ಸಾರ್ವಜನಿಕ ಸ್ಥಳದಲ್ಲಿ 'ಅಜಂತ' ಚಿತ್ರನಟಿ ಸೊಂಟ ಮುಟ್ಟಿದ ಕಿಡಿಗೇಡಿ; ವೀಡಿಯೋ ವೈರಲ್
ಸಿನಿಮಾ ತಾರೆಯರನ್ನು ನೋಡಿದಾಗ ಅಭಿಮಾನಿಗಳು ಮುತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಅಭಿಮಾನಿಗಳ ಪ್ರೀತಿಸಿ ನಟ, ನಟಿಯರು ಮನ ಸೋಲುತ್ತಾರೆ. ನೆಚ್ಚಿನ ನಟ, ನಟಿಯರನ್ನು ಕಂಡಾಗ ಕೈ ಕುಲುಕುವುದು, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಮಾಡುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಅಭಿಮಾನ ಹೆಸರಿನಲ್ಲಿ ಹುಚ್ಚಾಟ ಮೆರೆಯುತ್ತಾರೆ.
ನಟಿಯರ ಮೇಲೆ ಬೀಳುವುದು, ಅವರನ್ನು ಕೆಟ್ಟದಾಗಿ ಮುಟ್ಟುವುದು ಮಾಡುತ್ತಾರೆ. ಈಗ ಎಲ್ಲೆಲ್ಲೂ ಕ್ಯಾಮರಾಗಳು. ಇಂತಹ ಹುಚ್ಚಾಟಗಳೆಲ್ಲಾ ಕ್ಯಾಮರಾದಲ್ಲಿ ಕಣ್ಣಲ್ಲಿ ಸೆರೆಯಾಗಿಬಿಡುತ್ತದೆ. ಕೆಲ ದಿನಗಳ ಹಿಂದೆ ನಟಿ ಹೈದರಾಬಾದ್‌ನಲ್ಲಿ ನಟಿ ನಿಧಿ ಅಗರ್‌ವಾಲ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದು ಸಮಸ್ಯೆ ಆಗಿತ್ತು. ಆಕೆ ಅಲ್ಲಿಂದ ಪಾರಾಗಿ ಕಾರ್ ಏರಿ ಹೊರಡಲು ಸಮಸ್ಯೆ ಆಗಿತ್ತು. ಬಳಿಕ ನಟಿ ಸಮಂತಾ, ನಟ ದಳಪತಿ ವಿಜಯ್ ಕೂಡ ಅಭಿಮಾನಿಗಳಿಂದ ಸಮಸ್ಯೆ ಎದುರಿಸುವಂತಾಗಿತ್ತು.

ಇದೀಗ ಮಲಯಾಳಂ ನಟಿ ಹನಿ ರೋಸ್ ಅವರಿಗೆ ಕಹಿ ಅನುಭವ ಆಗಿದೆ. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಕೆ ಹಾಜರಾಗಿದ್ದರು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳ ಕಡೆ ಕೈ ಬೀಸಿದ ನಟಿ ಹನಿ ರೋಸ್ ಕೆಲವರ ಜೊತೆ ಸೆಲ್ಫಿಗೆ ಪೋಸ್ ಕೊಟ್ಟರು. ಈ ವೇಳೆ ಕಿಡಿಗೇಡಿ ಒಬ್ಬ ಆಕೆಗೆ ಸೊಂಟ ಮುಟ್ಟಿರುವುದು ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕೇರಳ ಮೂಲದ ನಟಿ ಹನಿರೋಸ್ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದಶಕಗಳ ಹಿಂದೆಯೇ 'ಅಜಂತ' ಹಾಗೂ 'ನಂಜನಗೂಡ್ ನಂಜುಂಡ' ಎಂಬ ಸಿನಿಮಾಗಳಲ್ಲಿ ಆಕೆ ನಟಿಸಿದ್ದರು. 3 ವರ್ಷಗಳ ಹಿಂದೆ ಬಾಲಕೃಷ್ಣ ಜೊತೆ ನಟಿಸಿದ್ದ 'ವೀರಸಿಂಹ ರೆಡ್ಡಿ' ಸಿನಿಮಾ ಆಕೆಗೆ ಒಳ್ಳೆ ಕ್ರೇಜ್ ತಂದು ಕೊಟ್ಟಿತ್ತು.
