ಅಬ್ಬಬ್ಬಾ.. ರಶ್ಮಿಕಾ ಉಟ್ಟಿದ್ದ ಅದೊಂದು ಸೀರೆಯಿಂದ 10 ಕೋಟಿ ರೂ. ವ್ಯಾಪಾರ ಆಗಿದ್ದು ನಿಜವೇ?
ಸಮಾಜದ ಮೇಲೆ ಸಿನಿಮಾ ಪ್ರಭಾವ, ಸಿನಿಮಾ ತಾರೆಯರ ಪ್ರಭಾವ ಯಾವ ಮಟ್ಟಕ್ಕೆ ಇರುತ್ತದೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ಕೆಲವೊಮ್ಮೆ ಸಿನಿಮಾಗಳಿಂದ ಕೆಟ್ಟ ಸಂದೇಶ ಕೂಡ ರವಾನೆ ಆಗುತ್ತದೆ. ಸಿನಿಮಾ ತಾರೆಯರು ಗುಟ್ಕಾ, ಜೂಜಿಗೆ ಸಂಬಂಧಿಸಿದಂತೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು, ತೆರೆಮೇಲೆ ಬೀಡಿ, ಸಿಗರೇಟ್ ಸೇದುವುದು ಜನರನ್ನು ಪ್ರೇರೇಪಿಸುತ್ತದೆ.
ಇನ್ನು ತಾರೆಯರು ಧರಿಸುವ ಬಟ್ಟೆ, ಆಕ್ಸಸರೀಸ್ ಎಲ್ಲವೂ ಟ್ರೆಂಡ್ ಆಗುತ್ತದೆ. ಅದನ್ನು ಸಾಕಷ್ಟು ಜನ ಫಾಲೋ ಮಾಡುತ್ತಾರೆ. ಇದರಿಂದ ವ್ಯಾಪಾರಿಗಳಿಗೂ ಭರ್ಜರಿ ಲಾಭವಾಗುತ್ತದೆ. ಸದ್ಯ ರಶ್ಮಿಕಾ ಮಂದಣ್ಣ ಉಟ್ಟಿದ್ದ ಅದೊಂದು ಸೀರೆಯಿಂದ ದೇಶಾದ್ಯಂತ ಕೋಟ್ಯಂತರ ರೂ. ಮೌಲ್ಯದ ವ್ಯಾಪಾರ ನಡೆದಿದೆ. ಇದರಿಂದ ಸೀರೆ ತಯಾರಕರು, ಮಾರಾಟಗಾರರಿಗೆ ಭರ್ಜರಿ ಆದಾಯ ಬಂದಿದೆ. 4 ತಿಂಗಳ ಹಿಂದೆ ರಶ್ಮಿಕಾ ಹಸಮಣೆ ಏರಿದ್ದರು. ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಉಟ್ಟಿದ್ದರು. ಅದು ಈಗ ಟ್ರೆಂಡ್ ಆಗಿದೆ.

ಕಪ್ಪು ಬಾರ್ಡರ್ ಇರುವ ಕಡು ಕೆಂಪು ಬಣ್ಣದ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಅಂದು ಕಂಗೊಳಿಸಿದ್ದರು. ಸಾಮಾನ್ಯವಾಗಿ ಶ್ರೀಮಂತರ ಮನೆ ಆರತಕ್ಷತೆ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಲೆಹಂಗಾ ಅಥವಾ ಡಿಸೈನರ್ ಸೀರೆ ಉಡುವುದು ಹೆಚ್ಚು. ಆದರೆ ರಶ್ಮಿಕಾ ಕೊಡವ ಸಂಪ್ರದಾಯ ಮರೆಯದೇ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಕಪ್ಪು ಬಾರ್ಡರ್ ಹಾಗೂ ಕೆಂಪು ಬಣ್ಣದ ಸೀರೆ ಅಷ್ಟೇನು ಜನಪ್ರಿಯ ಅಲ್ಲ. ಆದರೆ ರಶ್ಮಿಕಾ ಆ ಕಾಂಬಿನೇಷನ್ ಸೀರೆ ಉಟ್ಟಿದ್ದು ನೋಡಿ ಸಾಕಷ್ಟು ಜನ ಮಹಿಳೆಯರು ಅದೇ ರೀತಿಯ ಸೀರೆಗಳನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ.
