ನನ್ನ ಮೊದಲ ಪತ್ನಿ ಎಂಥವಳು ಗೊತ್ತಾ? 2ನೇ ಮದುವೆಗೆ ಕಾರಣ ಏನಂದ್ರೆ?; ಕ್ರಿಸ್
ಸೆಲೆಬ್ರೆಟಿಗಳ ಲವ್ವು, ಮದುವೆ, ಬ್ರೇಕಪ್ ವಿಚಾರಗಳು ಭಾರೀ ಸುದ್ದಿ ಆಗುತ್ತದೆ. ಇತ್ತೀಚೆಗೆ ಇಂತಹ ವಿಚಾರಗಳು ಭಾರೀ ಟ್ರೋಲ್‌ಗೆ ಕಾರಣವಾಗುತ್ತಿದೆ. ಅದರಲ್ಲೂ ವಯಸ್ಸಿನ ಅಂತರ ಇರುವ ನಟ, ನಟಿ ಮದುವೆ ಆಗಿಬಿಟ್ಟರೆ ಕಥೆ ಮುಗಿದೇ ಹೋಯಿತು. ಸದ್ಯ ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣು ಗೋಪಾಲ್ ಹಾಗೂ ನಟಿ ದಿವ್ಯಾ ಶ್ರೀಧರ್ ಮದುವೆ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಕಳೆದ ಬುಧವಾರ ವೇಣುಗೋಪಾಲ್ ಹಾಗೂ ದಿವ್ಯ ಪರಸ್ಪರ ಒಪ್ಪಿ ಮದುವೆ ಆಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ. ಗುರುವಾಯೂರು ಆಲಯದಲ್ಲಿ ಇಬ್ಬರ ಕಲ್ಯಾಣೋತ್ಸವ ನೆರವೇರಿತ್ತು. ಇಬ್ಬರ ಮದುವೆ ಬಗ್ಗೆ ಕೆಲವರು ಅಪಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ವೇಣು ಗಡ್ಡ, ಕೂದಲು ಬೆಳ್ಳಗಾಗಿದೆ. ಹಾಗಾಗಿ ಆತನಿಗೆ ಬಹಳ ವಯಸ್ಸಾಗಿದೆ. ದಿವ್ಯಾಗೆ ಇನ್ನು ಚಿಕ್ಕ ವಯಸ್ಸು. ಹಣ, ಅಂತಸ್ತು ಇಂತಹ ಕಾರಣಕ್ಕೆ ಮದುವೆ ಆಗಿದ್ದಾರೆ ಎಂದು ಕೆಲವರು ದಿವ್ಯಾ ಅವರನ್ನು ಟ್ರೋಲ್ ಮಾಡ್ತಿದ್ದಾರೆ.

ಕೆಲವರು ಕ್ರಿಸ್ ವೇಣುಗೋಪಾಲ್ ವಯಸ್ಸು 65 ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಆತನ ವಯಸ್ಸು 49 ವರ್ಷ, ನನಗೆ 40 ವರ್ಷ ಎಂದು ದಿವ್ಯಾ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮದುವೆ ಬಗ್ಗೆ ಟ್ರೋಲ್ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆ ಪ್ರತಿಕ್ರಿಯಿಸಿದ್ದಾರೆ. ಇನ್ನು ವೇಣು ಗೋಪಾಲ್ ತಮ್ಮ ಮೊದಲ ಮಡದಿ ಬಗ್ಗೆ ಮಾತನಾಡಿರುವ ಮಾತುಗಳು ವೈರಲ್ ಆಗುತ್ತಿದೆ. ತಾವು ಯಾಕೆ ಆಕೆಯಿಂದ ದೂರಾಗಿದ್ದು ಎಂದು ಹೇಳಿದ್ದಾರೆ.
