ಪ್ರಭಾಸ್‌ರನ್ನು ಡಾರ್ಲಿಂಗ್ ಅನ್ನಲು ಕಾರಣವೇನು ಗೊತ್ತೆ?: ಪೃಥ್ವಿರಾಜ್ ಸುಕುಮಾರನ್ ಹೇಳುತ್ತಾರೆ ನೋಡಿ
ಸಲಾರ್ ಬಿಡುಗಡೆ ದಿನಾಂಕ ಹತ್ತಿರುವಾಗುತ್ತಿದ್ದಂತೆ ಸಿನಿ ಪ್ರೇಮಿಗಳಲ್ಲಿ ಇರುವಷ್ಟೇ ಕಾತುರ, ಕುತೂಹಲ ಚಿತ್ರತಂಡಕ್ಕೂ ಇದೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಇದು ಈ ವರ್ಷದ ಮಹತ್ವದ ಸಿನಿಮಾ. ಸಲಾರ್ ಡ್ರೀಮ್ ಪ್ರಾಜೆಕ್ಟ್ ಎನ್ನುತ್ತಾರೆ ಅವರು.
ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಸಲಾರ್ ಭಾಗ 1: ಕದನ ವಿರಾಮದಲ್ಲಿ 'ವರದರಾಜ ಮನ್ನಾರ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸ್ನೇಹಿತರ ಕುರಿತ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅವರಷ್ಟೇ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವರದರಾಜ ಮನ್ನಾರ್ ಆದ ಪೃಥ್ವಿರಾಜ್ ಸುಕುಮಾರನ್
ನಟ ಪೃಥ್ವಿರಾಜ್ ಸುಕುಮಾರನ್ ಸಲಾರ್‌ನಲ್ಲಿನ ತಮ್ಮ ವರದರಾಜ ಮನ್ನಾರ್ ಪಾತ್ರದ ಬಗ್ಗೆ ತುಂಬಾ ಖುಷಿಯಿಂದ ಮಾತನಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ 2 ಚಿತ್ರೀಕರಣದಲ್ಲಿದ್ದಾಗ ತಮಗೆ 'ಸಲಾರ್' ಕಥೆಯನ್ನು ವಿವರಿಸಿದ್ದರು. ಅವರು ನನ್ನನ್ನು ವರದ ಪಾತ್ರದಲ್ಲಿ ಕಲ್ಪಿಸಿಕೊಂಡಿದ್ದಾರೆ ಎಂದು ತಿಳಿದು ನನಗೆ ಮೆಚ್ಚುಗೆಯಾಯಿತು. ಇದು ನಾನು ಕೆಲ ದಿನಗಳಿಂದ ಓದಿದ ಅತ್ಯುತ್ತಮ ಸ್ಕ್ರಿಪ್ಟ್‌ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
"ಈ ಪಾತ್ರದಲ್ಲಿ ನಾನು ಸಂಪೂರ್ಣವಾಗಿ ಎಫರ್ಟ್ ಹಾಕಿದ್ದೇನೆ. ಅದು ಫಲ ನೀಡಿದೆ ಎಂದು ನಾನು ನಂಬುತ್ತೇನೆ. ಏಕೆಂದರೆ ಪ್ರಶಾಂತ್ ನೀಲ್ ಅವರ ಇನ್ಪುಟ್ ಅಷ್ಟು ಸ್ಟ್ರಾಂಗ್ ಆಗಿದೆ. ಇಡೀ ಶಾಟ್ ಅನ್ನು ಒಂದೇ ಕ್ಷಣದಲ್ಲಿ ಬದಲಾಯಿಸುವ ರೀತಿಯ ನಿರ್ದೇಶಕ. ಅವರು ನನ್ನನ್ನು ಚಿತ್ರದ ಸಹಯೋಗಿಯಂತೆ ಭಾವಿಸಿದ್ದರು. ಇದು ನನಗೆ ಚಿತ್ರದ ಅತ್ಯಂತ ಖುಷಿಯ ವಿಷಯ" ಎಂದಿದ್ದಾರೆ.

ಪ್ರಭಾಸ್ ಅವರನ್ನು ಯಾಕೆ ಡಾರ್ಲಿಂಗ್ ಎನ್ನುತ್ತಾರೆ ಎಂದು ಅರ್ಥವಾಯಿತು!
ಇನ್ನು, ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಕೆಲಸ ಮಾಡುವ ಬಗ್ಗೆ ಮಾತನಾಡಿರುವ ಅವರು, "ಪ್ರಭಾಸ್ ಅವರನ್ನು ತಕ್ಷಣಕ್ಕೆ ತಿಳಿದುಕೊಳ್ಳುವುದು ಅಸಾಧ್ಯ. ಅವರು ಬೇಗನೇ ಸ್ನೇಹಿತರಾಗುವುದಿಲ್ಲ. ನನಗೆ ಕೆಲವೇ ಕೆಲವು ಸ್ನೇಹಿತರಿದ್ದಾರೆ. ಆದರೆ ನಾನು ಅನಾಯಾಸವಾಗಿ, ದಿನನಿತ್ಯ ಮೆಸೇಜ್ ಮಾಡುವ ಸ್ನೇಹಿತರಲ್ಲಿ ಅವರು ಒಬ್ಬರು. ಪ್ರಭಾಸ್ ಇತರರ ಸಂತೋಷದಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವ ವ್ಯಕ್ತಿ" ಎಂದು ಹೊಗಳಿದ್ದಾರೆ.
