ಬುದ್ಧ ಟೆಂಪಲ್ To ಕ್ರೂಸ್ ಡಿನ್ನರ್.. ಪತಿ ಜೊತೆ ನಟಿ ರಜಿನಿ ಪಟ್ಟಾಯ, ಬ್ಯಾಂಕಾಕ್ ಪ್ರವಾಸ ಸಖತ್ ಕಲರ್‌ಫುಲ್
ಕಿರುತೆರೆ ನಟಿ ರಜಿನಿ ಕಳೆದ ವರ್ಷ ಹೊಸಬಾಳಿಗೆ ಕಾಲಿಟ್ಟಿದ್ದರು. ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಜೊತೆ ಮದುವೆ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಗಮನ ಸೆಳೆದಿದ್ದ ಜೋಡಿ ನಿಜ ಜೀವನದಲ್ಲಿ ಒಂದಾಗಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು. ಮದುವೆ ಬಳಿಕ ಕೂಡ ರೀಲ್ಸ್ ಮಾಡುತ್ತಾ ಇಬ್ಬರೂ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಪಟ್ಟಾಯ ಹಾಗೂ ಬ್ಯಾಂಕಾಕ್ ಪ್ರವಾಸದ ಬಗ್ಗೆ ಕೂಡ ರಜನಿ ಮಾಹಿತಿ ನೀಡಿದ್ದರು.
ಅರುಣ್ ಆಗಾಗ್ಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಅದಕ್ಕಾಗಿ ಅವರ ಶ್ರಮ, ಡಯೆಟ್ ಎಲ್ಲದರ ಬಗ್ಗೆ ರಜನಿ ವೀಡಿಯೋ ಮಾಡಿ ಮಾಹಿತಿ ನೀಡುತ್ತಾರೆ. ಕರಿಯರ್ ವಿಚಾರದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾ ಬರ್ತಿದ್ದಾರೆ. 'ನೀ ಇರಲು ಜೊತೆಯಲ್ಲಿ ' ಎಂಬ ಧಾರಾವಾಹಿಯಲ್ಲಿ ಸದ್ಯ ರಜಿನಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ 'ಜೋಡಿ ನಂ. 1' ಶೋನಲ್ಲಿ ಪತಿ ಜೊತೆ ಭಾಗಿ ಆಗಿದ್ದಾರೆ.

ಇತ್ತೀಚೆಗೆ ಪಟ್ಟಾಯದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅರುಣ್ ವೆಂಕಟೇಶ್ ಭಾಗಿ ಆಗಿದ್ದರು. ಅವರೊಟ್ಟಿಗೆ ಪತ್ನಿ ರಜಿನಿ ಕೂಡ ಅಲ್ಲಿಗೆ ತೆರಳಿದ್ದರು. ಇಬ್ಬರಿಗೂ ಇದು ಮೊದಲ ವಿದೇಶ ಪ್ರಯಾಣ, ಪ್ರವಾಸ ಎಲ್ಲವೂ ಆಗಿತ್ತು. ಕಠಿಣ ಪರಿಶ್ರಮದಿಂದ ಸ್ಪರ್ಧೆಯಲ್ಲಿ ಅರುಣ್ ಗೋಲ್ಡ್ ಮೆಡಲ್ ಗೆದ್ದಿದ್ದಾರೆ. ಸ್ಪರ್ಧೆ ಮುಗಿದ ಬಳಿಕ ಪಟ್ಟಾಯದಿಂದ ಬ್ಯಾಂಕಾಕ್‌ಗೆ ತೆರಳಿ ಒಂದೆರಡು ದಿನ ಇಬ್ಬರೂ ಸುತ್ತಾಡಿ ಬಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದಷ್ಟು ರೀಲ್ಸ್, ಫೋಟೊಗಳನ್ನು ಹಂಚಿಕೊಂಡಿದ್ದು ವೈರಲ್ ಆಗ್ತಿದೆ. ಪ್ರವಾಸದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ನಟಿ ರಜಿನಿ ಮಾತನಾಡಿದ್ದಾರೆ.
ಪಟ್ಟಾಯ, ಬ್ಯಾಂಕಾಕ್ ಪ್ರವಾಸ ಪ್ಲ್ಯಾನ್ ಹೇಗೆ ಶುರುವಾಯ್ತು?