ರಾರಾಜಿನಗರದ ಬಟ್ಟೆ ವ್ಯಾಪಾರಿ ಒಬ್ಬರು ಕಪ್ಪು ಬಣ್ಣದ ಬಾರ್ಡರ್ ಹಾಗೂ ಕೆಂಪು ಬಣ್ಣದ ಕಾಂಬಿನೇಷನ್ ಸೀರೆ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಸೀರೆ ಸೇಲ್ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ಆ ಕಾಂಬಿನೇಷನ್ ಸೀರೆ ಬಗ್ಗೆ ವ್ಯಾಪಾರಿ ಮಾತನಾಡಿರುವುದು ವೈರಲ್ ಆಗಿದೆ. ಈ ಕಾಂಬಿನೇಷನ್ 10 ಸಾವಿರ ಸೀರೆಗಳನ್ನು ನಾವೇ ಮಾರಾಟ ಮಾಡಿದ್ದೇವೆ. ದೇಶಾದ್ಯಂತ ಲಕ್ಷಾಂತರ ಸೀರೆಗಳು ಮಾರಾಟ ಆಗಿ ಕೋಟಿ ಕೋಟಿ ಆದಾಯ ಗಳಿಸಿರಬಹುದು ಎಂದು ತಿಳಿಸಿದ್ದಾರೆ.
ಈ ಕಲರ್ ಕಾಂಬಿನೇಷನ್ ಸೀರೆ ಯಾರು ಮೊದಲು ಉಡುತ್ತಿರಲಿಲ್ಲ. ರಶ್ಮಿಕಾ ಮಂದಣ್ಣ ತಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ಉಟ್ಟಿದ್ದರು. ಆ ಬಳಿಕ ಇದು ಟ್ರೆಂಡ್ ಆಗಿದೆ. ಹಾಗಾಗಿ ಸಾಕಷ್ಟು ಮಹಿಳೆಯರು ಬಂದು ಇಂತಹ ಸೀರೆಗಳಿಗಾಗಿ ಹುಡುಕಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಕೆಲವರು ಇದು ನಿಜಾನಾ? ಸಾಧ್ಯವೇ ಇಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಫೆಬ್ರವರಿ 26ರಂದು ರಾಜಸ್ಥಾನದ ಖಾಸಗಿ ರೆಸಾರ್ಟ್‌ನಲ್ಲಿ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆ ನಡೆದಿತ್ತು. ಬಳಿಕ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಏರ್ಪಡಿಸಿದ್ದರು. ತೆಲುಗು ಕಲಾವಿದರ ಜೊತೆಗೆ ತಮಿಳು, ಕನ್ನಡ ಹಾಗೂ ಬಾಲಿವುಡ್‌ನ ಕೆಲ ತಾರೆಯರು ಕಾರ್ಯಕ್ರಮದಲ್ಲಿ ಭಾಗಿ ಆಗಿ ನವಜೋಡಿಗೆ ಶುಭ ಕೋರಿದ್ದರು.
ಸದ್ಯ ರಶ್ಮಿಕಾ ನಟನೆಯ 'ಕಾಕ್‌ಟೇಲ್'-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಪತಿ ವಿಜಯ್ ದೇವರಕೊಂಡ ಜೊತೆ 'ರಣಬಾಲಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ವರ್ಷದ ಕೊನೆಗೆ ಈ ಸಿನಿಮಾ ತೆರೆಗೆ ಬರಲಿದೆ. ಇದು ಅವರಿಬ್ಬರು ಒಟ್ಟಿಗೆ ನಟಿಸುತ್ತಿರುವ 3ನೇ ಸಿನಿಮಾ.


Click it and Unblock the Notifications