ಮದುವೆಯಾಗುವ ಹುಡುಗನನ್ನು ಪರಿಚಯಿಸಿದ 'ಬೃಂದಾವನ' ಚಿತ್ರನಟಿ ಕಾರ್ತಿಕಾ
ಮಾಲಿವುಡ್ ಚೆಲುವೆ ಕಾರ್ತಿಕಾ ನಾಯರ್ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಹಿರಿಯ ನಟಿ ರಾಧಾ ಪುತ್ರಿ ಕಾರ್ತಿಕಾ ಕೂಡ ಅಮ್ಮನ ಹಾದಿಯಲ್ಲೇ ಚಿತ್ರರಂಗ ಪ್ರವೇಶಿಸಿದ್ದರು. ಆದರೆ ದೊಡ್ಡಮಟ್ಟದಲ್ಲಿ ಬ್ರೇಕ್ ಮಾತ್ರ ಸಿಗಲಿಲ್ಲ. ಬಳಿಕ ಚಿತ್ರರಂಗದಿಂದಲೇ ಆಕೆ ದೂರಾಗಿದ್ದಾರೆ.
ಇತ್ತೀಚೆಗೆ ಎಂಗೇಜ್‌ಮೆಂಟ್ ಬಗ್ಗೆ ಕಾರ್ತಿಕಾ ಸುಳಿವು ನೀಡಿದ್ದರು. ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಕೈಗೆ ಹಾಕಿಕೊಂಡಿರುವ ಉಂಗುರ ಹೈಲೆಟ್ ಮಾಡಿ ಕಾರ್ತಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿ ಆಕೆಯ ಎಂಗೇಜ್‌ಮೆಂಟ್ ನಡೆದಿದೆ ಅನ್ನೋ ಸುಳಿವು ಸಿಕ್ಕಿತ್ತು. ಆದರೆ ಆ ಹುಡುಗ ಯಾರು? ಏನು? ಎನ್ನುವ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಸ್ವತಃ ಆಕೆ ಆ ಬಗ್ಗೆ ಮಾಹಿತಿ ನೀಡಿದ್ದಾರೆ.

ರೋಹಿತ್ ಮೆನನ್ ಎಂಬುವವರ ಜೊತೆ ನಟಿ ಕಾರ್ತಿಕಾ ನಾಯರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. "ನಿನ್ನನ್ನು ಭೇಟಿಯಾಗುವುದು ವಿಧಿ. ಇನ್ನ ಪ್ರೀತಿಲಿ ಬೀಳುವುದು ಮ್ಯಾಜಿಕ್. ನಿನ್ನೊಟ್ಟಿಗೆ ಜೀವನ ಸಾಗಿಸಲು ಕೌಂಟ್‌ಡೌನ್ ಶುರುವಾಯಿತು" ಎಂದು ಬರೆದ ಕಾರ್ತಿಕಾ ಎಂಗೇಜ್‌ಮೆಂಟ್ ಫೋಟೊಗಳನ್ನು ಶೇರ್ ಮಾಡಿದ್ದರು. ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಕಾರ್ತಿಕಾ ಈ ಹಿಂದೆ ಎಂಗೇಜ್‌ಮೆಂಟ್ ಸುಳಿವು ನೀಡುತ್ತಿದ್ದಂತೆ ತಾಯಿ ರಾಧಾ ಕೂಡ ಪೋಸ್ಟ್ ಮಾಡಿದ್ದರು. "ಹೊಸ ಮನೆಗೆ ಕಳುಹಿಸಿಕೊಡುತ್ತಿರುವ ಯುವತಿಯ ಬಗ್ಗೆ ಹೆಮ್ಮೆಯಾಗುತ್ತಿದೆ. ಸಂತೋಷ ಮತ್ತು ಯಶಸ್ವಿ ವೈವಾಹಿಕ ಜೀವನವನ್ನು ದೇವರು ನಿಮಗೆ ಆಶೀರ್ವದಿಸಲಿ. ನಿಮಗಾಗಿ ಈ ಸುಂದರ ಕುಟುಂಬವನ್ನು ಆಯ್ಕೆ ಮಾಡಲು ಸಾಧ್ಯವಾಗಿದ್ದಕ್ಕಾಗಿ ನಾನು ಅದೃಷ್ಟಶಾಲಿ ಎಂದು ಹೇಳುವುದಿಲ್ಲ. ಎರಡು ಕುಟುಂಬಗಳು ಒಟ್ಟಿಗೆ ಸೇರುವುದೇ ಮದುವೆ ಎನ್ನುವುದು ನನ್ನ ನಂಬಿಕೆ. ನನ್ನ ಹೃದಯದಲ್ಲಿ ಮಿಶ್ರ ಭಾವನೆಗಳಿವೆ. ಆದರೆ ನಿಮ್ಮ ಪ್ರೀತಿ ಮತ್ತು ಸಂತೋಷವೇ ಹೆಚ್ಚಾಗಿದೆ".
"ಕರ್ತು ನೀನು ಯಾವ ತಾಯಿಯೂ ಬಯಸಬಹುದಾದ ಅತ್ಯುತ್ತಮ ಮಗಳು. ನೀವು ನಮ್ಮ ಕುಟುಂಬಗಳಿಗೆ ಉತ್ತಮ ಕೊಡುಗೆಯಾಗಿದ್ದೀರಿ. ನೀವು ನನಗೆ ನೀಡಿದ ಈ ಅದ್ಭುತ ಅನುಭವಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು. ಎಂಗೇಜ್‌ಮೆಂಟ್ ಫೋಟೊಗಳನ್ನು ಹಂಚಿಕೊಂಡಿದ್ದರು. ಆದರೆ ಅಧಿಕೃತವಾಗಿ ಎಂಗೇಜ್‌ಮೆಂಟ್ ವಿಚಾರವನ್ನು ಹೇಳಿರಲಿಲ್ಲ.

