ಸಿಂಹದ ಕಣ್ಣಲ್ಲಿ ಕಣ್ಣಿಟ್ಟು ನೋಡುವುದೇ ರೋಚಕ; ಮಸಾಯಿ ಮರಾ ಸಫಾರಿ ಅನುಭವಗಳನ್ನು ಬಿಚ್ಚಿಟ್ಟ ಸೋನಿಕಾ
ಒತ್ತಡದ ಜೀವನಕ್ಕೆ ಪ್ರವಾಸಕ್ಕಿಂತ ಒಳ್ಳೆ ಪರಿಹಾರ ಇಲ್ಲ. ಹೊಸ ಜಾಗಕ್ಕೆ ಪ್ರವಾಸಕ್ಕೆ ಹೋದಾಗ ಮನಸ್ಸಿಗೆ ಉಲ್ಲಾಸ ಸಿಗುವುದರ ಜೊತೆಗೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಅಲ್ಲಿನ ಸಂಸ್ಕೃತಿ, ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಮಾಹಿತಿ ಸಿಗುತ್ತದೆ. ಅಷ್ಟೇ ಅಲ್ಲ ಅಲ್ಲಿನ ವಿಭಿನ್ನ ಪ್ರಾಣಿ, ಪಕ್ಷಿ, ಪ್ರಕೃತಿಯ ಪರಿಚಯವಾಗುತ್ತದೆ. ಜೀವನದಲ್ಲಿ ಒಮ್ಮೆ ಆದರೂ ಮಸಾಯಿ ಮರಾ ಸಫಾರಿ ಹೋಗಬೇಕು, ಅಲ್ಲಿನ ವನ್ಯಜೀವಿ ಪ್ರಪಂಚವನ್ನು ಹತ್ತಿರದಿಂದ ನೋಡಬೇಕು ಎಂದು ನಟಿ ಸೋನಿಕಾ ಗೌಡ ಹೇಳುತ್ತಾರೆ.
ಕನ್ನಡ ನಟಿ ಸೋನಿಕಾ ಗೌಡ ಇತ್ತೀಚೆಗೆ ಕೀನ್ಯಾದ ಮಸಾಯಿ ಮಾರಾ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ನೇರವಾಗಿ ದುಬೈಗೆ ತೆರಳಿ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಪ್ರಾಣಿ ಪ್ರೇಮಿಯಾಗಿರುವ ಸೋನಿಕಾ ಮಸಾಯಿ ಮಾರಾ ಸಫಾರಿಯನ್ನು ಜೀವನದಲ್ಲಿ ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಆದಷ್ಟು ಬೇಗ ಮತ್ತೆ ಅಲ್ಲಿಗೆ ಹೋಗಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. 'ನಾನೇ ರಾಜಾ', 'ಶತಾಯ ಗತಾಯ' ರೀತಿಯ ಸಿನಿಮಾಗಳಲ್ಲಿ ಆಕೆ ನಟಿಸಿದ್ದರು. ಕೊಂಚ ಬಿಡುವು ಪಡೆದು ಈಗ ಹೊಸದೊಂದು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ಇತ್ತೀಚಿನ ಪ್ರವಾಸದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಸೋನಿಕಾ ಗೌಡ ಸುದೀರ್ಘವಾಗಿ ಮಾತನಾಡಿದ್ದಾರೆ.

