ಸಿಮ್ ಖರೀದಿಸಲು ಹೋದ ನಟಿಯನ್ನು ಕಚೇರಿಯಲ್ಲಿ ಕೂಡಿಹಾಕಿದ ಸಿಬ್ಬಂದಿ!
ನಟಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಕೇರಳದಲ್ಲಿ ಒಂದರ ಮೇಲೊಂದು ಕೇಳಿ ಬರುತ್ತಲೇ ಇದೆ. ಅತ್ಯುತ್ತಮ ಸಿನಿಮಾಗಳನ್ನು ನೀಡುತ್ತಿರುವ ಮಲಯಾಳಂ ಚಿತ್ರರಂಗ ನಟಿಯರ ಮೇಲೆ ದೌರ್ಜನ್ಯಕ್ಕೆ ಕಾರಣಕ್ಕೆ ಸುದ್ದಿಯಾಗುತ್ತಿರುವುದು ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.
ಹಾಡಹಗಲೆ, ಖ್ಯಾತ ಮಲಯಾಳಂ ನಟಿಯೊಬ್ಬರ ಮೇಲೆ ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ನೆನಪು ಆರುವ ಮುನ್ನವೇ ಇನ್ನೂ ಕೆಲವು ದೌರ್ಜನ್ಯದ ಘಟನೆಗಳು ಕೇರಳದಿಂದ ವರದಿಯಾಗುತ್ತಲೇ ಇವೆ.
ಕೆಲವು ದಿನಗಳ ಹಿಂದಷ್ಟೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದ ನಟಿ ಸಾನಿಯಾ ಅಯ್ಯಪ್ಪನ್ ಜೊತೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿದ್ದ, ಈ ವಿಡಿಯೋ ಬಹಳ ವೈರಲ್ ಆಗಿತ್ತು. ಇದೀಗ ನಟಿಯೊಬ್ಬಾಕೆಯನ್ನು ಕೆಲವರು ಕಚೇರಿಯಲ್ಲಿ ಕೂಡಿ ಹಾಕಿರುವ ಘಟನೆ ನಡೆದಿದೆ.

ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಅಂಗಮಲೈ ಡೈರೀಸ್' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಅನ್ನಾ ರಾಜನ್ ಅನ್ನು ಟೆಲಿಕಾಮ್ ಸಂಸ್ಥೆಯ ಸಿಬ್ಬಂದಿ ಕಚೇರಿಯಲ್ಲಿ ಬಂಧಿಸಿದ್ದಾರೆಂದು ಸ್ವತಃ ನಟಿ ಆರೋಪ ಮಾಡಿದ್ದಾರೆ.
ಕೇರಳದ ಅಳುವಾದ ಮುನಿಸಿಪಾಲಿಟಿ ಕಚೇರಿ ಬಳಿಕ ಟೆಲಿಕಾಂ ಸಂಸ್ಥೆಯೊಂದಕ್ಕೆ ಹೊಸ ಸಿಮ್ ಖರೀದಿಸಲೆಂದು ನಟಿ ಹೋಗಿದ್ದರು. ಈ ವೇಳೆ ನಟಿ ಹಾಗೂ ಸಿಬ್ಬಂದಿ ನಡುವೆ ಜಗಳ ನಡೆದಿದೆ. ನೌಕರನೊಬ್ಬ ನಟಿಯನ್ನು ಎಳೆದುಕೊಂಡು ಹೋಗಿ ಕಚೇರಿಯಲ್ಲಿ ಕೂಡಿ ಹಾಕಿದ್ದಾನೆ ಎನ್ನಲಾಗಿದೆ.
ಆ ಬಳಿಕ ನಟಿ ಅನ್ನಾ ರಾಜನ್ ಅಳುವಾ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಟಿಯನ್ನು ರಕ್ಷಿಸಿದ್ದಾರೆ. ಬಳಿಕ ನಟಿ ಅನ್ನಾ ರಾಜನ್ ಪೊಲೀಸರಿಗೆ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ಆದರೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ರಾಜಿ-ಸಂಧಾನ ಮಾಡಿಕೊಂಡಿದ್ದಾರೆ.
2017 ರಲ್ಲಿ ತೆರೆಕಂಡ 'ಅಂಗಮಲೈ ಡೈರೀಸ್' ಸಿನಿಮಾ ಮೂಲಕ ಅನ್ನಾ ರಾಜನ್ ಸಿನಿಮಾರಂಗ ಪ್ರವೇಶಿಸಿದರು. ಆ ಬಳಿಕ 'ವೇಲಿಪಡಿಂತೆ ಪುಸ್ತಕಂ', ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿ ಪೃಥ್ವಿರಾಜ್ ಪತ್ನಿಯ ಪಾತ್ರದಲ್ಲಿ ನಟಿಸಿದರು. ಆ ಬಳಿಕ ಇನ್ನೂ ಕೆಲವು ಸಿನಿಮಾಗಳಲ್ಲಿ ಅನ್ನಾ ನಟಿಸಿದ್ದಾರೆ.


Click it and Unblock the Notifications











