ಒಮ್ಮೆ ಹಾಕಿದ ಬಟ್ಟೆ ಮತ್ತೊಮ್ಮೆ ಹಾಕಲ್ವಂತೆ ಮಂಥನ, ಕಾಮಿಡಿ ಕಿಲಾಡಿಯ ಕಾಸ್ಟ್ಲಿ ಲೈಫ್ ಸ್ಟೈಲ್..!
ಇಡೀ ಭಾರತದಲ್ಲಿಯೇ ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರು ಮಾಡಿದೆ. ಟೆಕ್ನಾಲಜಿ ಹಬ್ ಎನ್ನುವ ಕಾರಣಕ್ಕೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಕೂಡ ಹೆಸರುವಾಸಿಯಾಗಿದೆ. ಸ್ಟಾರ್ಟಪ್ ಮತ್ತು ಐಟಿಯ ಅನೇಕ ಕಂಪನಿಗಳ ಪ್ರಧಾನ ಕಛೇರಿಗಳು ಬೆಂಗಳೂರಿನಲ್ಲಿಯೇ ತಲೆಯೆತ್ತಿವೆ. ಇಷ್ಟೇ ಅಲ್ಲ ತನ್ನ ಕಾಸ್ಮೋಪಾಲಿಟನ್ ಸಂಸ್ಕ್ರತಿಯಿಂದಾಗಿ ಬೆಂಗಳೂರು ಫ್ಯಾಷನ್ ಕೇಂದ್ರವಾಗಿಯೂ ಕೂಡ ಗುರುತಿಸಿಕೊಂಡಿದೆ. ಶಾಪಿಂಗ್ ಮಾಲ್‌ಗಳು ಬೆಂಗಳೂರಿನ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಿವೆ.
ಹಾಗಂಥ ಎಲ್ಲರೂ ದೊಡ್ಡ ದೊಡ್ಡ ಮಾಲ್‌ಗಳಲ್ಲಿಯೇ ಹೋಗಿ ಬಟ್ಟೆ ಖರೀದಿಯನ್ನು ಮಾಡುವುದಿಲ್ಲ. ಹಲವಾರು ಜನ ಬಜೆಟ್ ಫ್ರೆಂಡ್ಲಿ ಶಾಪಿಂಗ್ ಮಾಡಲು ಬಯಸುತ್ತಾರೆ. ಇಂತಹವರಿಗಾಗಿಯೇ ಬೆಂಗಳೂರಿನಲ್ಲಿ ಹಲವಾರು ಜಾಗಗಳಿವೆ. ಆ ಪೈಕಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಚರ್ಚ ಸ್ಟ್ರೀಟ್ ಕೂಡ ಒಂದು.

ಸುಂದರವಾದ ಉಡುಪು, ವಿಭಿನ್ನ ಶೈಲಿಯ ಆಭರಣ, ಸ್ಟೈಲೀಶ್ ಪಾದರಕ್ಷೆ, ಟ್ರೆಂಡಿ ಬ್ಯಾಗ್, ಕಸೂತಿ ಮಾಡಿದ ಸೀರೆಯ ಬ್ಲೌಸ್, ಹೀಗೆ ಅನೇಕ ವಸ್ತುಗಳು ಈ ಮಾರುಕಟ್ಟೆಯಲ್ಲಿ ಸಿಗುತ್ತವೆ. ಇಂತಹ ಚರ್ಚ್ ಸ್ಟ್ರೀಟ್ ನಲ್ಲಿ ಕೇವಲ 500 ರೂಪಾಯಿಗಳಿಗೆ ಎಷ್ಟೆಲ್ಲ ವಸ್ತುಗಳನ್ನು ಖರೀದಿ ಮಾಡಬಹುದು ?