ಮಸಾಯಿ ಮಾರಾಗೆ ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡಿದ್ದೆ. ಕಾರಣ ಅಲ್ಲಿ ಮಾತ್ರ ನಾವು ವನ್ಯ ಮೃಗಗಳನ್ನು ಅಷ್ಟು ಹತ್ತಿರದಿಂದ ನೋಡಲು ಸಾಧ್ಯ. ನಾನು ಪ್ರಾಣಿ ಪ್ರೇಮಿ ಹಾಗಾಗಿ ಇಂತಹ ಅವಕಾಶಕ್ಕಾಗಿ ಕಾಯ್ತಿದ್ದೆ ಎಂದು ಸೋನಿಕಾ ಹೇಳಿದ್ದಾರೆ. "ಮಸಾಯಿ ಮಾರಾಗೆ ಹೋಗಲು ಇದು ಸರಿಯಾದ ಸಮಯ. ಅಲ್ಲಿಗೆ ಹೋಗಿ ಬಂದಿದ್ದ ಒಬ್ರು ನನ್ನ ಜೊತೆ ಮಾತನಾಡುತ್ತಾ ಅಲ್ಲಿನ ಸಫಾರಿ ಬಗ್ಗೆ ಹೇಳಿದ್ರು. ಹಾಗಾಗಿ ನಾಲ್ಕೈದು ತಿಂಗಳಿಂದ ಪ್ಲ್ಯಾನ್ ಮಾಡಿ ಸ್ನೇಹಿತರ ಜೊತೆ ಹೋಗಿದ್ದೆ. ಬೇರೆ ಊರುಗಳಿವೆ ನಾವೇ ಪ್ಲ್ಯಾನ್ ಮಾಡಿ ಹೋಗ್ತೀವಿ. ಮಸಾಯಿ ಮಾರಾಗೆ ನಾವೇ ಹೋಗುವುದು ಕಷ್ಟ.. ಒಂದಷ್ಟು ತಂಡಗಳು ಪ್ರವಾಸಿಗರನ್ನು ಅಲ್ಲಿಗೆ ಕರೆದುಕೊಂಡು ಹೋಗ್ತಾರೆ. ಅದೇ ರೀತಿ ಒಂದು ಟ್ರಾವೆಲ್ ಏಜೆನ್ಸಿ ಮೂಲಕ ನಾವು ಹೋಗಿದ್ದೆವು. ಅದ್ಭುತ ಅನುಭವ. ನಮಗೆ ಸಿಕ್ಕ ತಂಡ ಬಹಳ ಉತ್ತಮವಾಗಿತ್ತು" ಎಂದಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಎರಡ್ಮೂರು ವಿಮಾನದ ಬದಲಿಸಿ ಹೋಗಬೇಕಾಯಿತು. ಬೆಳ್ಳಂಬೆಳಗ್ಗೆ 5 ಗಂಟೆಗೆ ಸಫಾರಿಗೆ ತೆರಳಲು ಸಿದ್ಧರಾಗುತ್ತಿದ್ದೆವು, ಅಷ್ಟು ಎಕ್ಸೈಟ್ ಆಗಿ ಇರ್ತಿದ್ವಿ ಎಂದು ಸೋನಿಕಾ ನೆನಪಿಸಿಕೊಂಡಿದ್ದಾರೆ. "ನಾನು ಇದಕ್ಕೂ ಮುನ್ನ ಬಂಡೀಪುರ, ನಾಗರಹೊಳೆ ಸೇರಿದಂತೆ ಕೆಲ ಕಡೆ ಸಫಾರಿ ಹೋಗಿದ್ದೀನಿ. ಆದ್ರೆ ಇಷ್ಟು ಹತ್ತಿರದಲ್ಲಿ ಪ್ರಾಣಿಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಗಿಡ ಮರಗಳ ನಡುವೆ ಹುಲಿ, ಸಿಂಹವನ್ನು ಕೊಂಚ ನೋಡುವುದೇ ಅದ್ಭುತ ಎಂದುಕೊಂಡಿದ್ದ ನನಗೆ ಸಫಾರಿ ಜೀಪ್ ಅಕ್ಕಪಕ್ಕ ಸುಳಿದಾಡುತ್ತಿದ್ದ ಸಿಂಹಗಳನ್ನು ನೋಡಿ ಮೈರೋಮಾಂಚನವಾಗಿತ್ತು. ಬೆಳಗ್ಗೆ ಸಿಂಹ ಎದ್ದು ನಮ್ಮ ಮುಂದೆ ನಡೆದು ಬರುವುದನ್ನು ನೋಡ್ದೆ. ಬಹಳ ಸೇಫ್ಟಿ ಕೂಡ ಇತ್ತು" ಎಂದು ವಿವರಿಸಿದ್ದಾರೆ.
ಸಫಾರಿ ವಾಹನಗಳನ್ನು ನೋಡಿ ಅಲ್ಲಿನ ವನ್ಯ ಜೀವಿಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಹಾಗಾಗಿ ಯಾವುದೇ ಸಮಸ್ಯೆ ಇರಲಿಲ್ಲ. ಓಪನ್ ಜೀಪ್‌ನಲ್ಲಿ ಪ್ರಾಣಿಗಳ ನಡುವೆ ಸುತ್ತಾಡಿದೆ. ಕಣ್ಣಲ್ಲಿ ಕಣ್ಣಿಟ್ಟು ಸಿಂಹವನ್ನು ನೋಡಿದ್ದೇನೆ. ನಾನು ಜೂಗೆ ಹೋಗಿಲ್ಲ. ಅಲ್ಲೇ ಅಷ್ಟು ಹತ್ತಿರದಿಂದ ಪ್ರಾಣಿಗಳನ್ನು ನೋಡಿದ್ದು. ತಾಂಜಾನಿಯಾಗೆ ಹೊಂದಿಕೊಂಡಂತೆ ಮಸಾಯಿ ಮರಾ ಇದೆ. ಅಲ್ಲಿನ ಪ್ರಾಣಿಗಳು ಈ ಕಾಡಿನಲ್ಲಿ ಬಾರ್ಡರ್ ಕ್ರಾಸ್ ಮಾಡಿ ಓಡಾಡುತ್ತವೆ. ಅವು ಕೊಂಚ ಆಕ್ರಮಣಕಾರಿ.. ಹಾಗಾಗಿ ದೂರದಿಂದಲೇ ನೋಡಬೇಕು. ಸಫಾರಿ ವಾಹನದ ಚಾಲಕರಿಗೆ ಈ ಬಗ್ಗೆ ಗೊತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಸೋನಿಕಾ ಮಾಹಿತಿ ನೀಡಿದ್ದಾರೆ.