ಸದ್ಯ ಕಾರ್ತಿಕಾ ಕೈ ಹಿಡಿಯುವ ರೋಹಿತ್ ಯಾರು? ಆತನ ಹಿನ್ನೆಲೆ ಏನು? ಎನ್ನುವ ಮಾಹಿತಿ ಸಿಕ್ಕಿಲ್ಲ. ಆತನ ಇನ್‌ಸ್ಟಾ ಪೇಜ್ ಕೂಡ ಲಾಕ್ ಆಗಿದೆ. ತೆಲುಗಿನ 'ಜೋಶ್' ಸಿನಿಮಾ ಮೂಲಕ ನಟಿ ಕಾರ್ತಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದು ನಾಗಾರ್ಜುನಾ ಪುತ್ರ ನಾಗ ಚೈತನ್ಯಾಗೂ ಚೊಚ್ಚಲ ಸಿನಿಮಾ ಆಗಿತ್ತು. ಆದರೆ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಬಳಿಕ 'ಕೋ' ಎನ್ನುವ ತಮಿಳು ಚಿತ್ರದಲ್ಲಿ ಆಕೆ ನಟಿಸಿದ್ದರು. ಸಿನಿಮಾ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು.
ಜೂ. ಎನ್‌ಟಿಆರ್ ಜೊತೆ 'ದಮ್ಮು' ಚಿತ್ರದಲ್ಲಿ ಕಾರ್ತಿಕಾ ಮಿಂಚಿದ್ದರು. ಕನ್ನಡದ 'ಬೃಂದಾವನ' ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ದರ್ಶನ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ನಟನೆಗೆ ಅವಕಾಶ ಇರುವ ಪಾತ್ರದಲ್ಲಿ ಕಾರ್ತಿಕಾ ನಟಿಸಿದ್ದರು. ಸಿನಿಮಾ ಒಂದು ಹಂತಕ್ಕೆ ಪ್ರೇಕ್ಷಕರ ಮನಗೆದ್ದಿತ್ತು. ತೆಲುಗಿನಲ್ಲಿ ತಾರಕ್, ಕಾಜಲ್ ಅಗರ್‌ವಾಲ್ ಇದೇ ಕಥೆಯಲ್ಲಿ ನಟಿಸಿ ಗೆದ್ದಿದ್ದರು.
ಕನ್ನಡದ 'ಬೃಂದಾವನ' ಬಳಿಕ 'ಬ್ರದರ್ ಆಫ್ ಬೊಮ್ಮಾಲಿ' ಹಾಗೂ 'ಪುರಂಪೊಕು ಎಂಗಿರ ಪೊದ್ದುವುಡಮೈ' ಎನ್ನುವ ಸಿನಿಮಾಗಳಲ್ಲಿ ಕಾರ್ತಿಕಾ ಬಣ್ಣ ಹಚ್ಚಿದ್ದರು. ಎರಡು ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. 'ಆರಂಭ್' ಎನ್ನುವ ಹಿಂದಿ ಹಿಸ್ಟಾರಿಕಲ್ ಫಿಕ್ಷನ್ ಧಾರಾವಾಹಿಯಲ್ಲಿ 'ದೇವಸೇನಾ' ಪಾತ್ರದಲ್ಲಿ ರಾಧ ಪುತ್ರಿ ಮಿಂಚಿದ್ದರು. ಆ ಬಳಿಕ ಮತ್ತೆ ಯಾವುದೇ ಪ್ರಾಜೆಕ್ಟ್‌ನಲ್ಲಿ ಕಾರ್ತಿಕಾ ಕೆಲಸ ಮಾಡಲಿಲ್ಲ.


Click it and Unblock the Notifications











