Malavika Mohanan: ನಟಿಯರ ಬಗ್ಗೆ ಹಸಿ ಸತ್ಯ ಬಿಚ್ಚಿಟ್ಟ ನಟಿ ಮಾಳವಿಕಾ ಮೋಹನನ್
ನಟಿಯರು ಸಿನಿಮಾಗಳಲ್ಲಿ, ಟಿವಿಗಳಲ್ಲಿ, ಜಾಹೀರಾತುಗಳಲ್ಲಿ ಅದೆಷ್ಟು ಸುಂದರವಾಗಿ ಕಾಣುತ್ತಾರೆ. ಅವರ ತ್ವಚೆ ಎಷ್ಟು ನುಣುಪಾಗಿ, ನಾಜೂಕಾಗಿ, ತುಸುವೂ ಓರೆ-ಕೋರೆ ಇಲ್ಲದ ರೀತಿ ಇರುತ್ತದೆ ನಮ್ಮ ತ್ವಚೆ ಏಕೆ ಅವರ ರೀತಿ ಇಲ್ಲ ಎಂದು ಅದೆಷ್ಟೋ ಯುವತಿಯರು ಹಲುಬಿರುತ್ತಾರೆ.
ಆದರೆ ಸತ್ಯ ಅದಲ್ಲ, ಸಿನಿಮಾಗಳಲ್ಲಿ, ಟಿವಿಗಳಲ್ಲಿ, ಜಾಹೀರಾತುಗಳಲ್ಲಿ ಕಾಣಿಸುವ ನಟಿಯರ ಅಂದ, ಸೌಂದರ್ಯ ಯಾವುದು ಸತ್ಯವಲ್ಲ ಎಂದು ಸ್ವತಃ ನಟಿಯೊಬ್ಬರು ಹೇಳಿದ್ದಾರೆ. ನಟಿಯರ ತ್ವಚೆ ಅಷ್ಟು ಉತ್ತಮವಾಗಿ ಕಾಣುವುದು ಹೇಗೆಂಬ ಗುಟ್ಟನ್ನೂ ಆ ನಟಿ ಬಿಚ್ಚಿಟ್ಟಿದ್ದಾರೆ.
ನಟಿ ಮಾಳವಿಕಾ ಮೋಹನನ್ ದಕ್ಷಿಣ ಭಾರತ ಚಿತ್ರರಂಗದ ಬ್ಯುಸಿ ನಟಿ, ಕನ್ನಡದ ಸಿನಿಮಾದಲ್ಲಿಯೂ ನಟಿಸಿರುವ ಈ ಮಲಯಾಳಿ ನಟಿ ಆ ಬಳಿಕ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ತೆರೆಯ ಮೇಲೆ ಬಬ್ಲಿ-ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ನಿಜ ಜೀವನದಲ್ಲಿ ಮಾತ್ರ ಪಕ್ಕಾ ಹೊರಾಟಗಾರ್ತಿ. ಮಹಿಳಾಪರ ನಿರ್ಭೀತರಾಗಿ ಧನಿ ಎತ್ತುತ್ತಿರುತ್ತಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿಯರ ಕಲೆ ರಹಿತ ತ್ವಚೆಯ ಬಗ್ಗೆ ತಮ್ಮದೇ ಉದಾಹರಣೆ ನೀಡಿ ಪೋಸ್ಟ್ ಬರೆದಿದ್ದಾರೆ ಮಾಳವಿಕಾ, ''ನನಗೆ ಒಂದು ಮುಖ್ಯವಾದ ಚಿತ್ರೀಕರಣ ಮಾಡಲಿಕ್ಕಿತ್ತು. ಆದರೆ ಮೊಡವೆಯೊಂದು ಚಿತ್ರೀಕರಣದ ಎರಡು ದಿನ ಹಿಂದೆ ಕಾಣಿಸಿಕೊಂಡಿತು. ಆರೋಗ್ಯಕರ ಊಟವನ್ನೇ ನಾನು ಮಾಡುತ್ತೇನೆ, ದೇಹವನ್ನು, ತ್ವಚೆಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸದಾ ಶ್ರಮಿಸುತ್ತೇನೆ. ನಮ್ಮ ಚರ್ಮದ ಆರೋಗ್ಯವು ದೇಹದ ಆರೋಗ್ಯದ ಪ್ರತಿಬಿಂಬ ಎಂಬುದನ್ನು ನಾನು ನಂಬಿದ್ದೇನೆ'' ಎಂದಿದ್ದಾರೆ.