" ಪ್ರಭಾಸ್ ಯಾವಾಗಲೂ ಸೆಟ್‌ನಲ್ಲಿರುವ ಪ್ರತಿಯೊಬ್ಬರನ್ನು ಹುಡುಕುತ್ತಿರುತ್ತಾರೆ. ಅವರಿಗೆ ಒಳ್ಳೆ ಊಟ ನೀಡುತ್ತಾರೆ. ಎಲ್ಲರೂ ಆರಾಮವಾಗಿದ್ದಾರೆಯೇ ಎಂದು ತಿಳಿದುಕೊಳ್ಳುತ್ತಾರೆ. ಹೀಗಾಗಿಯೇ ಜನರು ಅವರನ್ನು ಏಕೆ 'ಡಾರ್ಲಿಂಗ್' ಎಂದು ಕರೆಯುತ್ತಾರೆ ಎಂದು ನನಗೆ ಅರ್ಥವಾಯಿತು" ಎಂದು ಹೇಳಿದ್ದಾರೆ.
ಸಲಾರ್ ಟ್ರೈಲರ್‌ನಲ್ಲಿ ಇರುವ ವಿಷಯಕ್ಕಿಂತ ದೊಡ್ಡದು!
ಸಲಾರ್ ಇಬ್ಬರು ಸ್ನೇಹಿತರ ನಡುವಿನ ಸ್ನೇಹದ ಕಥೆ ಮಾತ್ರವಲ್ಲ. ಅದು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನದನ್ನು ಸಿನಿಮಾ ಮಂದಿರಗಳಲ್ಲಿ ನೀಡುತ್ತದೆ. ಪ್ರೇಕ್ಷಕರಿಗೆ ಇದೊಂದು ಉತ್ತಮ ಸಿನಿಮಾ ಎಂಬುದು ನನ್ನ ನಂಬಿಕೆ. ಇದು ಬರೀ ಆಕ್ಷನ್ ಫಿಲಂ ಮಾತ್ರವಲ್ಲದೇ ಒಳ್ಳೆ ಸಿನಿಮಾ ನೋಡಿದೆ ಎಂಬ ಭಾವನೆಯಿಂದ ಪ್ರೇಕ್ಷಕರು ಹೊರಗೆ ಹೋಗುತ್ತಾರೆ. ಸಲಾರ್‌ನ ಎರಡನೇ ಭಾಗದ ಲೀಡ್ ಅಪ್ ಅದ್ಭುತವಾಗಿದೆ ಎಂದು ಪೃಥ್ವಿರಾಜ್ ಸುಕುಮಾರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, "ನಾನು ಎಂದಿಗೂ ನಿರೂಪಣೆ ಕೇಳಿಲ್ಲ ಅಥವಾ ಸ್ಕ್ರಿಪ್ಟ್ ಅನ್ನು ಓದಿಲ್ಲ ಮತ್ತು ನಾನೇ ಪಾತ್ರವನ್ನು ನಿರ್ವಹಿಸುತ್ತೇನೆ ಅಥವಾ ಅದನ್ನು ನಿರ್ದೇಶಿಸುತ್ತೇನೆ ಎಂದು ಕಲ್ಪಿಸಿಕೊಂಡಿದ್ದೇನೆ. ಇದು ವಿಚಿತ್ರವೆನಿಸುತ್ತದೆ. ಆದರೆ, ನಾನು ಅದನ್ನು ಪ್ರೇಕ್ಷಕರ ಕಣ್ಣಿನ ಮೂಲಕ ಸಿನಿಮಾ ನೋಡುತ್ತೇನೆ. ನನ್ನ ಪಾತ್ರ ಗೌಣವಾಗಿದ್ದರೂ, ಒಟ್ಟಾರೆ ಕಥೆ ಮುಖ್ಯ ಅನಿಸುತ್ತದೆ. ನಾನು ಸರಾಸರಿ ಚಿತ್ರದಲ್ಲಿ ಅದ್ಭುತ ಪಾತ್ರಕ್ಕಿಂತ ಉತ್ತಮ ಚಿತ್ರದಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತೇನೆ. ನನ್ನ ಪಾತ್ರ ಮತ್ತು ಕಥೆ ಸಮಾನವಾಗಿ ಇರುವ ಅಪರೂಪದ ಕೆಲವು ಚಿತ್ರಗಳಲ್ಲಿ ಸಲಾರ್ ಕೂಡ ಒಂದು" ಎಂದಿದ್ದಾರೆ.


Click it and Unblock the Notifications











