುಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಈ 77 ವರ್ಷಗಳಲ್ಲಿ ಹಲವಾರು ತಾರೆಯರು ಈ ಕಾನ್ ಚಿತ್ರೋತ್ಸವದ ಭಾಗವಾಗಿದ್ದಾರೆ. ಈ ಸಾಲಿಗೆ ಈಗ
ಕನ್ನಡತಿ ದಿಶಾ ಮದನ್ ಕೂಡ ಸೇರಿಕೊಂಡಿದ್ದಾರೆ. ಈ ಮೂಲಕ ಸಪ್ತಸಾಗರದಾಚೆ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ವಿಶೇಷ ಅಂದರೆ ತಮ್ಮ ಅಮ್ಮನ ಸೀರೆಯನ್ನೇ ಗೌನ್ ಮಾಡಿಕೊಂಡು ದಿಶಾ ಮದನ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ್ದಾರೆ.

ಹೌದು, ದಿಶಾ ಮದನ್.. ಕುಲವಧು ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶ ಮಾಡಿ ಸದ್ಯ ಲಕ್ಷ್ಮಿ ನಿವಾಸದಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬುತ್ತಿರುವ ದಿಶಾ ಮದನ್ ಈ ಬಾರಿಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಈ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆಯುವುದಲ್ಲದೇ ವಿಶೇಷವಾದ ಉಡುಗೆಯಲ್ಲಿ ಕನ್ನಡದ ಕಂಪನ್ನು ಮತ್ತು ದಕ್ಷಿಣ ಭಾರತದ ಸಂಸ್ಕ್ರತಿಯನ್ನು ಪಸರಿಸಿದ್ದಾರೆ. ತಮಿಳುನಾಡಿನ ಚೆಟ್ಟಿನಾಡ್ ಬಳಿಯ ವಿಶೇಷ ಕುಶಲಕರ್ಮಿಗಳು ರೇಶ್ಮೆ ಹಾಗೂ ಚಿನ್ನದ ಎಳೆಗಳಿಂದ ನೇಯ್ದ ವಿಶೇಷ ಕಾಂಚಿವರಂ ಸೀರೆ ಮತ್ತು ರವಿಕೆಯಲ್ಲಿ ದಿಶಾ ಮದನ್ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಿಂಚಿದ್ದು ಗಜರಾಜ್ ಜ್ಯುವೆಲರಿಯ ಹಳೆಯ ಸಂಗ್ರಹದಲ್ಲಿನ ಚಿನ್ನ ಮತ್ತು ವಜ್ರಾಭರಣ ಧರಿಸಿ ತಮ್ಮ ಬೆಕ್ಕಿನ ನಡಿಗೆಯ ಮೂಲಕ ಅನೇಕರನ್ನು ನಿಬ್ಬೇರಗಾಗಿಸಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದಿಶಾ ಮದನ್, ತಮಿಳುನಾಡಿನ ಚೆಟ್ಟಿನಾಡ್ ಭಾಗದಲ್ಲಿ 1950ರಲ್ಲಿ ಪ್ರಖ್ಯಾತವಾಗಿದ್ದ ವಧುವಿನ ಉಡುಗೆಯನ್ನು ನಾನು ಧರಿಸಿದ್ದೆ, ಇದು ನನಗೆ ವೇಷಭೂಷಣಕ್ಕಿಂತಲೂ ಹೆಚ್ಚಿನದಾಗಿತ್ತು. ಕಳೆದು ಹೋದ ಸಂಸ್ಕ್ರತಿಯನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ನೆನಪಿಸಿದ್ದು ಹೆಮ್ಮೆ ಮೂಡಿಸಿತು ಎಂದು ಹೇಳಿದ್ದಾರೆ. #FromKarnatakaToCannes ಎಂಬ ಹ್ಯಾಶ್ ಟ್ಯಾಗ್‌ನ್ನು ಬಳಸಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಅಂದ್ಹಾಗೇ ಪ್ರತಿ ವರ್ಷ ಮೇನಲ್ಲಿ ನಡೆಯುವ ಈ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಂಡ ಕಂಡವರಿಗೆಲ್ಲ ಆಹ್ವಾನ ನೀಡಲಾಗುವುದಿಲ್ಲ. ಅಳೆದು ತೂಗಿ ಕೆಲವೇ ಕೆಲವರಿಗೆ ಮಾತ್ರ ಆಹ್ವಾನವನ್ನು ನೀಡಲಾಗುತ್ತೆ. ಆ ಕೆಲವರಲ್ಲಿ ಬಹುತೇಕರು ಬಾಲಿವುಡ್‌ನವರೇ ಆಗಿರುತ್ತಾರೆ. ಹೀಗಿರುವಾಗ ದಿಶಾ ಮದನ್ ಕಾನ್ ವೇದಿಕೆಯವರೆಗೆ ತಲುಪಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಇನ್ನುಳಿದಂತೆ ಈ ವರ್ಷ ಮೇ 13ರಂದು ಶುರುವಾದ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 24ರವರೆಗೆ ನಡೆಯಲಿದೆ. ದಿಶಾ ಮದನ್ ಅವರ ಈ ಕಾನ್ ಫಿಲ್ಮ್ ಫೆಸ್ಟಿವಲ್ ರೂಪವನ್ನು ಮೇಘನಾ ರಾಜ್ ಸೇರಿ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ಅನೇಕ ಕಲಾವಿದರು ಮೆಚ್ಚಿಕೊಂಡಿದ್ದಾರೆ. 24 ಗಂಟೆಗಳಲ್ಲಿ ಹತ್ ಹತ್ರ ಎರಡು ಲಕ್ಷ ಜನ ದಿಶಾ ಮದನ್ ಹಂಚಿಕೊಂಡ ಕಾನ್ ಫಿಲ್ಮ್ ಫೆಸ್ಟಿವಲ್ ರೆಡ್ ಕಾರ್ಪೆಟ್‌ನ ವಿಡಿಯೋವನ್ನು ಲೈಕ್ ಮಾಡಿದ್ದಾರೆ.


Click it and Unblock the Notifications