ಸಿಂಹ, ಚಿರತೆ, ಆನೆ, ಘೇಂಡಾಮೃಗ, ಜಿರಾಫೆ, ಜೀಬ್ರಾ ಹೀಗೆ ಸಾಕಷ್ಟು ಪ್ರಾಣಿಗಳನ್ನು ನೋಡಿದೆವು. 3 ದಿನಗಳ ಸಫಾರಿ ಹೋಗಿದ್ದೆವು. ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನ ಹೊಂದಿಕೊಂಡಂತೆ ಮರಾ ಸೋಫಾ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದೆವು. ಆ ಲಾಡ್ಜ್ ಸುತ್ತಾಮುತ್ತಾ ಕೂಡ ಕಾಡು ಪ್ರಾಣಿಗಳು ಸುತ್ತಾಡುತ್ತಿದ್ದವು. ಆದ್ರೆ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಒಟ್ಟಾರೆ ಇಡೀ ಮಸಾಯಿ ಮರಾ ಪ್ರವಾಸವೇ ರೋಚಕ ಅನುಭವ. ನಾವು ಮಸಾಯಿ ಮರಾದ ಒಂದು ಭಾಗವನ್ನು ಮಾತ್ರ ನೋಡಿ ಬಂದಿದ್ದೀನಿ. ಅಂತಹ ಇನ್ನು 3 ಭಾಗಗಳನ್ನು ನೋಡಬೇಕು. ಆದಷ್ಟು ಬೇಗ ಅಲ್ಲಿಗೆ ಹೋಗುವ ಆಸೆಯಿದೆ. ನಾನಂತೂ ಮಿಸ್ ಮಾಡಲ್ಲ. ಇನ್ನೊಂದು ವರ್ಷದಲ್ಲಿ ಹೋಗುವ ಪ್ಲ್ಯಾನ್ ಇದೆ ಎಂದು ಸೋನಿಕಾ ತಿಳಿಸಿದ್ದಾರೆ.
ಮಸಾಯಿ ಮರಾದಿಂದ ನೇರವಾಗಿ ದುಬೈಗೆ ಹೋಗಿದ್ದೆವು. ಅಲ್ಲಿ ಒಂದು ಫೋಟೊಶೂಟ್ ಮಾಡಬೇಕಿತ್ತು. ಈಗಾಗಲೇ ಏಳೆಂಟು ಬಾರಿ ದುಬೈಗೆ ಹೋಗಿದ್ದೀನಿ. ಮುಂದೆ ಇಟಲಿಗೆ ಹೋಗುವ ಆಸೆಯಿದೆ. ಫೆಬ್ರವರಿ ವೇಳೆಗೆ ಅಲ್ಲಿಗೆ ಹೋಗಬೇಕು, ಅದಕ್ಕಾಗಿ ಪ್ಲ್ಯಾನ್ ಮಾಡುತ್ತಿದ್ದೇನೆ. ನ್ಯೂ ಬೆಲ್ ರೋಡ್‌ನಲ್ಲಿ Glam-X ಎಂಬ ಬ್ಯೂಟಿ ಸಲೂನ್ ಅನ್ನು ಸೋನಿಕಾ ಹೊಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಬ್ಯುಸಿನೆಸ್ ಕಡೆ ಹೆಚ್ಚು ಗಮನ ಹರಿಸಿದ್ದರು. ಕೊಂಚ ಬಿಡುವು ಮಾಡಿಕೊಂಡು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಡ್ಯಾನ್ಸ್ ಮಾಸ್ಟರ್ ಭೂಷಣ್ ಜೊತೆ ನಾಯಕಿಯಾಗಿ ಸಿನಿಮಾವೊಂದರಲ್ಲಿ ಈಗ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications