93 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ 200 ಕೋಟಿ ಕ್ಲಬ್ ಸೇರಿದ ಮಲಯಾಳಂ ಚಿತ್ರರಂಗ!
ಮಲಯಾಳಂ ಚಿತ್ರರಂಗ ಅಕ ಮಾಲಿವುಡ್.. ಕಂಟೆಂಟ್ ಇರುವ ಚಿತ್ರಗಳನ್ನು ಹೆಚ್ಚಾಗಿ ನಿರ್ಮಿಸುವ ಚಿತ್ರರಂಗ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಸ್ಟ್ರಿ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುವ ಈ ಮಲಯಾಳಂ ಚಿತ್ರರಂಗದ ಚಿತ್ರಗಳ ಕಲೆಕ್ಷನ್ ಮಾತ್ರ ಚಿತ್ರ ಮಾಡುವ ಸದ್ದಿಗೆ ತಕ್ಕಷ್ಟು ಇರುವುದಿಲ್ಲ ಎಂಬುದು ಮಾತ್ರ ಒಪ್ಪಲೇಬೇಕಾದ ಸತ್ಯ.
ಇದಕ್ಕೆ ಕಾರಣ ಮಲಯಾಳಂ ಚಿತ್ರರಂಗ ಇತರೆ ಚಿತ್ರರಂಗಗಳ ಹಾಗೆ ಪ್ಯಾನ್ ಇಂಡಿಯಾ ಟ್ರೆಂಡ್ ಅನ್ನು ಅನುಸರಿಸದೇ ಇರುವುದು. ಹೌದು, ಮಲಯಾಳಂ ಚಿತ್ರಗಳು ಕೇವಲ ಮಲಯಾಳಂ ಭಾಷೆಯಲ್ಲಿಯೇ ಹೆಚ್ಚಾಗಿ ಬಿಡುಗಡೆಯಾಗುತ್ತವೆ. ಓಟಿಟಿಗೆ ಬಂದ ಮೇಲೆ ಮಾತ್ರ ಇತರೆ ಭಾಷೆಗಳಲ್ಲಿಯೂ ಸಹ ಚಿತ್ರ ಲಭ್ಯವಿರುತ್ತದೆ.

ಹೀಗೆ ಕೇವಲ ಮಲಯಾಳಂ ಭಾಷೆಯಲ್ಲಿಯೇ ಕೇರಳದ ಚಿಕ್ಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಕಾರಣಕ್ಕೆ ಮಲಯಾಳಂ ಸೂಪರ್ ಬ್ಲಾಕ್‌ಬಸ್ಟರ್ ಚಿತ್ರಗಳು ಇತರೆ ಚಿತ್ರರಂಗಗಳ ಹಾಗೆ ದೊಡ್ಡ ಕಲೆಕ್ಷನ್ ಮಾಡುವುದಿಲ್ಲ ಎಂದೇ ಹೇಳಬಹುದು.
ಹೀಗಿರುವಾಗ ಮಲಯಾಳಂನ ಒಂದು ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗದೇ ಕೇವಲ ಮಲಯಾಳಂನಲ್ಲಿ ಮಾತ್ರ ಬಿಡುಗಡೆಯಾಗಿ ಬೃಹತ್ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಹೌದು, ಕಳೆದ ಮೇ 5ರಂದು ಬಿಡುಗಡೆಗೊಂಡ '2018; ಎವರಿಒನ್ ಈಸ್ ಎ ಹೀರೊ' ಎಂಬ ಚಿತ್ರ ಈಗ 200 ಕೋಟಿ ಗಳಿಕೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
ಇಂದಿಗೆ ( ಜೂನ್ 8 ) ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಕ್ಲಬ್ ಮೈಲಿಗಲ್ಲನ್ನು ಮುಟ್ಟಿದೆ. ಇನ್ನು ಚಿತ್ರ ಕಳೆದ ವಾರ ತೆಲುಗಿಗೂ ಸಹ ಡಬ್ ಆಗಿ ಬಿಡುಗಡೆಯಾಗಿದೆ. ನಿನ್ನೆ ಚಿತ್ರ ಓಟಿಟಿ ಬಿಡುಗಡೆಯನ್ನು ಕಂಡಿದ್ದು, ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿ ಮಲಯಾಳಂ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನವಾಗುತ್ತಿದೆ.
2018ರಲ್ಲಿ ನಡೆದ ನೈಜ ಘಟನೆಗಳ ಆಧಾರದ ಮೇಲೆ ಈ ಚಿತ್ರದ ಕಥೆ ರಚಿಸಲಾಗಿದ್ದು, ಚಿತ್ರಕ್ಕೆ ಜೂಡ್ ಆಂಟನಿ ಜೋಸೆಫ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಟೊವಿನೊ ಥಾಮಸ್, ಕುಂಚಕೋ ಬೊಬನ್, ಅಸಿಫ್ ಅಲಿ, ವಿನೀತ್, ಅಪರ್ಣ ಬಾಲಮುರಳಿ, ನರೇನ್ ಹಾಗೂ ಶ್ರೀನಿವಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಕಾವ್ಯ ಫಿಲ್ಮ್ ಕಂಪನಿ ಹಾಗೂ ಪಿಕೆ ಫಿಲ್ಮ್ ಪ್ರೊಡಕ್ಷನ್ ಬಂಡವಾಳ ಹೂಡಿವೆ.
