ಬ್ಯಾಗ್‌ನಲ್ಲಿ ಮಲ್ಲಿಗೆ ಹೂ ಇಟ್ಕೊಂಡಿದ್ದಕ್ಕೆ 'ಗಜ' ನಟಿ ನವ್ಯಾ ನಾಯರ್‌ಗೆ ಭಾರೀ ದಂಡ!
ಮಲಯಾಳಂ ನಟಿ ನವ್ಯಾ ನಾಯರ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಆಕೆ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದರು. ಈ ವೇಳೆ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಶಾಕ್ ಎದುರಾಗಿದೆ. ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿ ಮಲ್ಲಿಗೆ ಹೂವಿನ ದಿಂಡು ಇಟ್ಟುಕೊಂಡಿದ್ದಕ್ಕೆ ಭಾರೀ ದಂಡ ತೆರುವಂತಾಗಿದೆ.
ವಿಕ್ಟೋರಿಯಾದ ಮಲಯಾಳಿ ಸಂಘ ಆಸ್ಟ್ರೇಲಿಯಾದಲ್ಲಿ ಓಣಂ ಹಬ್ಬ ಆಚರಿಸಿದ್ದಾರೆ. ಅದಕ್ಕೆ ಮುಖ್ಯ ಅತಿಥಿಯಾಗಿ ನವ್ಯಾ ನಾಯರ್ ಅವರನ್ನು ಆಹ್ವಾನಿಸಿದ್ದರು. ಸಿಂಗಾಪುರಕ್ಕೆ ಹೋಗಿ ಅಲ್ಲಿಂದ ಮೆಲ್ಬೋರ್ನ್ ವಿಮಾನಕ್ಕೆ ಹೋಗಿ ಇಳಿದಿದ್ದಾರೆ. ಹೊರಡುವಾಗ ತಂದೆ ಎರಡು ಮಲ್ಲಿಗೆ ಹೂ ದಿಂಡನ್ನು ಮಗಳಿಗೆ ಕೊಟ್ಟಿದ್ದರು. ಒಂದನ್ನು ಮುಡಿದುಕೊಳ್ಳಲು ಹೇಳಿ ಮತ್ತೊಂದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಕಾರ್ಯಕ್ರಮಕ್ಕೆ ಮುಡಿದುಕೊಳ್ಳಲು ಹೇಳಿದ್ದರು.

ತಂದೆ ಹೇಳಿದಂತೆ ಒಂದು ಹೂವಿನ ದಿಂಡು ಮುಡಿದುಕೊಂಡು ಮತ್ತೊಂದನ್ನು ತಮ್ಮ ಬ್ಯಾಗ್‌ನಲ್ಲಿ ನವ್ಯಾ ಇಟ್ಟುಕೊಂಡಿದ್ದಾರೆ. ಆಕೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಹ್ಯಾಂಡ್ ಬ್ಯಾಗ್‌ನಲ್ಲಿ ಮಲ್ಲಿಗೆ ಹೂ ದಿಂಡು ಕಂಡಿದೆ. ಹಾಗಾಗಿ ನಿಮಯದಂತೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ನವ್ಯಾ ಮಾತೃಭೂಮಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
"ಅಪ್ಪ ನನಗೆ ಮಲ್ಲಿಗೆ ಹೂ ತಂದಿದ್ರು. ದಿಂಡನ್ನು ಎರಡಾಗಿ ಕತ್ತರಿಸಿ ಒಂದನ್ನು ಮುಡಿಯಲು ಹೇಳಿ ಮತ್ತೊಂದನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಳಿಕ ಮುಡಿಯಲು ಹೇಳಿದ್ರು. ನನ್ನ ಕ್ಯಾರಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದೆ. ನಾನು ಮಾಡಿದ್ದು ಕಾನೂನಿಗೆ ವಿರುದ್ಧವಾಗಿತ್ತು. ನಾನು ತಿಳಿಯದೆ ಮಾಡಿದ ತಪ್ಪು. ಆದರೂ ಕ್ಷಮೆ ಇಲ್ಲ. 15 ಸೆಂ.