ಹಸ್ಬೆಂಡ್ ಅರುಣ್, ಬಾಡಿ ಬಿಲ್ಡಿಂಗ್ ಕಾಂಪಿಟೇಷನ್ ಇತ್ತು. ಅದಕ್ಕಾಗಿ ಪಟ್ಟಾಯಕ್ಕೆ ಹೋಗಿದ್ದು. ಬಹಳ ಬ್ಯುಸಿ ಇರುವುದರಿಂದ ಪ್ರವಾಸದ ಐಡಿಯಾ ಇರಲಿಲ್ಲ. ನನಗೆ ಮೊದಲಿನಿಂದಲೂ ಪ್ರವಾಸ ಅಂದ್ರೆ ಬಹಳ ಇಷ್ಟ. ಆದ್ರೆ ಎಲ್ಲೂ ಹೋಗೋಕೆ ಸಾಧ್ಯವಾಗ್ತಿರಲಿಲ್ಲ. ಇದೇ ಮೊದಲ ಬಾರಿಗೆ ಇಂಟರ್‌ನ್ಯಾಷನಲ್ ಟ್ರಿಪ್ ಹೋಗಿದ್ದು. ಪಟ್ಟಾಯದಲ್ಲಿ 3 ದಿನ ಕಾಂಪಿಟೇಷನ್ ಇತ್ತು. ಬಳಿಕ ಅಲ್ಲಿಂದ ಬ್ಯಾಂಕಾಕ್‌ಗೆ ಬಂದು ಒಂದೆರಡು ದಿನ ಸುತ್ತಾಡಿ ಬಂದ್ವಿ.
ಒಂದು ಅರ್ಥದಲ್ಲಿ ಇದೇ ಹನಿಮೂನ್ ಆಯ್ತಾ?
ಹ್ಹ.. ಹ್ಹ... ಬಾಡಿ ಬಿಲ್ಡಿಂಗ್ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ.. ಕಾಂಪಿಟೇಷನ್ ಬಳಿಕ ದೇಹ ಬಹಳ ದಣಿದಿರುತ್ತದೆ. ಓಡಾಡುವುದು ಕಷ್ಟ. ಉಪ್ಪು, ಖಾರ ಇಲ್ಲದ ಊಟ.. ಡಯೆಟ್ ಮಾಡಿ ಬಹಳ ಸುಸ್ತಾಗುತ್ತೆ. ಕೆಲವರಿಗೆ ಹೇಳಿದ್ರು ಅರ್ಥವಾಗಲ್ಲ. ಅವನಿಗೆ ಸುತ್ತಾಡಲು ಆಗದ್ದಷ್ಟು ಆಯಾಸವಾಗುತ್ತಿತ್ತು. ಆದ್ರು ನನ್ನ ಬಲವಂತಕ್ಕೆ ಬಂದ. ಬ್ಯಾಂಕಾಕ್ ಸುತ್ತಾಡಿದೆವು.. ಚೆನ್ನಾಗಿತ್ತು..
ಇದೇ ಮೊದಲ ವಿದೇಶ ಪ್ರವಾಸವೇ?
ಅರುಣ್ ಹೊರ ದೇಶದಲ್ಲಿ ಕಾಂಪಿಟೇಷನ್‌ಗೆ ಹೋಗಿದ್ದು ಇದೇ ಮೊದಲು. ನಾನು ವಿದೇಶ ಪ್ರವಾಸ ಮಾಡಿದ್ದು ಹೊಸ ಅನುಭವ. ಮದುವೆ ಬಳಿಕ ಎರಡು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದೆ. ಅರುಣ್ ಕೂಡ ಬೇರೆ ಬೇರೆ ಕಾಂಪಿಟೇಷನ್‌ಗೆ ತಯಾರಿ ನಡೆಸುತ್ತಿದ್ದ. ಹಾಗಾಗಿ ಎಲ್ಲೂ ಹೊರಗಡೆ ಹೋಗೋಕೆ ಆಗಿರಲಿಲ್ಲ. ಇದು ಒಳ್ಳೆ ಅವಕಾಶ ಸಿಕ್ಕಿದಂತಾಯ್ತ..
ಬ್ಯಾಂಕಾಕ್‌ನಲ್ಲಿ ಯಾವ್ಯಾವ ಜಾಗಕ್ಕೆ ಹೋಗಿದ್ರಿ?
ಗೋಲ್ಡನ್ ಬುದ್ಧ ಟೆಂಪಲ್, ಕ್ರೂಸ್ ಡಿನ್ನರ್, ಸ್ಪೇಸ್ ಅಂಡ್ ಟೈಮ್ ಕ್ಯೂಬ್‌ಗೆ ಹೋಗಿದ್ವಿ. ಅರುಣ್‌ಗೆ ಓಡಾಡಲು ಆಯಾಸವಾಗುವಂತಹ ಜಾಗಗಳಿಗೆ ಹೋಗ್ಲಿಲ್ಲ. ಹೆಚ್ಚು ಸುತ್ತಾಡಲಿಲ್ಲ. ಸುಮ್ನೆ ಆರಾಮಾಗಿ ಟೈಂ ಸ್ಪೆಂಡ್ ಮಾಡಿ ಬಂದ್ವಿ.
