ಗಂಡಭೇರುಂಡ ಕಸೂತಿ ಮೈಸೂರು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಿಂಚು; ಕರ್ನಾಟಕದ ಪರಂಪರೆ, ಸಂಸ್ಕೃತಿ ಮೆರಗು
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಂಪತಿ ಮದುವೆ ಸಂಭ್ರಮಾಚರಣೆ ಬಹುತೇಕ ಮುಕ್ತಾಯವಾಗಿದೆ. ಹೈದರಾಬಾದ್‌ನಲ್ಲಿ ನಿನ್ನೆ(ಮಾರ್ಚ್ 4) ಸಂಜೆ ಅದ್ಧೂರಿಯಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿತ್ತು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೆಲೆಬ್ರೆಟಿಗಳ ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಭಾಗಿ ಆಗಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ. ಕರ್ನಾಟಕ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಕೂಡ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ರಿಸೆಪ್ಷನ್ ಪಾರ್ಟಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ವಿಜಯ್, ರಶ್ಮಿಕಾ ಮಿಂಚಿದ್ದು ವಿಶೇಷವಾಗಿತ್ತು. ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆಯಲ್ಲಿ ರಶ್ಮಿಕಾ ಕಂಗೊಳಿಸಿದರು. ಉದ್ದನೆಯ ಬಿಳಿ ಕುರ್ತಾ ಹಾಗೂ ಪಂಚೆ ಧರಿಸಿ ವಿಜಯ್ ಕಾಣಿಸಿಕೊಂಡಿದ್ದರು. ಕೊಡಗಿನ ಬೆಡಗಿ ರಶ್ಮಿಕಾ ಉಟ್ಟಿದ್ದ ಸೀರೆಯ ವಿಶೇಷತೆಗಳ ಬಗ್ಗೆ ಭಾರೀ ಚರ್ಚೆ ನಡೀತಿದೆ. ಶ್ರೀಮಂತ ಕೊಡವ ಪರಂಪರೆಯನ್ನು ತಮ್ಮ ವೇಷಭೂಷಣದಲ್ಲಿ ರಶ್ಮಿಕಾ ಪ್ರದರ್ಶಿಸಿದ್ದಾರೆ.

ಸಾಮಾನ್ಯವಾಗಿ ತಾರೆಯರು ಮದುವೆ ಸಮಾರಂಭಗಳಲ್ಲಿ ಅದರಲ್ಲೂ ಮುಖ್ಯವಾಗಿ ಆರತಕ್ಷತೆಗೆ ಡಿಸೈನರಿ ಸೀರೆ ಅಥವಾ ಲೆಹಂಗಾದಲ್ಲಿ ಮಿಂಚುತ್ತಾರೆ. ರಶ್ಮಿಕಾ ತಮ್ಮ ಸಂಸ್ಕೃತಿಯನ್ನು ಮರೆಯಲಿಲ್ಲ. ಸಾಂಪ್ರದಾಯಿಕ ಮೈಸೂರು ಸಿಲ್ಕ್ ಉಟ್ಟು ಮೋಡಿ ಮಾಡಿದ್ದರು. ಚಿನ್ನದ ಬಣ್ಣದ ಜರಿ ಹೊಂದಿದ್ದ ಕೆಂಪು ಸೀರೆ ಸಾನ್ವಿ ಅಂದ ಹೆಚ್ಚಿಸಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಆ ಸೀರೆಯ ವಿಶೇಷತೆ ಏನು ಎನ್ನುವುದು ಗೊತ್ತಾಗುತ್ತದೆ.
ರಶ್ಮಿಕಾ ಉಟ್ಟಿದ್ದ ಕೆಂಪು ಬಣ್ಣದ ಸೀರೆಯಲ್ಲಿ ಕಪ್ಪು ಹಾಗೂ ಚಿನ್ನದ ಬಣ್ಣದ ಬಾರ್ಡರ್ ವಿಶೇಷವಾಗಿತ್ತು. ಕರ್ನಾಟಕ ರಾಜ್ಯ ಲಾಂಛನ ಗಂಡಭೇರುಂಡ ಪಕ್ಷಿಯ ಚಿಹ್ನೆಯನ್ನು ಕಸೂತಿ ಮಾಡಲಾಗಿತ್ತು. ಗಂಡಭೇರುಂಡ ಶಕ್ತಿ ಮತ್ತು ಸಂರಕ್ಷಣೆಯ ಸಂಕೇತವಾಗಿದ್ದು, ಮೈಸೂರು ಒಡೆಯರು ಹಾಗೂ ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವಾಗಿದೆ.