ಮೀ ಮಲ್ಲಿಗೆ ತಿಂಡು ತಂದಿದ್ದಕ್ಕೆ 1,980 ಡಾಲರ್(1.14 ಲಕ್ಷ ರೂ.) ದಂಡ ಪಾವತಿಸಲು ಹೇಳಿದ್ರು. ತಪ್ಪು ಉದ್ದೇಶಪೂರ್ವಕವಾಗಿರಲಿಲ್ಲ. 28 ದಿನಗಳಲ್ಲಿ ದಂಡ ಪಾವತಿಸಬೇಕು ಎಂದು ಸೂಚಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾಗೆ ಯಾರೇ ಪ್ರಯಾಣಿಕರು ಹೋಗಿ ಇಳಿದರೂ ಒಂದಷ್ಟು ನಿಯಮಗಳನ್ನು ಪಾಲಿಸಲೇ ಬೇಕು. ಕೆಲ ವಸ್ತುಗಳು ತಮ್ಮ ಬಳಿ ಇರುವ ಬಗ್ಗೆ ಮೊದಲೇ ಘೋಷಿಸಬೇಕು. ಎಲ್ಲಾ ತರಹದ ಆಹಾರ ಪದಾರ್ಥ, ಸಸ್ಯ ಸಾಮಗ್ರಿಗಳು ಮತ್ತು ಪ್ರಾಣಿ ವಸ್ತುಗಳು ಬಂದೂಕು, ಶಸ್ತ್ರಾಸ್ತ್ರ, ಕರೆನ್ಸಿ, ಕೆಲ ಔಷಧಗಳು ಇರುವ ಬಗ್ಗೆ ಮೊದಲೇ ಮಾಹಿತಿ ನೀಡಬೇಕಿರುತ್ತದೆ. ದೇಶದೊಳಗೆ ಕೀಟಗಳು ಮತ್ತು ರೋಗಗಳು ಪ್ರವೇಶಿಸುವುದನ್ನು ತಡೆಯಲು ಆಸ್ಟ್ರೇಲಿಯಾ ಕೆಲ ಕಠಿಣ ಜೈವಿಕ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸುತ್ತದೆ. ಪರೀಕ್ಷಿಸದ ಸಸ್ಯ ವಸ್ತುಗಳ ಮೇಲೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಆಸ್ಟೇಲಿಯಾಗೆ ವಿಮಾನ ಏರಿ ಪ್ರಯಾಣಿಸುತ್ತಿರುವ ಫೊಟೊ, ವೀಡಿಯೋಗಳನ್ನು ನವ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 2008ರಲ್ಲಿ 'ಗಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನವ್ಯಾ ಎಂಟ್ರಿ ಕೊಟ್ಟಿದ್ದರು. 'ಐತಲಕ್ಕಡಿ' ಹಾಡಿನಲ್ಲಿ ದರ್ಶನ್ ಜೊತೆ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು.
'ನಮ್ಮೆಜಮಾನ್ರು', 'ಭಾಗ್ಯದ ಬಳೆಗಾರ', 'ಬಾಸ್', 'ದೃಶ್ಯ' ಹಾಗೂ 'ದೃಶ್ಯ-2' ಕನ್ನಡ ಸಿನಿಮಾಗಳಲ್ಲಿ ನವ್ಯಾ ಬಣ್ಣ ಹಚ್ಚಿದ್ದರು. ಕೇರಳದ ಅಲಪುಳಾದಲ್ಲಿ ಹುಟ್ಟಿ ಬೆಳೆದ ನವ್ಯಾ ಚಿಕ್ಕಂದಿನಲ್ಲೇ ಕ್ಲಾಸಿಕಲ್ ಡ್ಯಾನ್ಸ್ ಕಲಿತಿದ್ದರು. ಹಾಗಾಗಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 2001ರಲ್ಲಿ 'ಇಷ್ಟಂ' ಸಿನಿಮಾ ಮಲಯಾಳಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.


Click it and Unblock the Notifications











