ಮಕ್ಕಳ ಜೊತೆ ಸಮಯ ಕಳೀಬೇಕು, ದೇಶ ವಿದೇಶ ಸುತ್ತಬೇಕು, ಸಿನಿಮಾ ಆಮೇಲೆ; ಪ್ರಣೀತಾ ಸುಭಾಷ್
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವುದು ಜನಪ್ರಿಯ ನಾಣ್ಣುಡಿ. ದೇಶ ಸುತ್ತುವುದರಿಂದ ನಮ್ಮ ಅನುಭವ ಹೆಚ್ಚುತ್ತದೆ, ತಿಳಿವಳಿಕೆ ವೃದ್ಧಿಸುತ್ತದೆ. ಪ್ರವಾಸ ಎನ್ನುವುದು ಈಗ ಹವ್ಯಾಸವಾಗಿದೆ. ಸಿನಿಮಾ ತಾರೆಯರಂತೂ ಆಗಾಗ್ಗೆ ವಿದೇಶಗಳ ಫ್ಲೈಟ್ ಏರುತ್ತಾರೆ. ಕನ್ನಡ ನಟಿ ಪ್ರಣೀತಾ ಸುಭಾಷ್ ಕೂಡ ಊರೂರು ಸುತ್ತುತ್ತಿರುತ್ತಾರೆ.
ಇತ್ತೀಚೆಗೆ ಪ್ರಣೀತಾ ಮಾಲ್ಡೀವ್ಸ್ ಪ್ರವಾಸ್ ಕೈಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊ, ವೀಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಪತಿ ನಿತಿನ್ ರಾಜು ಹಾಗೂ ಮಗಳು ಆರ್ನಾ, ಮಗ ಜೇಯ್ ಕೃಷ್ಣ ಜೊತೆ ಭೂಲೋಕದ ಸ್ವರ್ಗದಲ್ಲಿ ವಿಹರಿಸುತ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಪ್ರಣೀತಾ ಮಾತನಾಡಿದ್ದಾರೆ. ಮಕ್ಕಳಿಗೆ ಈಗ ಶಾಲೆ ರಜೆ, ಮತ್ತೆ ಶಾಲೆ ಆರಂಭವಾಗುವ ಮುನ್ನ ಪ್ರವಾಸ ಕೈಗೊಂಡೆವು ಎಂದಿದ್ದಾರೆ.

ಮೊದಲಿನಿಂದಲೂ ಪ್ರಣೀತಾ ಅವರಿಗೆ ಪ್ರವಾಸ ಅಂದ್ರೆ ಅಚ್ಚುಮೆಚ್ಚು. ಸಿನಿಮಾಗಳಲ್ಲಿ ಬ್ಯುಸಿ ಇದ್ದಾಗ ಅದಕ್ಕೆ ಹೆಚ್ಚು ಸಮಯಾವಕಾಶ ಸಿಗುತ್ತಿರಲಿಲ್ಲ ಎಂದಿದ್ದಾರೆ. ಚಿತ್ರೀಕರಣಕ್ಕಾಗಿ ಕೂಡ ಬೇರೆ ಬೇರೆ ಊರುಗಳಿಗೆ ದೇಶಗಳಿಗೆ ಹೋಗುತ್ತಿದ್ದೆ. ಆದರೆ ಆಗ ಕೆಲಸದ ಒತ್ತಡ ಇರುತ್ತಿತ್ತು. ಯಾವುದೇ ದೇಶಕ್ಕೆ ಹೋದರೂ ಬೆಳಗ್ಗೆ ಬೇಗ ಎದ್ದು ಮೇಕಪ್ ಮಾಡಿಕೊಂಡು ಚಿತ್ರೀಕರಣಕ್ಕೆ ಹೋಗಬೇಕಿತ್ತು. ಬಳಿಕ ಸಂಜೆ ಹೋಟೆಲ್, ಚಿತ್ರೀಕರಣ ಮುಗಿಯುತ್ತಿದ್ದಂತೆ ಭಾರತಕ್ಕೆ ವಾಪಸ್ ಆಗಿಬಿಡುತ್ತಿದ್ದೆ. ಆದರೆ ಈಗ ನಾನೇ ಪ್ರವಾಸಕ್ಕೆ ಬರುವುದರಿಂದ ರಿಲ್ಯಾಕ್ಸ್ ಆಗಿ ಎಂಜಾಯ್ ಮಾಡಬಹುದು ಎಂದಿದ್ದಾರೆ.