ನನ್ನ ಮದುವೆ ಜೀವನ ಬರೀ ಟಾಕ್ಸಿಕ್ ಅಲ್ಲ. ಅದಕ್ಕಿಂತಲೂ ಘೋರವಾಗಿತ್ತು ಎಂದು ವೇಣುಗೋಪಾಲ್ ನೆನಪಿಸಿಕೊಂಡಿದ್ದಾರೆ. ನನ್ನ ಮೊದಲ ಮದುವೆ ಸಂಬಂಧ ಹೇಗಿತ್ತು ಅಂದ್ರೆ ನಾನು ನಮ್ಮ ಫ್ಯಾಮಿಲಿ ಜೊತೆ ಇರುವುದಕ್ಕೆ ಆಗುತ್ತಿರಲಿಲ್ಲ. ನಾನು ನನ್ನ ಹೆತ್ತವರನ್ನು ನೋಡಿಕೊಳ್ಳದೇ ಹೇಗಿರಲಿ. ಅದನ್ನು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂದು ವೇಣುಗೋಪಾಲ್ ಹೇಳಿಕೊಂಡಿದ್ದಾರೆ.
ನನ್ನ ಮನೆಗೆ ನೆಂಟರು ಬರುವಂತಿಲ್ಲ, ಫೋನ್ ಮಾಡುವಂತಿಲ್ಲ, ಹೊರಗೆ ಹೋಗುವಂತಿಲ್ಲ. ನಾನು ಮನೆಯ ಸಾಕು ಪ್ರಾಣಿಯಂತಾಗಿದ್ದೆ. ನಾನು ಯಾವುದೋ ಜೇಡ ಅಲ್ಲ, ಒಂದು ಗಾಜಿನ ಪಂಜರದಲ್ಲಿ ಇರುವುದಕ್ಕೆ. ನಾನು ಮನುಷ್ಯ, ಬಹಳ ನೋವಿನಿಂದ 6 ವರ್ಷಗಳ ಹಿಂದೆ ಆ ಜೀವನದಿಂದ ಹೊರ ಬಂದುಬಿಟ್ಟೆ ಎಂದು ಅವರು ತಿಳಿಸಿದ್ದರು.
2019ರಲ್ಲಿ ನಾನು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೆ. 2022ರಲ್ಲಿ ಡಿವೋರ್ಸ್ ಸಿಕ್ಕಿತ್ತು. 9 ತಿಂಗಳ ಬಳಿಕ ನಾನು ಮತ್ತೊಬ್ಬರ ಜೊತೆ ಜೀವನ ಹಂಚಿಕೊಳ್ಳಲು ನಿರ್ಧರಿಸಿದೆ. ಬಳಿಕ ನನಗೆ ದಿವ್ಯಾ ಶ್ರೀಧರ್ ಭೇಟಿಯಾದೆ. ಈಗ ಇಬ್ಬರೂ ಮದುವೆ ಆಗಿದ್ದೀವಿ ಎಂದು ವೇಣುಗೋಪಾಲ್ ವಿವರಿಸಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆಯೂ ವೇಣುಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಯಾರನ್ನೋ ನನ್ನ ಪತ್ನಿ ಎಂದು ಹೇಳಿ ವೀಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ನಾನು ಈಗಾಗಲೇ ನನ್ನ ಡಿವೋರ್ಸ್ ಬಗ್ಗೆ ಹೇಳಿದ್ದೀನಿ. ಇಂತಹ ವೀಡಿಯೋ ಮಾಡಿ ಸುದ್ದಿ ಹರಡುವವರು ನನ್ನ ಬಳಿ ಕೇಳಿ ಸ್ಪಷ್ಟನೆ ಪಡೆಯಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕಿರುತೆರೆಗೆ ಬರುವ ಮುನ್ನ ಕ್ರಿಸ್ ವೇಣುಗೋಪಾಲ್ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ, ಜಾಹೀರಾತುಗಳಿಗೆ ವಾಯ್ಸ್ ಓವರ್ ಕೊಡುತ್ತಿದ್ದರು. ಅಂದಹಾಗೆ ದಿವ್ಯಾ ಶ್ರೀಧರ್ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಅವರ ಒಪ್ಪಿಗೆ ಪಡೆದು ಆಕೆ ವೇಣುಗೋಪಾಲ್ ಕೈ ಹಿಡಿದಿದ್ದಾರೆ.


Click it and Unblock the Notifications