ಜೇಡ್ ಬೈ ಎಂಕೆ ಚಿತ್ರದ ಕಲಾತ್ಮಕ ನಿರ್ದೇಶಕಿ ಮೋನಿಕಾ ಶಾ ರಶ್ಮಿಕಾ ಸೀರೆ ಡಿಸೈನ್ ಮಾಡಿದ್ದರು ಎಂದು ವರದಿಯಾಗಿದೆ. ರಶ್ಮಿಕಾ ತೊಟ್ಟಿದ್ದ ಕುಪ್ಪುಸ ಹಿಂಬದಿಯಲ್ಲಿ ಕೊಡವ ಚಿಹ್ನೆಯನ್ನು ಗಮನಿಸಬಹುದು. ಕೊಡಗಿನ ಸಂಸ್ಕೃತಿ, ವೀರತ್ವ ಮತ್ತು ಹೆಮ್ಮೆಯ ಸಂಕೇತ ಓಡಿ ಕತ್ತಿ (ಮಚ್ಚು), ಪೀಚೆ ಕತ್ತಿ (ಕಠಾರಿ) ಮತ್ತು ಕೋವಿ (ಬಂದೂಕು) ಒಳಗೊಂಡ ಕೊಡವ ಚಿಹ್ನೆಯ ಎದ್ದು ಕಾಣುತ್ತಿತ್ತು.
ದೇವಸ್ಥಾನದ ಶೈಲಿಯ ಚಿನ್ನಾಭರಣ ಧರಿಸಿ ರಶ್ಮಿಕಾ ಮಿಂಚಿದ್ದರು. ಅದಕ್ಕೊಪ್ಪುವ ಕಿವಿಯೋಲೆ, ಕೈಬಳೆ, ಉಂಗುರ, ವಡ್ಯಾಣ ಹೀಗೆ ಬಹಳ ವಿಶೇಷವಾಗಿ ಕೊಡಗಿನ ಚೆಲುವೆ ಸಿಂಗಾರಗೊಂಡಿದ್ದರು. ಅಭಿಮಾನಿಗಳು ರಶ್ಮಿಕಾ ಲುಕ್ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿಕ್ಕಾಪಟ್ಟೆ ಅದ್ಧೂರಿಯಾಗಿ ವಿರೋಷ್ ದಂಪತಿ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ. ಚಿರಂಜೀವಿ, ರಾಮ್‌ಚರಣ್- ದಂಪತಿ, ಅಲ್ಲು ಅರ್ಜುನ್, ರವಿತೇಜಾ, ನಾಗಾರ್ಜನ, ವೆಂಕಟೇಶ್, ರಾಣ ದಗ್ಗುಬಾಟಿ, ಶ್ರೀಲೀಲಾ, ಮೃಣಾಲ್ ಠಾಕೂರ್ ಹೀಗೆ ಟಾಲಿವುಡ್ ಸ್ಟಾರ್ ನಟ- ನಟಿಯರು ಆರತಕ್ಷತೆ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದರು.
ಭಾರೀ ಭದ್ರತೆ ನಡುವೆ ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಫೆಬ್ರವರಿ 26ರಂದು ಉದಯ್‌ಪುರದಲ್ಲಿ ವಿರೋಷ್ ಜೋಡಿಯ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ನಾಲ್ಕೈದು ದಿನಗಳಿಂದ ಜೋಡಿಯ ಮದುವೆ ಸಂಭ್ರಮಾಚರಣೆ ನಡೆದಿತ್ತು. 'ಗೀತಗೋವಿಂದಂ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಜೋಡಿ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಈಗ ಹಸೆಮಣೆ ಏರಿದ್ದಾರೆ.
'ರಣಬಾಲಿ' ಎಂಬ ಚಿತ್ರದಲ್ಲಿ ರಶ್ಮಿಕಾ- ವಿಜಯ್ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಐತಿಹಾಸಿಕ ಕಥಹಂದರದ ಚಿತ್ರದಲ್ಲಿ ಗಂಡ-ಹೆಂಡತಿ ಆಗಿ ಜೋಡಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇತ್ತೀಚೆಗೆ ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಆಗಿ ಹಿಟ್ ಆಗಿತ್ತು.


Click it and Unblock the Notifications