Recommended Video

''ಸಿನಿಮಾ, ಜಾಹೀರಾತು, ಚಿತ್ರಗಳಲ್ಲಿ ನಟಿಯರ ತ್ವಚೆ ಕಲೆ ರಹಿತವಾಗಿ, ಸ್ವಚ್ಛವಾಗಿ ಕಾಣಿಸಬಹುದು, ಅವರ ದೇಹ ಸಪೂರವಾಗಿ ಕಾಣಿಸಬಹುದು, ಉಗುರುಗಳು ಅಂದವಾಗಿ ಕಾಣಿಸಬಹುದು ಆದರೆ ನನ್ನನ್ನು ನಂಬಿ ಅದ್ಯಾವುದು ನಿಜವಲ್ಲ. ನಾನೂ ಸಹ ನಿನ್ನೆಯಷ್ಟೆ ಒಂದು ಜಾಹೀರಾತು ಚಿತ್ರೀಕರಣ ಮಾಡಿದ್ದೇನೆ. ಅದರಲ್ಲಿ ನನ್ನನ್ನು ನೋಡಿದರೆ ಅಬ್ಬಾ ಎಷ್ಟು ಆರೋಗ್ಯವಂತ, ಸುಂದರ ತ್ವಚೆ ಎನ್ನುತ್ತೀರಿ. ಆದರೆ ನಿಜವೇ ಬೇರೆ'' ಎಂದಿರುವ ಮಾಳವಿಕಾ ಮೋಹನನ್, ಮೊಡವೆ ಎದ್ದಿರುವ ತಮ್ಮ ಮುಖದ ಚಿತ್ರವನ್ನು ಹಂಚಿಕೊಂಡಿದ್ದಾರೆ, ಮೇಕಪ್ ರಹಿತವಾಗಿ.
ನಾವು ಸುಂದರವಾಗಿ ಕಾಣಲೆಂದು ಶ್ರಮಿಸುವ ಇಡೀ ತಂಡವೇ ನಮ್ಮ ಜೊತೆ ಇದೆ. ಅವರ ಶ್ರಮದಿಂದ ನಟಿಯರಾದ ನಾವು ಸುಂದರವಾಗಿ ಕಾಣುತ್ತೇವೆ. ಆದರೆ ನಿಜ ಜೀವನದಲ್ಲಿ ಕತೆ ಬೇರೆಯದ್ದೇ ಆಗಿರುತ್ತದೆ. ನಾವು ಸಹ ಇತರರಂತೆ ಸಾಮಾನ್ಯರೇ. ಹಾಗಾಗಿ ಅತ್ಯುತ್ತಮ ತ್ವಚೆ, ಅದ್ಭುತ ಸೌಂದರ್ಯ ಎಂದೆಲ್ಲ ಯೋಚಿಸುತ್ತಾ ಇರಬೇಡಿ. ಮೊಡವೆ, ಗುಳ್ಳೆ, ಕಲೆ ಯಾವುದೇ ಆಗಲಿ ಸಹಜವಾಗಿ ಬರುವ ಅತಿಥಿಗಳನ್ನು ಸ್ವಾಗತಿಸಿ ಅವೆಲ್ಲ ನಿಮ್ಮತನದ ಭಾಗಗಳೇ ಆಗಿರುತ್ತವೆ. ಸೌಂದರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ'' ಎಂದಿದ್ದಾರೆ ನಟಿ ಮಾಳವಿಕಾ ಮೋಹನನ್.
ಮಾಳವಿಕಾ ಮೋಹನನ್ ಮಲಯಾಳಂ ನಟಿಯಾಗಿದ್ದು, ಕನ್ನಡದ 'ನಾನು ಮತ್ತು ವರಮಹಾಲಕ್ಷ್ಮಿ' ಸಿನಿಮಾದಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆ 'ಪೆಟ್ಟಾ', ವಿಜಯ್ ಜೊತೆ 'ಮಾಸ್ಟರ್', 'ಮಾರನ್' ಸಿನಿಮಾಗಳಲ್ಲಿಯೂ ನಟಿ ನಟಿಸಿದ್ದಾರೆ. ಇದೀಗ 'ಯುದ್ಧ್ರ' ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











