ಪಾರ್ವತಿ ಮೆನನ್ ಕಾಲದಲ್ಲಿ ನಾವು ಬದುಕುತ್ತಿರುವುದು ನಮ್ಮ ಪುಣ್ಯ, ಮಿಲನಾ ನಾಯಕಿಯ ಧೈರ್ಯಕ್ಕೆ ಸಲಾಂ ಹೊಡೆದ ಮಲಯಾಳಂ ಚಿತ್ರರಂಗ..!
ಪಾರ್ವತಿ ತಿರುವೋತ್ತು / ಮೆನನ್.. ಕನ್ನಡಿಗರಿಗೆ ಅಪರಿಚತರೇನಲ್ಲ. ಪುನೀತ್ ರಾಜ್ ಕುಮಾರ್ ಅಭಿನಯದ ''ಮಿಲನ'' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ''ಮಳೆ ಬರಲಿ ಮಂಜೂ ಇರಲಿ''.. ''ಪೃಥ್ವಿ''.. ಮತ್ತು ''ಅಂದರ್ ಬಾಹರ್'' ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು.
ಇನ್ನೂ ಮಾಲಿವುಡ್‌ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರುವಾಸಿಯಾಗಿಲ್ಲ. ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು ಇವರು. ಮಲಯಾಳಂನ ಸ್ಟಾರ್ ಒಬ್ಬರ ವಿರುದ್ಧ ನೇರಾನೇರವಾಗಿಯೇ ವಾಗ್ದಾಳಿ ನಡೆಸಿದ್ದ ಪಾರ್ವತಿ ವಿರುದ್ಧ ಆ ಸ್ಟಾರ್ ಅಭಿಮಾನಿಗಳು ಆ ನಂತರ ಸೈಬರ್ ಯುದ್ಧವನ್ನೇ ಸಾರಿದ್ದರು. ಆದರೆ ಪಾರ್ವತಿ ಮಾತ್ರ ಕುಗ್ಗಲಿಲ್ಲ. ಎದೆಗುಂದಲಿಲ್ಲ. ಹೆದರಲಿಲ್ಲ. ಬೆದರಲಿಲ್ಲ.

ಇಂಥಾ ಪಾರ್ವತಿ ಮೆನನ್ ಇರುವ ಕಾಲದಲ್ಲಿ ನಾವು ಇರುವುದೇ ನಮ್ಮ ದೊಡ್ಡ ಸೌಭಾಗ್ಯ ಎಂದು ಮಾಲಿವುಡ್‌ನ ನಟಿ ಮಾಲಾ ಪಾರ್ವತಿ ಹೇಳಿದ್ದಾರೆ. ಪಾರ್ವತಿ ತಿರುವೋತ್ತು / ಮೆನನ್ ಅವರ ಸಾಹಸ ಮತ್ತು ಧೈರ್ಯಕ್ಕೆ ಬಹುಪರಾಕ್ ಹಾಕಿದ್ದಾರೆ.
ಹೌದು, ನಿಮಗೆ ಗೊತ್ತು. ಸದ್ಯಕ್ಕೆ ಮಲಯಾಳಂ ಚಿತ್ರರಂಗದಲ್ಲಿ ಕಾಮದ ಘಾಟು ಅಲ್ಲಿನವರ ಮೂಗಿಗೆ ಬಡಿಯುತ್ತಿದೆ. ಹತ್ತಾರು ಪ್ರಕರಣಗಳು ಒಂದೊಂದಾಗಿಯೇ ಹೊರ ಬರುತ್ತಿವೆ. ಆದರೆ.. ಹಿಂದೆ ಹೀಗೆ ಇರಲಿಲ್ಲ. ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂದು ಹೇಳಿದರೂ ಕೂಡ ಯಾರು ನಂಬಿರಲಿಲ್ಲ. ಇಷ್ಟೇ ಯಾಕೆ 2017ರಲ್ಲಿ ಕನ್ನಡವೂ ಸೇರಿ ಬಹುಭಾಷೆಯಲ್ಲಿ ತಮ್ಮ ಅಭಿನಯದಿಂದ ಚಿತ್ರರಸಿಕರ ಹೃದಯ ಗೆದ್ದ ನಾಯಕಿಯ ಮೇಲೆ ಮಲಯಾಳಂ ಚಿತ್ರರಂಗದ್ದೇ ನಾಯಕ ದಿಲೀಪ್ ಎಗರಿ ಹಿಂಸೆ ನೀಡಿದ್ದಾಗ ಕೂಡ ಯಾರು ಮಾತನಾಡಿರಲಿಲ್ಲ.