ಇನ್ನು ಈ ಚಿತ್ರ 16 ಕೋಟಿ ವೆಚ್ಚದಲ್ಲಿ ತಯಾರಾಗಿದ್ದು, 4 ಕೋಟಿಯನ್ನು ಪ್ರಚಾರ ಕಾರ್ಯಕ್ಕಾಗಿ ಖರ್ಚು ಮಾಡಲಾಗಿದೆ. ಒಟ್ಟಾರೆಯಾಗಿ ಚಿತ್ರದ ಬಜೆಟ್ 20 ಕೋಟಿ ರೂಪಾಯಿಗಳಾಗಿದ್ದು, ಸದ್ಯ ಚಿತ್ರ 200 ಕೋಟಿ ಗಳಿಸುವ ಮೂಲಕ ಬಜೆಟ್‌ಗಿಂತ ಹತ್ತು ಪಟ್ಟು ಹೆಚ್ಚು ಗಳಿಕೆಯನ್ನು ಮಾಡಿ ದಾಖಲೆ ಬರೆದಿದೆ.
1930ರಿಂದ ಸಿನಿಮಾಗಳು ತೆರೆ ಕಾಣುತ್ತಿರುವ ಮಲಯಾಳಂ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 200 ಕೋಟಿ ಕ್ಲಬ್ ಅನ್ನು ಸಿನಿಮಾವೊಂದು ಸೇರಿದೆ. ಈ ಮೂಲಕ 2018 ಮಲಯಾಳಂ ಚಿತ್ರರಂಗ ಎಂದೂ ಮರೆಯಲಾರದಂತಹ ಮಹೋನ್ನತ ಸಿನಿಮಾವಾಗಿ ಸಾಧನೆ ಮಾಡಿದೆ.
ಇನ್ನು ಈ ಚಿತ್ರ ಈ ದಾಖಲೆಯನ್ನು ಮಾಡುವ ಮುನ್ನ 2016ರಲ್ಲಿ ತೆರೆಗೆ ಬಂದಿದ್ದ ಮೋಹನ್ ಲಾಲ್ ನಟನೆಯ ಪುಲಿ ಮುರುಗನ್ ಅತಿಹೆಚ್ಚು ಗಳಿಕೆ ಮಾಡಿದ ಮಲಯಾಳಂ ಸಿನಿಮಾ ಎನಿಸಿಕೊಂಡಿತ್ತು. ಈ ಚಿತ್ರ ತನ್ನ ಸಂಪೂರ್ಣ ಓಟದಲ್ಲಿ 152 ಕೋಟಿ ಗಳಿಸಿತ್ತು. ಈ ಚಿತ್ರ ಮಾಡಿದ್ದ ಈ ದಾಖಲೆಯನ್ನು ನಂತರ ಬಿಡುಗಡೆಗೊಂಡ ಅನೇಕ ಹಿಟ್ ಚಿತ್ರಗಳು ಮುರಿಯುವಲ್ಲಿ ವಿಫಲಗೊಂಡಿದ್ದವು.
ಆದರೆ ಈಗ ಏಳು ವರ್ಷಗಳ ಬಳಿಕ 2018 ಚಿತ್ರ ಈ ದಾಖಲೆಯನ್ನು ಮುರಿದು ಹಾಕಿ ಮಲಯಾಳಂ ಚಿತ್ರರಂಗದ ನೂತನ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಮಲಯಾಳಂ ಚಿತ್ರರಂಗದ ಅತಿಹೆಚ್ಚು ಗಳಿಕೆ ಮಾಡಿದ ಟಾಪ್ 5 ಚಿತ್ರಗಳು ಈ ಕೆಳಕಂಡಂತಿವೆ.
1. 2018 ( 2023 ) - 200 ಕೋಟಿ*
2. ಪುಲಿ ಮುರುಗನ್ ( 2016 ) - 152 ಕೋಟಿ ಗ್ರಾಸ್ ಕಲೆಕ್ಷನ್
3. ಲೂಸಿಫರ್ ( 2019 ) - 127 ಕೋಟಿ ಗ್ರಾಸ್ ಕಲೆಕ್ಷನ್
4. ಭೀಷ್ಮ ಪರ್ವಂ ( 2022 ) - 87 ಕೋಟಿ ಗ್ರಾಸ್ ಕಲೆಕ್ಷನ್
5. ಕುರುಪ್ ( 2021 ) - 81 ಕೋಟಿ ಗ್ರಾಸ್ ಕಲೆಕ್ಷನ್


Click it and Unblock the Notifications