ಹೇಗಿತ್ತು ಬ್ಯಾಂಕಾಕ್ ಪ್ರವಾಸದ ಅನುಭವ?
ಬಹಳ ಚೆನ್ನಾಗಿತ್ತು. ಬಹಳ ಕ್ಲೀನ್ ಸಿಟಿ. ಜನ ಬಹಳ ಸಿಂಪಲ್. ಇಲ್ಲಿ ಜನ ಮುಖ ಗಂಟಾಕಿಕೊಂಡು ಇರ್ತಾರೆ. ಪರಿಚಯ ಇದ್ದವ್ರು ಕೂಡ ಎದುರಿಗೆ ಸಿಕ್ಕಾಗ ಇಲ್ಲಿ ಒಂದು ಸ್ಮೈಲ್ ಮಾಡಲ್ಲ. ಆದ್ರೆ ಅಲ್ಲಿ ಎಲ್ಲಾ ಕಡೆ ಜನ ತಲೆ ಬಗ್ಗಿಸಿ ಸ್ಮೈಲ್ ಮಾಡಿ ನಮಸ್ಕಾರ ಮಾಡ್ತಾರೆ. ಅದನ್ನು ನೋಡಿ ವಿಶೇಷ ಅನ್ನಿಸ್ತು. ನಾವು ಕುಡಿಯಲ್ಲ, ಅಲ್ವಾ ಹಾಗಾಗಿ ಬ್ಯಾಂಕಾಕ್ ನಮ್ಮ ಕಣ್ಣಿಗೆ ಬಹಳ ಕಲರ್‌ಫುಲ್ ಆಗಿ ಇತ್ತು. ನಶೆಯಲ್ಲಿ ತೇಲುವರಿಗೆ ಕೊಂಚ ಬ್ಲರ್ ಬ್ಲರ್ ಆಗಿ ಕಾಣಿಸಬಹುದು.. ಹ್ಹ.. ಹ್ಹ..
ಬೇರೆ ಯಾವ ದೇಶಕ್ಕೆ ಪ್ರವಾಸ ಹೋಗುವ ಕನಸಿದೆ?
ಸಾಕಷ್ಟು ದೇಶಗಳಿಗೆ ಹೋಗುವ ಆಸೆಯಿದೆ. ಯೂರೋಪ್ ಪ್ರವಾಸ ಮಾಡುವ ಕನಸಿದೆ. ಆದ್ರೆ ಅದಕ್ಕೆ ಹೆಚ್ಚು ಹಣ ಬೇಕು, 15-20 ದಿನ ಹೋಗಬೇಕು. ಈಗ ಇಬ್ಬರೂ ಬ್ಯುಸಿ ಇರುವುದರಿಂದ ಕಷ್ಟ. ಅದಕ್ಕೂ ಒಂದು ಟೈಂ ಬರುತ್ತೆ. ಮ್ಯಾನಿಫೆಸ್ಟ್ ಮಾಡ್ತಿದ್ದೀನಿ. ಖಂಡಿತ ಯೂರೋಪ್ ಪ್ರವಾಸಕ್ಕೆ ಹೋಗ್ತೀವಿ. ಬ್ಯಾಂಕಾಕ್ ಪ್ರವಾಸ ನಿರೀಕ್ಷೆ ಮಾಡಿರಲಿಲ್ಲ. ಅರುಣ್ ಕಾಂಪಿಟೇಷನ್ ಕಾರಣಕ್ಕೆ ಹೋಗಿದ್ದು. ಜೊತೆಗೆ ಪ್ರವಾಸ ಕೂಡ ಆಯ್ತು.
ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ
ಹೊಸದಾಗಿ ಯಾವುದೇ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. 'ಜೋಡಿ ನಂ. 1' ಫಿನಾಲೆ ಹತ್ತಿರಕ್ಕೆ ಬರ್ತಿದೆ. ಮತ್ತೊಂದು ಕಡೆ ಧಾರಾವಾಹಿ ನಡೀತಿದೆ. ಸದ್ಯಕ್ಕೆ ಇವೆರಡು ಮಾತ್ರ.. ಮುಂದೆ ನೋಡ್ಬೇಕು.


Click it and Unblock the Notifications