ಇಂತಹದ್ದೊಂದು ಪ್ರಶ್ನೆಗೆ ಫಿಲ್ಮಿಬೀಟ್ ಕನ್ನಡ ತಂಡ ಉತ್ತರ ಹುಡುಕುವ ಪ್ರಯತ್ನ ಮಾಡಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಂಥನ ಜೊತೆ ಮಾರ್ಕೆಟ್ ಸುತ್ತಾಡಿದೆ. 500 ರೂಪಾಯಿಯಲ್ಲಿ ಖರೀದಿಸಿದ ವಸ್ತುಗಳನ್ನ ಅಲ್ಲಿಯೇ ಇದ್ದ ಪುಟ್ಟ ಬಡ ಬಾಲಕಿಗೆ ಕೂಡ ನೀಡಿದೆ. ಹಾಗಿದ್ದರೆ 500 ರೂಪಾಯಿಗಳಲ್ಲಿ ಮಂಥನ ಖರೀದಿ ಮಾಡಿದ್ದೇನು ? ಮಂಥನ ಅವರ ದೃಷ್ಟಿಯಲ್ಲಿ ಫ್ಯಾಷನ್ ಅಂದರೇನು ? ಸಾಮಾನ್ಯವಾಗಿ ಮಂಥನ ಎಲ್ಲಿ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದೆ ಓದಿ
ರಸ್ತೆ ಬದಿಯಲ್ಲಿ ಶಾಪಿಂಗ್ ಮಾಡ್ತಾರಾ ಮಂಥನ ?
ಸಹಜವಾಗಿ ಎಲ್ಲರಂತೆ ನಾನು ಕೂಡ ಸ್ಟ್ರೀಟ್ ಶಾಪಿಂಗ್ ಮಾಡ್ತೀನಿ, ಬಾಲ್ಯದಲ್ಲಿ ತುಂಬಾ ಮಾಡ್ತಿದ್ದೆ, ಈಗಲೂ ಕೂಡ ತುಂಬಾನೇ ಆಕರ್ಷಕವಾದ ವಸ್ತು ಏನಾದರು ಕಣ್ಣಿಗೆ ಬಿದ್ದರೆ ಕೂಡಲೇ ಮರು ಯೋಚನೆ ಮಾಡದೇ ಹೋಗಿ ಖರೀದಿಸುತ್ತೇನೆ, ನನ್ನ ಮೊಬೈಲ್‌ನ ಪೌಚ್ ಕೂಡ ನಾನು ಇಲ್ಲಿಯೇ ತೆಗೆದುಕೊಂಡಿದ್ದು ಎಂದು ಹೇಳಿದ್ದಾರೆ.
ಇನ್ನು ಸಾಮಾನ್ಯವಾಗಿ ಬಣ್ಣದ ಪ್ರಪಂಚಕ್ಕೆ ಬಂದ ನಂತರ ಹಲವಾರು ಜನ ರಸ್ತೆ ಬದಿ ಬರುವುದನ್ನೇ ನಿಲ್ಲಿಸುತ್ತಾರೆ. ಕೇವಲ ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳಿಗೆ ಹೋಗುತ್ತಾರೆ. ಯಾಕೆ ಹೀಗೆ ಎಂಬ ಪ್ರಶ್ನೆಗೆ ಕೂಡ ಉತ್ತರವನ್ನು ನೀಡಿರುವ ಮಂಥನ ಸ್ವಲ್ಪ ನಾವು ಚಿರಪರಿಚಿತರಾದ ಮೇಲೆ ಬರುವುದು ಕಷ್ಟ, ಯಾಕೆಂದರೆ.. ಜನ ಗುರುತು ಹಿಡಿದು ಮಾತನಾಡಿಸೋಕೆ ಬರ್ತಾರೆ, ಇನ್ನು ಹೆಸರು ಸಂಪಾದನೆ ಮಾಡಿದ ಮೇಲೆ ಮೆಂಟೇನೆನ್ಸ್ ಎನ್ನುವುದು ಬಂದು ಬಿಡುತ್ತೆ ಹೀಗಾಗಿ ಕೆಲವರು ಬರಲ್ಲ ಇನ್ನು ಕೆಲವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಸ್ತೆ ಬದಿ ಶಾಪಿಂಗ್ ಮಾಡ್ತಾರೆ ನಾನು ಕೂಡ ಹಾಗೇ ಇಷ್ಟ ಆದರೆ ಜಾಗ ನೋಡಲ್ಲ ಖರೀದಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಖರೀದಿ ಮಾಡುವಾಗ ಬೆಲೆ ನೋಡ್ತಾರಾ ಮಂಥನ ?
