ತೂಕ ಇಳಿಸಿ ತೆಳ್ಳಗಾದ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಿಷಾ ಗೌಡ; ಡಯೆಟ್ ಸೀಕ್ರೆಟ್ ರಿವೀಲ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮಿಂಚಿದ್ದ ರಿಷಾ ಗೌಡ ಈಗ ಸಖತ್ ಸ್ಲಿಮ್ ಆಗಿದ್ದಾರೆ. ದೊಡ್ಮನೆ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ರಿಷಾ ಈಗ ಫಿಟ್ನೆಸ್ ವಿಚಾರದಲ್ಲೂ ಅವರು ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಷಾ ತಮ್ಮ ಅಚ್ಚರಿಯ ತೂಕ ಇಳಿಕೆಯ ಗುಟ್ಟನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಸಿನಿಮಾ ಹಾಗೂ ಕಿರುತೆರೆ ತಾರೆಯರು ಎಂದರೆ ಯಾವಾಗಲೂ ಫಿಟ್ ಆಗಿರಬೇಕು ಎಂಬ ನಿಯಮವಿದೆ. ಆದರೆ ಫಿಟ್ನೆಸ್ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಿಷಾ ಗೌಡ ಅವರು ಕೇವಲ 35 ದಿನಗಳಲ್ಲಿ ಬರೋಬ್ಬರಿ 4 ಕೆಜಿ ತೂಕ ಇಳಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಕೊಂಚ ದಪ್ಪಗಿದ್ದ ರಿಷಾ ಈಗ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಈ ಟ್ರಾನ್ಸ್ಫಾರ್ಮೇಷನ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಮನೆಯಲ್ಲೇ ಇದ್ದುಕೊಂಡು ಸರಳ ಆಹಾರ ಪದ್ಧತಿಯ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ರಿಷಾ ಅವರ ಈ ಎಕ್ಸ್ಕ್ಲೂಸಿವ್ ಡಯಟ್ ಪ್ಲಾನ್ ವಿವರ ಇಲ್ಲಿದೆ ನೋಡಿ.
ಬೆಳಗ್ಗೆ ಆರೋಗ್ಯಕರ ಪಾನೀಯ...
ರಿಷಾ ಗೌಡ ದಿನ ಆರಂಭವಾಗುವುದು ಆರೋಗ್ಯಕರ ಪಾನೀಯದೊಂದಿಗೆ. ಅವರು ಬೆಳಿಗ್ಗೆ ಎದ್ದ ತಕ್ಷಣ ಜೀರಿಗೆ ನೀರು, ಶುಂಠಿ ನೀರು ಅಥವಾ ಆಮ್ಲಾ (ನೆಲ್ಲಿಕಾಯಿ) ಜ್ಯೂಸ್ ಕುಡಿಯುತ್ತಾರೆ. ಇದು ದೇಹದ ಮೆಟಾಬಾಲಿಸಂ ಹೆಚ್ಚಿಸಲು ಮತ್ತು ಚರ್ಮದ ಕಾಂತಿ ಕಾಪಾಡಲು ಸಹಾಯ ಮಾಡುತ್ತದೆ.
ವೈವಿಧ್ಯಮಯ ಉಪಹಾರ...
ಬೆಳಗಿನ ತಿಂಡಿಯ ವಿಚಾರದಲ್ಲಿ ರಿಷಾ ಪಕ್ಕಾ ಪ್ಲಾನ್ ಹೊಂದಿದ್ದಾರೆ. ಅವರ ಉಪಹಾರದ ಪಟ್ಟಿ ಹೀಗಿದೆ:
-ಸೋಮವಾರ: ಆರೋಗ್ಯಕ್ಕೆ ಉತ್ತಮವಾದ ರಾಗಿ ದೋಸೆ ಅಥವಾ ರಾಗಿ ಅಂಬಲಿ.
-ಮಂಗಳವಾರ: ಕಡಲೆ ಹಿಟ್ಟಿನ ದೋಸೆ ಅಥವಾ ಅಕ್ಕಿ ರೊಟ್ಟಿ. ಇಲ್ಲಿ ಬಿಳಿ ಉಪ್ಪಿನ ಬದಲಿಗೆ ಪಿಂಕ್ ಸಾಲ್ಟ್ ಬಳಸುವುದು ಇವರ ಗುಟ್ಟು.
-ಬುಧವಾರ: ಪ್ರೋಟೀನ್ ಹೆಚ್ಚಿರುವ ಪಾಲಕ್, ಮಶ್ರೂಮ್ ಅಥವಾ ಬ್ರೊಕೊಲಿ ಆಮ್ಲೆಟ್.
-ಗುರುವಾರ: ಬೇಯಿಸಿದ ಮೊಟ್ಟೆಯ ಬಿಳಿ ಭಾಗ ಅಥವಾ ವಾರಕ್ಕೊಮ್ಮೆ ಕಾರ್ನ್ ಫ್ಲೇಕ್ಸ್.
-ಇತರೆ: ಹಣ್ಣುಗಳು, ಸ್ಲಿಮ್ ಮಿಲ್ಕ್ ಮತ್ತು ಚಿಯಾ ಸೀಡ್ಸ್ ಬಳಸಿದ ಸ್ಮೂತಿಗಳನ್ನು ಇವರು ಸೇವಿಸುತ್ತಾರೆ.
ಮಧ್ಯಾಹ್ನ ಊಟದ ಪ್ರಮಾಣ
ಇನ್ನು ಮಧ್ಯಾಹ್ನದ ಊಟದಲ್ಲಿ ರಿಷಾ ಅನ್ನದ ಪ್ರಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಒಂದು ಕಪ್ ಅನ್ನ ತಿಂದರೆ, ಅದರ ಜೊತೆಗೆ ಎರಡು ಕಪ್ ದಾಲ್, ರಾಜ್ಮಾ ಅಥವಾ ತರಕಾರಿ ಸಾಂಬಾರ್ ಇರಲೇಬೇಕು. ಬಿಳಿ ಅನ್ನದ ಬದಲಿಗೆ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಬಳಸುವುದು ಇವರ ಸೀಕ್ರೆಟ್. ಜೀರ್ಣಕ್ರಿಯೆಗೆ ಸಹಾಯ ಮಾಡಲು ಸೌತೆಕಾಯಿ ಮತ್ತು ಕ್ಯಾರೆಟ್ ಸಲಾಡ್ ಅನ್ನು ಕಡ್ಡಾಯವಾಗಿ ಬಳಸುತ್ತಾರೆ.
ಸಂಜೆ ಸ್ನ್ಯಾಕ್ಸ್ ಮತ್ತು ಕ್ರೇವಿಂಗ್ಸ್...
ಸಂಜೆ ಹೊತ್ತು ಹಸಿವಾದಾಗ ರಿಷಾ ಜಂಕ್ ಫುಡ್ ತಿನ್ನುವುದಿಲ್ಲ. ಬದಲಾಗಿ ಹುರಿದ ಮಖಾನಾ, ಮೊಳಕೆ ಬರಿಸಿದ ಕಾಳುಗಳು ಅಥವಾ ಹಣ್ಣುಗಳನ್ನು ಸೇವಿಸುತ್ತಾರೆ. ಒಂದು ವೇಳೆ ಬಾಳೆಹಣ್ಣು ತಿಂದರೆ, ಹೊಟ್ಟೆ ಉಬ್ಬರವಾಗದಿರಲು ಅದರ ಮೇಲೆ ಸ್ವಲ್ಪ ಮೆಣಸಿನ ಪುಡಿ ಉದುರಿಸಿಕೊಳ್ಳುತ್ತಾರೆ.
ರಾತ್ರಿ ಊಟ, ನಡಿಗೆಯ ಮ್ಯಾಜಿಕ್...
ರಾತ್ರಿ ಊಟ ಯಾವಾಗಲೂ ಹಗುರವಾಗಿರಬೇಕು ಎಂಬುದು ರಿಷಾ ಅವರ ಪಾಲಿಸಿ. ಡಿನ್ನರ್‌ಗೆ ಇವರು ಟೋಫು ಸಲಾಡ್, ಚೀಸ್ ಆಮ್ಲೆಟ್ ಅಥವಾ ಗ್ರಿಲ್ಡ್ ಚಿಕನ್ ಸೇವಿಸುತ್ತಾರೆ. ದಿನವೂ ಚಪಾತಿ ತಿನ್ನುವುದರಿಂದ ದೇಹಕ್ಕೆ ಉಷ್ಣವಾಗುತ್ತದೆ ಎಂದು ಅವರು ಅದನ್ನು ಅವಾಯ್ಡ್ ಮಾಡುತ್ತಾರೆ. ವ್ಯಾಯಾಮದ ವಿಚಾರಕ್ಕೆ ಬಂದರೆ, ಜಿಮ್ ಸಾಧ್ಯವಾಗದಿದ್ದರೂ ದಿನಕ್ಕೆ ಕನಿಷ್ಠ 30 ನಿಮಿಷ ವೇಗವಾಗಿ ನಡೆಯುತ್ತಾರೆ.
ಕಟ್ಟುನಿಟ್ಟಿನ ನಿಯಮಗಳು...
ತೂಕ ಇಳಿಸುವ ಸಮಯದಲ್ಲಿ ರಿಶಾ ಕೆಲವು ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಸಕ್ಕರೆ, ಸಿಹಿ ಪದಾರ್ಥಗಳು, ಕೇಕ್, ಪಿಜ್ಜಾ ಮತ್ತು ಬರ್ಗರ್ಗಳನ್ನು ಅವರು ಮುಟ್ಟುವುದೇ ಇಲ್ಲ. ಸಿಹಿ ತಿನ್ನಲೇಬೇಕು ಅನ್ನಿಸಿದರೆ ಸಕ್ಕರೆ ಬದಲು ಬೆಲ್ಲ ಬಳಸಿ ಕ್ಯಾರೆಟ್ ಹಲ್ವಾ ಮಾಡಿ ಸವಿಯುತ್ತಾರೆ. ರಿಶಾ ಗೌಡ ಅವರ ಈ ಡಯಟ್ ಪ್ಲಾನ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.


Click it and Unblock the Notifications