ಬೇರೆಯವರ ಕಥೆ ಬಿಡಿ ಆ ಕಾಲದಿಂದ ಮೊನ್ನೆಯವರೆಗೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್, ಆ ನಟಿಯನ್ನು ಕರೆದು ಆಕೆಯ ದುಃಖ ಕೇಳಲಿಲ್ಲ. ಬದಲಿಗೆ ಮೋಹನ್ಲಾಲ್ ಅವರೇ ದಿಲೀಪ್ ಅವರ ಮೇಲಿದ್ದ ನಿಷೇದವನ್ನು ತೆರೆವುಗೊಳಿಸಿ, ಅವರನ್ನು ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ ಮರು ಸೇರ್ಪಡೆ ಮಾಡಿರುವುದಾಗಿ ಹೇಳಿಕೆ ನೀಡಿದ್ದರು. ಮಲೆಯಾಳಂ ಚಿತ್ರರಂಗದಲ್ಲಿ ಮೀಟೂ ಬಗ್ಗೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಮೀಟೂ ಒಂದು ಅಭಿಯಾನ ಅಂತ ಭಾವಿಸಬೇಡಿ. ಇದೊಂದು ಫ್ಯಾಶನ್ ಆಗಿಬಿಟ್ಟಿದೆ. ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು.
ಆಗ ಮೋಹನ್ ಲಾಲ್ ಅವರ ಈ ಹೇಳಿಕೆಗಳಿಗೆ ಕೆಂಡ ಕಾರಿದವರಲ್ಲಿ ಈ ಪಾರ್ವತಿ ಮೆನನ್ ಕೂಡ ಒಬ್ಬರು. ಅಲ್ಲಿಂದಾಚೆ 2017ರಲ್ಲಿ ಹಿರಿಯ ನಟಿ ರೇವತಿ ಜೊತೆ ಸೇರಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ಪಾರ್ವತಿ ಆ ನಂತರ ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಕುರಿತು ಧ್ವನಿ ಎತ್ತುತ್ತಾನೇ ಬಂದಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಕಾಮಾಂಧರ ಸಂಖ್ಯೆ ಹೆಚ್ಚಿದೆ ಎಂದು ಹೇಳುತ್ತಾನೇ ಇದ್ದರು.

ಇವರ ಈ ನಿರಂತರ ಹೋರಾಟದ ಫಲವೆಂಬಂತೆ ಈಗ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ಮಲಯಾಳಂ ಚಿತ್ರರಂಗದ ಮನಸ್ಥಿತಿ ಮತ್ತು ಅಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿಯ ಕುರಿತು ವರದಿಯನ್ನು ಸಲ್ಲಿಸಿದೆ. ಒಂದೊಂದೇ ಕಥೆಗಳು ಈಗ ಹೊರ ಬರುತ್ತಿವೆ. ಹೀಗಾಗಿಯೇ ಪಾರ್ವತಿ ಮೆನನ್ ಅವರಿಗೆ ಧನ್ಯವಾದವನ್ನು ಹೇಳಿರುವ ಮಾಲಾ ಪಾರ್ವತಿ ನನಗೆ ಇದೊಂದು ಸ್ವಾತಂತ್ರ್ಯ ಹೋರಾಟ ಎಂದು ಅನಸುತ್ತಿದೆ ಎಂದಿದ್ದಾರೆ. ಪಾರ್ವತಿ ತಿರುವೋತ್ತು ಕಾಲದಲ್ಲಿ ನಾವು ಬದುಕಿರುವುದೇ ನಮ್ಮ ಪಾಲಿಗೆ ದೊಡ್ಡ ಗೌರವ ಎಂದಿದ್ದಾರೆ. ಹೊಸ ಪ್ರಪಂಚ ಸೃಷ್ಟಿಸುವ ಕುರಿತು ಮೊದಲಿಂದ ಆಲೋಚನೆ ಮಾಡುತ್ತಾ ಬಂದ ಪಾರ್ವತಿ ನಿಜಕ್ಕೂ ದಾರ್ಶನಿಕ ಮಹಿಳೆ ಎಂದೆಲ್ಲ ಹೊಗಳಿದ್ದಾರೆ.


Click it and Unblock the Notifications