ಕಡಿಮೆ ಬೆಲೆ ಜಾಸ್ತಿ ಬೆಲೆ ಅಂತೇನು ಇಲ್ಲ. ಬಟ್ಟೆ ನನ್ನ ಮೇಲೆ ಚೆನ್ನಾಗಿ ಕಾಣಬೇಕಷ್ಟೇ, ನನಗೆ ಕಂಫರ್ಟಬಲ್ ಅನಿಸಬೇಕು, ಅದು 100 ರೂಪಾಯಿದ್ದಾಗಿರಲಿ ಅಥವಾ ಹತ್ತು ಸಾವಿರದ್ದಾದರೂ ಆಗಿರಲಿ ನನಗೆ ಹಿತವಾಗಿದೆ ಎಂದು ಅನಿಸಿದರೆ ನಾನು ತಗೊಳ್ತೀನಿ, ಬೆಲೆ ಎಷ್ಟಿದ್ದರೂ ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.
ಮಂಥನ ಖರೀದಿ ಮಾಡಿದ ದುಬಾರಿ ವಸ್ತು ಯಾವುದು ?
ದಿನನಿತ್ಯ ಬಳಸುವ ವಸ್ತುಗಳಲ್ಲಿ ಸದ್ಯಕ್ಕೆ ನನ್ನ ಫೋನ್ ನಾನು ಹೆಚ್ಚು ದುಡ್ಡು ಖರೀದಿಸಿದ್ದು, ನಾನು ತಗೊಂಡಾಗ ಇದರ ಬೆಲೆ 1,70,000 ಇತ್ತು, ಇನ್ನು ಚಿನ್ನ ನಾನು ಹಾಕಿಕೊಳ್ಳಲ್ಲ ಆದರೂ ನನಗೆ ಇಷ್ಟ ಹೀಗಾಗಿ ಚಿನ್ನನಾ ಆಗಾಗ ಖರೀದಿ ಮಾಡುತ್ತಿರುತ್ತೇನೆ.
ಇದು ಹೊರತು ಪಡಿಸಿದರೆ ಎರಡು ವರ್ಷದ ಹಿಂದೆ ನನ್ನ ಬರ್ತ್‌ಡೇ 45,000 ರಿಂದ 50,000 ಖರ್ಚು ಮಾಡಿ ಲೆಹೆಂಗಾ ಮಾಡಿಸಿದ್ದೆ ಈ ವರ್ಷ ಪವಿತ್ರಾ ಗೌಡ ಅವರ ರೆಡ್ ಕಾರ್ಪೆಟ್ ಸ್ಟುಡಿಯೋದಲ್ಲಿ 15,000 ಕೊಟ್ಟು ಬಟ್ಟೆ ತಗೊಂಡೆ, ಹೀಗೆ ಪ್ರತಿ ವರ್ಷ ನನ್ನ ಬರ್ತ್‌ಡೇ ಬಂದರೆ ಬಟ್ಟೆ ಖರ್ಚು ಜಾಸ್ತಿ ಇರುತ್ತೆ ಹಾಗೇ ನನ್ನ ಬ್ಯಾಂಕ್ ಅಕೌಂಟ್‌ನಲ್ಲಿನ ಹಣ ಕೂಡ ಕರಗುತ್ತೆ ಎಂದು ಮಂಥನ ಹೇಳಿದ್ದಾರೆ.
ಮಂಥನ ಅವರಿಗೆ ಪವಿತ್ರಾ ಗೌಡ ಮೊದಲಿಂದ ಪರಿಚಯನಾ ?
ಇಲ್ಲ ಅಲ್ಲಿ ಬಟ್ಟೆ ತುಂಬಾ ಚೆನ್ನಾಗಿರುತ್ತೆ ಅಂತ ಯಾರೋ ನನಗೆ ಹೇಳಿದ್ದರು, ಇನ್ನು ನಾನು ಕೂಡ ಅಲ್ಲಿನ ಕಲೆಕ್ಷನ್ಸ್ ಹೇಗಿದೆ ಅಂತ ನೋಡ್ತಿದ್ದೆ, ಸುಮ್ಮನೆ ನನ್ನ ಫ್ರೆಂಡ್ ಜೊತೆ ಮಾತನಾಡುತ್ತಿದ್ದೆ ಆಗ ಅವರು ಅಲ್ಲಿಯೇ ಹೋಗೋಣ ಎಂದು ಕರೆದುಕೊಂಡು ಹೋದರು, ಅಲ್ಲಿ ಹೋದಾಗ ನಿಜವಾಗಿಯೂ ಬಟ್ಟೆಗಳು ತುಂಬಾನೇ ಚೆನ್ನಾಗಿದ್ದವು, ಪವಿತ್ರಾ ಗೌಡ ಮ್ಯಾಮ್ ತುಂಬಾನೇ ಸ್ವೀಟೆಸ್ಟ್ ನನಗೆ ಒಳ್ಳೋಳ್ಳೆಯ ಬಟ್ಟೆ ತೋರಿಸಿದರು., ನಾನು ಹಾಕಿದ್ದ ಬಟ್ಟೆ ನನಗೆ ತುಂಬಾ ಚೆನ್ನಾಗಿ ಸೂಟ್ ಆಗ್ತಿತ್ತು ಹೀಗಾಗಿ ಅಲ್ಲಿ ತಗೊಂಡೆ ಎಂದಿದ್ದಾರೆ ಮಂಥನ
ಒಮ್ಮೆ ಹಾಕಿಕೊಂಡ ಬಟ್ಟೆ ಮತ್ತೊಮ್ಮೆ ಧರಿಸುತ್ತಾರಾ ಮಂಥನ ?
ಇಲ್ಲ 365 ದಿನಗಳಿಗೆ ಆಗುವಷ್ಟು ಬಟ್ಟೆ ಇಟ್ಟುಕೊಳ್ಳಲು ಸಾಧ್ಯ ಇಲ್ಲ, ನನಗಂತೂ ಆಗಲ್ಲ, ನನಗೇನು ಅಂದರೆ ಆಗಾಗ ಹೊಸ ಬಟ್ಟೆ ಖರೀದಿ ಮಾಡ್ತಿರಬೇಕು, ಅದೇನೋ ಗೊತ್ತಿಲ್ಲ ನನಗೆ ಹಾಕಿದ್ದ ಬಟ್ಟೆಯನ್ನೇ ಮತ್ತೆ ಹಾಕಿಕೊಳ್ಳೋಕೆ ಸ್ವಲ್ಪ ಅನ್ ಕಂಪರ್ಟಬಲ್ ಆಗುತ್ತೆ ಹೀಗಾಗಿ ರಿಫೀಟ್ ಮಾಡಲ್ಲ ಎಂದಿದ್ದಾರೆ.
ಮಂಥನಗೆ ಪಾರ್ಟಿ ಅಂದರೆ ಇಷ್ಟಾನಾ ?