ಸದ್ಯಕ್ಕೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮಕ್ಕಳಿಗೆ ಹೆಚ್ಚಿನ ಸಮಯ ಕೊಡಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಮಕ್ಕಳು ಇನ್ನು ಚಿಕ್ಕವರು. ಅವರ ಜೊತೆ ಕಾಲ ಕಳೆಯಬೇಕು. ಅವರ ಜೊತೆ ಊರೂರು ಸುತ್ತಬೇಕು. ಅದಕ್ಕಾಗಿಯೇ ಈ ಪ್ರವಾಸ. ಮಗಳು ಹುಟ್ಟಿದ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡಿದ್ದೆ. ಬಳಿಕ ದಿಲೀಪ್ ಅವರೊಟ್ಟಿಗೆ 'ಥಂಕಮಣಿ' ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದೆ. ಆದರೆ ಮಗ ಹುಟ್ಟಿದ ನಂತರ ಸಾಧ್ಯವಾಗುತ್ತಿಲ್ಲ, ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡಬೇಕು. ಅದಕ್ಕಾಗಿ ಕೊಂಚ ಬ್ರೇಕ್ ಪಡೆಯೋಣ ಎಂದು ಸುಮ್ಮನಾಗಿರುವುದಾಗಿ ಎಂದು ಪ್ರಣೀತಾ ತಿಳಿಸಿದ್ದಾರೆ.
ಈಗಾಗಲೇ 20ರಿಂದ 25 ದೇಶ ಸುತ್ತಿದ್ದೇನೆ. ಆಯಾ ದೇಶಗಳ ಪರಂಪರೆ, ಜೀವನ ಶೈಲಿ, ವಾಸ್ತುಶಿಲ್ಪ, ಕಲೆ, ಸಾಹಿತ್ಯ ಎಲ್ಲವನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಇನ್ನು ನೋಡಬೇಕಾದ ನೂರಾರು ದೇಶಗಳಿವೆ. ಲಂಡನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹೀಗೆ ಪಟ್ಟಿ ಬೆಳೆಯುತ್ತದೆ. ಚಿತ್ರೀಕರಣಕ್ಕಾಗಿ ಯೂರೋಪ್ ದೇಶಗಳಿಗೆ ಹೋಗಿದ್ದೇನೆ, ಆದ್ರೆ ಪ್ರವಾಸಕ್ಕೆ ಹೋಗಬೇಕು, ಸಾಕಷ್ಟು ಸಮಯ ಕಳೆಯಬೇಕು ಎಂದು ಪ್ರಣೀತಾ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೊನೆಯದಾಗಿ 'ಧುರಂಧರ್'-2 ಸಿನಿಮಾ ನೋಡಿದ್ದೆ. ಮಕ್ಕಳು ಇರುವುದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದು ಕಮ್ಮಿ ಆಗಿದೆ. ಮುಂದೆ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು. ಸದ್ಯಕ್ಕೆ ಜಾಹೀರಾತುಗಳಲ್ಲಿ ನಟಿಸುತ್ತೇನೆ. ಅದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಮಕ್ಕಳ ಜೊತೆ ಇದ್ದುಕೊಂಡೆ ಒಂದೆರಡು ಗಂಟೆಗಳಲ್ಲಿ ಜಾಹೀರಾತುಗಳ ಚಿತ್ರೀಕರಣ ಮುಗಿಸಬಹುದು. ಮೊದಲೆಲ್ಲಾ ಜಾಹೀರಾತು ಚಿತ್ರೀಕರಣಕ್ಕಾಗಿ ಮುಂಬೂಗೆ ಹೋಗಬೇಕಿತ್ತು. ಈಗ ಅಷ್ಟೆಲ್ಲಾ ಪ್ರಾಯಾಸ ಪಡುವ ಅವಶ್ಯಕತೆಯಿಲ್ಲ. ವಿಡಿಯೋದಲ್ಲಿ ಮಾತನಾಡಿ ಉತ್ಪನ್ನಗಳ ಪ್ರಚಾರ ಮಾಡಬಹುದು. ಆಧುನಿಕ ತಂತ್ರಜ್ಞಾನ, ಸೌಲಭ್ಯಗಳು ಇದಕ್ಕೆ ವರವಾಗಿದೆ. ಸದ್ಯದ ಮಟ್ಟಿಗೆ ಮಕ್ಕಳು ಮೊದಲ ಆದ್ಯತೆ, ಸಿನಿಮಾ ಆಮೇಲೆ ಎಂದು ಪ್ರಣೀತಾ ವಿವರಿಸಿದ್ದಾರೆ.
'ರಾಮನ ಅವತಾರ' ಕನ್ನಡದಲ್ಲಿ ಪ್ರಣೀತಾ ನಟಿಸಿದ ಕೊನೆಯ ಸಿನಿಮಾ. 16 ವರ್ಷಗಳ ಹಿಂದೆ 'ಪೊರ್ಕಿ' ಸಿನಿಮಾ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಬಾಲಿವುಡ್ ಅಂಗಳದಲ್ಲಿ ಕೂಡ ಮಿಂಚಿ ಬಂದಿದ್ದಾರೆ.


Click it and Unblock the Notifications