ಇತ್ತೀಚೆಗೆ 'ಪೂಕ್ಕಾಲಂ' ಹಾಗೂ 'ರಾಣಿ' ಎಂಬ ಸಿನಿಮಾಗಳಲ್ಲಿ ಹನಿರೋಸ್ ನಟಿಸಿದ್ದರು. 'ರಾಚೆಲ್' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಆಕೆ ಈಗ ನಟಿಸುತ್ತಿದ್ದಾರೆ. ಗೋಮಾಂಸ ಮಾರುತ್ತ ಕುಂತ ಯುವತಿಯ ಪಾತ್ರದಲ್ಲಿ ಬಂದಿದ್ದ ಚಿತ್ರದ ಪೋಸ್ಟರ್ ವಿವಾದಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು.
20 ವರ್ಷಗಳ ಹಿಂದೆ 'ಬಾಯ್‌ಫ್ರೆಂಡ್' ಎಂಬ ಮಲಯಾಳಂ ಸಿನಿಮಾ ಮೂಲಕ ಹನಿ ರೋಸ್ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ನಿಧಾನವಾಗಿ ತಮಿಳು, ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಆಕೆ ನಟಿಸಿದ್ದ 'ಅಜಂತ' ಎಂಬ ಸಿನಿಮಾ ಕನ್ನಡ ಜೊತೆಗೆ ಮಲಯಾಳಂ ಹಾಗು ತಮಿಳಿನಲ್ಲಿ ಬಿಡುಗಡೆ ಆಗಿತ್ತು. 'ನಂಜನಗೂಡ್ ನಂಜುಂಡ' ಚಿತ್ರದಲ್ಲಿ ರವಿಶಂಕರ್ ಗೌಡ ಅವರಿಗೆ ನಾಯಕಿಯಾಗಿ ಮಿಂಚಿದ್ದರು. ಚಿತ್ರಕ್ಕಾಗಿ ಹಂಸಿಣಿ ಎಂದು ಹೆಸರು ಬದಲಿಸಿಕೊಂಡಿದ್ದರು. 2010ರಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು.
ಕೇರಳದ ಇಡುಕ್ಕಿ ಜಿಲ್ಲೆಯ ಮೂಲಮಟ್ಟಂನಲ್ಲಿ ಹುಟ್ಟಿ ಬೆಳೆದ ಹನಿ ರೋಸ್ ವರ್ಗೀಸ್ ಅಲ್ಲೇ ಶಾಲಾ ಶಿಕ್ಷಣ ಮುಗಿಸಿದ್ದರು. ಅಲುವಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಮಿಂಚಿದ್ದಾರೆ. 14ನೇ ವಯಸ್ಸಿನಲ್ಲೇ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಹನಿ ರೋಸ್ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದ್ಭುತ ಪಾತ್ರಗಳಲ್ಲಿ ನಟಿಸದೇ ಇದ್ದರೂ ಗ್ಲಾಮರಸ್ ಆಗಿ ಕಾಣಿಸಿಕೊಂಡು ಮೋಡಿ ಮಾಡಿದ್ದಾರೆ. ಸದ್ಯ ಕಿಡಿಗೇಡಿ ಒಬ್ಬ ಆಕೆಯ ಮೈ ಮುಟ್ಟಿರುವ ವೀಡಿಯೋ ವೈರಲ್ ಆಗ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗ್ತಿದೆ.


Click it and Unblock the Notifications