ಸಿಕ್ಕಾಪಟ್ಟೆ ಇಷ್ಟ. ನನ್ನ ಇನ್‌ಸ್ಟಾಗ್ರಾಮ್ ನೋಡಿದರೆ ನಿಮಗೆ ಗೊತ್ತಾಗುತ್ತೆ. ತುಂಬಾ ಜಾಸ್ತಿ ಪಾರ್ಟಿ ಮಾಡ್ತೀನಿ ನಾನು, ನನಗೆ ಮನೆಯಲ್ಲಿ ಸುಮ್ಮನೆ ಕೂರೋಕೆ ಆಗಲ್ಲ, ಮನೆಯಲ್ಲಿ ಕುಂತು ಸುಮ್ಮನೆ ಯೋಚನೆ ಮಾಡ್ತಾ ಕೂರುವಳು ನಾನಲ್ಲ, ಅಪ್ಪಿ ತಪ್ಪಿ ಯೋಚನೆ ಮಾಡಿದರೆ ತುಂಬಾ ಜಾಸ್ತಿ ಯೋಚನೆ ಮಾಡ್ತೀನಿ ಇಲ್ಲ ಅಂದರೆ ಏನೇ ಆದರೂ ನಾನು ಕ್ಯಾರೇ ಎನ್ನಲ್ಲ ಎಂದು ಹೇಳಿದ್ದಾರೆ ಮಂಥನಾ.
ಸದ್ಯಕ್ಕೆ ಏನ್ಮಾಡ್ತಿದ್ದಾರೆ ಮಂಥನ ?
ಸದ್ಯಕ್ಕೆ ಎರಡು ಧಾರಾವಾಹಿಗಳು ಶುರುವಾಗಬೇಕಿದೆ. ಚಿತ್ರಗಳ ಕುರಿತು ಕೂಡ ಮಾತುಕಥೆ ನಡೆಯುತ್ತಿದೆ. ಅದನ್ನು ಹೊರತು ಪಡಿಸಿದರೆ ನಾನು ಮಿಕ್ಕ ಸಮಯದಲ್ಲಿ ನನ್ನ ಆರೋಗ್ಯ, ನನ್ನ ಸ್ಕಿನ್ ಕಡೆ ಹೆಚ್ಚಿನ ಗಮನ ಕೊಡುತ್ತೇನೆ, ನೆಮ್ಮದಿಯಿಂದ ನನ್ನ ಪಾಡಿಗೆ ನಾನು ಲೈಫ್‌ನ ಎಂಜಾಯ್ ಮಾಡಿಕೊಂಡು ಇರುತ್ತೇನೆ ಎಂದು ತಮ್ಮ ಮುಂದಿನ ಪ್ಲ್ಯಾನ್‌ಗಳನ್ನು ನಮ್ಮ ಜೊತೆ ಮಂಥನ ಹಂಚಿಕೊಂಡಿದ್ದಾರೆ.
ಹೀಗೆ ಚರ್ಚ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡ್ತಾ ತಮ್ಮ ಲೈಫ್ ಸ್ಟೈಲ್ ಕುರಿತು ಕೂಡ ಮಂಥನ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಂದಿನ ಯೋಜನೆಗಳ ಕುರಿತು ಕೂಡ ಮಾತನಾಡಿದ್ದಾರೆ. 'ಫಿಲ್ಮಿಬೀಟ್ ಕನ್ನಡ' ಮಂಥನ ಜೊತೆ ನಡೆಸಿದ ಎಕ್ಸ್ ಕ್ಲೂಸಿವ್ ಸಂದರ್ಶನದ ವಿಡಿಯೋದ ಲಿಂಕ್ ಇಲ್ಲಿ ಕೆಳಗಡೆ ಇದ್ದು ಆಸಕ್ತರು ವಿಡಿಯೋ ಸಂದರ್ಶನವನ್ನು ನೋಡಬಹುದು. ಆ ಪುಟ್ಟ ಬಾಲಕಿಗೆ 500 ರೂಪಾಯಿಯಲ್ಲಿ ಮಂಥನಾ ಏನೆಲ್ಲ ಖರೀದಿ ಮಾಡಿದರು ಎನ್ನುವ ಪ್ರಶ್ನೆಗೆ ಉತ್ತರ ಕೂಡ ವಿಡಿಯೋದಲ್ಲಿ ನೋಡಿ ಪಡೆಯಬಹುದು.


Click it and Unblock the Notifications











