ಏಳು ವರ್ಷಗಳ ಬಳಿಕ ಮಲಯಾಳಂಗೆ ಮರಳಿದ ಶಕೀಲಾ
ಮಲಯಾಳಂ ಬೆಳ್ಳಿಪರದೆ ಮೇಲೆ ರಸಪೂರಿ ಮಾವಿನಹಣ್ಣಿನಂತೆ ಕಂಗೊಳಿಸಿದ ಒಂದು ಕಾಲದಲ್ಲಿ ತಾರೆ ಶಕೀಲಾ ಬೆಳ್ಳಿಪರದೆಗೆ ಪುನರಾಗಮಿಸಿದ್ದಾರೆ. ಏಳು ವರ್ಷಗಳ ಸುದೀರ್ಘ ಕಾಲ ತವರು ಚಿತ್ರಗಳಿಂದ ದೂರ ಉಳಿದಿದ್ದಮಲ್ಲು ಆಂಟಿ ಈಗ ಪುನಃ ರಂಗಪ್ರವೇಶ ಮಾಡುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಹೊಸ ಕಳೆತರಲಿದ್ದಾರೆ.
ಮಲಯಾಳಂನಲ್ಲಿ ಒಟ್ಟಿಗೆ ನಾಲ್ಕು ಚಿತ್ರಗಳಿಗೆ ಸಹಿಹಾಕುವ ಮೂಲಕ ಈ ವಯಸ್ಸಿನಲ್ಲೂ ಶಕೀಲಾ ಆಂಟಿಯ ಹುರುಪು ಹುಮ್ಮಸ್ಸು ಕುಗ್ಗಿಲ್ಲ ಅನ್ನಿಸುತ್ತದೆ. ವಿಶೇಷ ಎಂದರೆ ಆ ಸಹಿ ಹಾಕಿರುವ ನಾಲ್ಕೂ ಚಿತ್ರಗಳು ಕುಟುಂಬ ಪ್ರಧಾನ ಚಿತ್ರಗಳು. 'ವಯಸ್ಕರ' ಚಿತ್ರಗಳು ಶಕೀಲಾಗೆ ಸಾಕು ಅನ್ನಿಸಿಬಿಟ್ಟಿದೆಯಂತೆ. ಹಾಗಂತ ಮುಂದೆ ನಟಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ.
ಮಲಯಾಳಂ ಚಿತ್ರಗಳಿಂದ ದೂರ ಉಳಿದಿದ್ದರೂ ನೆರೆ ಭಾಷಾ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಶಕೀಲಾ ಗಮನಸೆಳೆಯುತ್ತಿದ್ದರು. ಸಾಧು ಕೋಕಿಲ ನಿರ್ದೇಶಿಸುತ್ತಿರುವ 90 ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಹಣದ ಹೊಳೆ ಹರಿಸಿ ಹೆಂಡದ ಹೊಳೆಯಲ್ಲಿ ಮುಳುಗೇಳುವ ಕಥೆಯುಳ್ಳ ಈ ಚಿತ್ರಕ್ಕೆ ಬೇಕಾದ ಎಲ್ಲ ಬಗೆಯ ಮಸಾಲೆ ಐಟಂಗಳನ್ನು ಸಾಧು ಕೋಕಿಲ ಒಟ್ಟು ಮಾಡುತ್ತಿದ್ದಾರೆ.


Click it and Unblock the Notifications











