ಶ್ರದ್ಧಾ ಕಪೂರ್ ಫಿಟ್ನೆಸ್ ಸೀಕ್ರೆಟ್: ಸದಾ ಯಂಗ್ ಅಂಡ್ ಎನರ್ಜಿಟಿಕ್ ಆಗಿರಲು ಆಕೆಯ ಡಯೆಟ್ ಪ್ಲಾನ್
ಗ್ಲಾಮರ್ ಪ್ರಪಂಚದ ಮಿಂಚಿನ ಲೋಕದಲ್ಲಿ ಸದಾ ಫ್ರೆಶ್ ಆಗಿ ಕಾಣುವುದು ಸುಲಭದ ಮಾತಲ್ಲ. ಝಗಮಗ ಬೆಳಕಿನ ನಡುವೆ, ನಟಿಯರು ತಮ್ಮ ತ್ವಚೆ ಮತ್ತು ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನೆಲ್ಲಾ ಕಷ್ಟ ಪಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸ್ಟಾರ್ ನಟಿಯರು ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಕಠಿಣವಾದ ವರ್ಕೌಟ್ ಮತ್ತು ಹಸಿವಿನಿಂದ ಇರೋ ಡಯಟ್ ಪ್ಲಾನ್ ಮಾತ್ರ.
ಕೆಲವು ನಟಿಮಣಿಯರು ಯಾವುದೇ ಆರ್ಭಟವಿಲ್ಲದೆ, ನೈಸರ್ಗಿಕವಾಗಿಯೇ ತಮ್ಮ ಅಂದವನ್ನು ಕಾಪಾಡಿಕೊಳ್ಳುತ್ತಾರೆ. ನಗುಮುಖದ ಈ ಸುಂದರಿಯ ಫಿಟ್ನೆಸ್ ಮಂತ್ರ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ. ಇಂದಿನ ಕಾಲದಲ್ಲಿ ಎಲ್ಲರೂ ಜಂಕ್ ಫುಡ್ ಹಿಂದೆ ಬಿದ್ದಿದ್ದರೆ, ಈ ಸ್ಟಾರ್ ನಟಿ ಮಾತ್ರ ಮನೆಯೂಟಕ್ಕೆ ಫಿದಾ ಆಗಿದ್ದಾರೆ.

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸದಾ ಎನರ್ಜಿಟಿಕ್ ಆಗಿ ಇರೋದು ಹೇಗೆ? ಅವರ ಆ ಸ್ಲಿಮ್ ಅಂಡ್ ಟ್ರಿಮ್ ಬಾಡಿಯ ಹಿಂದಿರುವ ಶ್ರಮ ಎಷ್ಟು? ಇವೆಲ್ಲವನ್ನೂ ತಿಳಿಯುವ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ.
ಸಿಂಪಲ್ ಡಯಟ್ ಪ್ಲಾನ್
ಶ್ರದ್ಧಾ ಕಪೂರ್ ಅವರಿಗೆ ಮನೆಯೂಟ ಎಂದರೆ ಪಂಚಪ್ರಾಣ. ಅವರು ಹೆಚ್ಚಾಗಿ ಸಸ್ಯಹಾರಿ ಆಹಾರವನ್ನೇ ಇಷ್ಟಪಡುತ್ತಾರೆ. ಬೇಳೆ ಸಾರು, ಪಲ್ಯ ಹಾಗೂ ಅನ್ನ ಅವರ ದಿನನಿತ್ಯದ ಮೆನು. ಎಷ್ಟೇ ದೊಡ್ಡ ಸ್ಟಾರ್ ಆದರೂ ಶ್ರದ್ಧಾ ಮಾತ್ರ ಹಸಿರು ತರಕಾರಿಗಳನ್ನು ತಿನ್ನಲು ಮರೆಯುವುದಿಲ್ಲ. ಅವರ ದಿನ ಶುರುವಾಗುವುದೇ ಪೋಹಾ, ಉಪ್ಪಿಟ್ಟು ಅಥವಾ ಸಾಬುದಾನಿ ಕಿಚಡಿಯಂತಹ ಸಾಂಪ್ರದಾಯಿಕ ಉಪಹಾರದೊಂದಿಗೆ.
ಇನ್ನು ಶ್ರದ್ಧಾ ಅವರ ಒಂದು ವಿಶೇಷ ರೂಢಿ ಎಂದರೆ ಅದು 'ಅರ್ಲಿ ಡಿನ್ನರ್'. ರಾತ್ರಿ 7:30 ರ ಒಳಗಾಗಿ ಅವರು ತಮ್ಮ ಊಟವನ್ನು ಮುಗಿಸುತ್ತಾರೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ ಎಂಬುದು ಅವರ ನಂಬಿಕೆ. ಅತಿಯಾದ ಸಕ್ಕರೆ ಅಂಶ ಇರುವ ಪಾನೀಯಗಳ ಬದಲಿಗೆ ಎಳನೀರನ್ನು ಕುಡಿಯುವುದು ಇವರ ಆರೋಗ್ಯದ ಗುಟ್ಟು. ಸ್ನಾಕ್ಸ್ ಬೇಕೆನಿಸಿದಾಗ ಒಣ ಹಣ್ಣುಗಳನ್ನು (Dry fruits) ಸೇವಿಸುತ್ತಾರೆ.
ಚರ್ಮಕ್ಕೆ ಕೆಮಿಕಲ್ ಬೇಡವೇ ಬೇಡ
ಚರ್ಮದ ಆರೈಕೆ ವಿಷಯಕ್ಕೆ ಬಂದರೆ ಶ್ರದ್ಧಾ ತುಂಬಾ ಸರಳ. ಅವರು ಹತ್ತಾರು ಕ್ರೀಮ್‌ಗಳನ್ನು ಬಳಸುವ ಬದಲು ಕೇವಲ ಒಂದು ಅಥವಾ ಎರಡು ಅಗತ್ಯ ಪ್ರಾಡಕ್ಟ್‌ಗಳನ್ನು ಮಾತ್ರ ಬಳಸುತ್ತಾರೆ. ಇವರ ಬ್ಯೂಟಿ ಕಿಟ್‌ನಲ್ಲಿ ಸನ್ಸ್ಕ್ರೀನ್ ಇಲ್ಲದೆ ಮತ್ಯಾವುದೂ ಇರುವುದಿಲ್ಲ. ಹೊರಗಡೆ ಹೋಗುವಾಗ ಸನ್ಸ್ಕ್ರೀನ್ ಹಚ್ಚುವುದನ್ನು ಅವರು ಎಂದಿಗೂ ಮರೆಯುವುದಿಲ್ಲ.
ಸಿನಿಮಾ ಚಿತ್ರೀಕರಣ ಮುಗಿಸಿ ಎಷ್ಟೇ ಸುಸ್ತಾಗಿ ಮನೆಗೆ ಬಂದರೂ, ಮುಖದ ಮೇಲಿರುವ ಮೇಕಪ್ ತೆಗೆಯದೆ ಅವರು ಮಲಗುವುದೇ ಇಲ್ಲ. ಮುಖದ ಕಾಂತಿಗಾಗಿ ಇವರು ಎಸೆನ್ಷಿಯಲ್ ಆಯಿಲ್‌ಗಳನ್ನು ಬಳಸುತ್ತಾರೆ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡುವುದು ಕೂಡ ಅವರ ಗ್ಲೋಯಿಂಗ್ ಸ್ಕಿನ್ ಹಿಂದಿರುವ ರಹಸ್ಯ.
ಸ್ಪೋರ್ಟ್ಸ್ ಕೂಡ ಇಷ್ಟ
ಶ್ರದ್ಧಾ ಕಪೂರ್ ಅವರಿಗೆ ವರ್ಕೌಟ್ ಅಂದ ಕೂಡಲೇ ಬೋರ್ ಎನಿಸುವುದಿಲ್ಲ. ಅವರು ಒಂದೇ ರೀತಿಯ ವ್ಯಾಯಾಮಕ್ಕೆ ಅಂಟಿಕೊಳ್ಳುವುದಿಲ್ಲ. ಜಿಮ್‌ನಲ್ಲಿ ಕಾರ್ಡಿಯೋ ಮಾಡುವುದರ ಜೊತೆಗೆ ಅವರಿಗೆ ಕ್ರೀಡೆಗಳೆಂದರೆ ತುಂಬಾ ಇಷ್ಟ. ಬಿಡುವು ಸಿಕ್ಕಾಗ ವಾಲಿಬಾಲ್ ಆಡುವುದು ಅಥವಾ ಸ್ವಿಮ್ಮಿಂಗ್ ಮಾಡುವುದು ಇವರ ಫಿಟ್ನೆಸ್ ಫಾರ್ಮುಲಾ.
ಚಿತ್ರೀಕರಣದ ಬ್ಯುಸಿ ಶೆಡ್ಯೂಲ್ ನಡುವೆಯೂ ಅವರು ಯೋಗ ಮಾಡುವುದನ್ನು ಮರೆಯುವುದಿಲ್ಲ. ಯಾವುದೇ ಕಠಿಣ ಡಯಟ್ ಫಾಲೋ ಮಾಡದಿದ್ದರೂ, ಶಿಸ್ತಿನ ಜೀವನಶೈಲಿ ಅವರನ್ನು ಫಿಟ್ ಆಗಿರಿಸಿದೆ. ಅತಿಯಾದ ಜಿಮ್ ವರ್ಕೌಟ್ ಮಾಡದಿದ್ದರೂ, ಸಕ್ರಿಯವಾಗಿರುವುದು ಇವರ ಶಕ್ತಿಯ ಮೂಲ.


Click it and Unblock the Notifications











