ಇದು ಹೇಡಿತನ, ನಟ ಮೋಹನ್ ಲಾಲ್ ಬಗ್ಗೆ 'ಮಿಲನಾ' ನಟಿ ಪಾರ್ವತಿ ಶಾಕಿಂಗ್ ಕಾಮೆಂಟ್ಸ್
ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಅಲ್ಲೋಖ ಕಲ್ಲೋಲ ಸೃಷ್ಟಿಸಿದೆ. ಚಿತ್ರರಂಗದ ಕರಾಳಮುಖದ ಬಗ್ಗೆ ಸಾಕಷ್ಟು ಜನ ನಟ-ನಟಿಯರು ಮಾತನಾಡುತ್ತಲೇ ಇದ್ದಾರೆ. ಬರೀ ಚಿತ್ರರಂಗ ಮಾತ್ರವಲ್ಲ ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದೇ ವಿಚಾರ ಈಗ ಮಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು, ಅಥವಾ ಹೆಣ್ಣು ಮಕ್ಕಳಿಗೆ ಚಿತ್ರರಂಗದಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಅದರಲ್ಲೂ ಮೀಟು ಅಭಿಯಾನ ಶುರುವಾದ ಬಳಿಕ ಸಾಕಷ್ಟು ನಟಿಯರು ತಮಗಾದ ಕಹಿ ಅನುಭವಗಳನ್ನು ಬಹಿರಂಗವಾಗಿ ಬಿಚ್ಚಿಡುತ್ತಿದ್ದಾರೆ. ಆದರೆ ಅದನ್ನು ಕೆಲವರು ಒಪ್ಪಲು ಸಿದ್ಧರಿಲ್ಲ. ಎಲ್ಲದಕ್ಕೂ ಸಾಕ್ಷಿ ಕೇಳುವಂತಾಗಿದೆ.

ಇನ್ನು ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿಯಿಂದ ವರದಿ ಕೇಳಿತ್ತುಲ ಕೂಲಂಕುಷವಾಗಿ ತನಿಖೆ ನಡೆಸಿದ ಕಮಿಟಿ ಸರ್ಕಾರಕ್ಕೆ ವರದಿ ನೀಡಿದೆ. ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಜವಾಗಿಯೂ ನಡೆಯುತ್ತಿದೆ ಎಂದು ಕಾಮುಕರ ಮುಖವಾಡ ಬಯಲು ಮಾಡಿದೆ.
ಹೇಮಾ ವರದಿ ಬೆನ್ನಲ್ಲೇ ಕೆಲವರು ತಮಗಾದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಂಜಿತ್ ಹಾಗೂ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (AMMA)ನಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿದ್ದಿಕಿ ರಾಜಿನಾಮೆ ನೀಡಿದ್ದರು. ಅಷ್ಟೇ ಅಲ್ಲ AMMA ಅಧ್ಯಕ್ಷ ಸ್ಥಾನದಿಂದ ಖ್ಯಾತ ನಟ ಮೋಹನ್ ಲಾಲ್ ಸಹ ಹೊರಬಂದಿದ್ದಾರೆ. ಇದು ಎಲ್ಲರ ಹುಬ್ಬೇರಿಸಿದೆ.

ಇನ್ನು ಚಿತ್ರರಂಗದಲ್ಲಿ ನಟಿಯರ ಮೇಲಿನ ದೌರ್ಜನ್ಯದ ಬಗ್ಗೆ ನಟಿ ಪಾರ್ವತಿ ಮೆನನ್ ಸಾಕಷ್ಟು ಬಾರಿ ದನಿ ಎತ್ತಿದ್ದಾರೆ. ಕನ್ನಡದ 'ಮಿಲನಾ' ಚಿತ್ರದಲ್ಲೂ ಆಕೆ ನಟಿಸಿದ್ದರು. ಇದೀಗ ಮೋಹನ್ ಲಾಲ್ AMMA ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಬಗ್ಗೆಯೂ ಆಕೆ ಪ್ರತಿಕ್ರಿಯಿಸಿದ್ದಾರೆ. ಇದು ಕೈಲಾಗದವರ ಕೆಲಸ ಎಂದು ವ್ಯಂಗ್ಯವಾಡಿದ್ದಾರೆ.
ಸಂದರ್ಶನವೊಂದರಲ್ಲಿ ನಟಿ ಪಾರ್ವತಿ ಮೆನನ್ ಮಾತನಾಡಿದ್ದಾರೆ. ಅಮ್ಮ ಸಂಸ್ಥೆಯ ಆಡಳಿತಗಾರರ ಕ್ರಮದ ಬಗ್ಗೆ ಆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಲೈಂಗಿಕ ದೂರುಗಳ ಹಿನ್ನೆಲೆಯಲ್ಲಿ ಮಲಯಾಳಂ ಕಲಾವಿದರ ಸಂಘದ ವಿವಿಧ ಸ್ಥಾನಗಳಿಗೆ ಮೋಹನ್ ಲಾಲ್ ಸೇರಿದಂತೆ ಪದಾಧಿಕಾರಿಗಳಯ ರಾಜೀನಾಮೆ ನೀಡಿರುವುದು ಹೇಡಿತನದ ಕೃತ್ಯ ಎಂದು ಅವರು ಟೀಕಿಸಿದ್ದಾರೆ.
"ಈ ಸುದ್ದಿ ಕೇಳಿ ನನಗೆ ಶಾಕ್ ಆಯ್ತು. ಇದು ಎಂತಹ ಹೇಡಿತನ. ಈ ವಿಷಯವನ್ನು ಮಾಧ್ಯಮಗಳಿಗೆ ವಿವರಿಸುವ ಸ್ಥಿತಿಯಲ್ಲಿರುವವರು ಜವಾಬ್ದಾರಿಯಿಂದ ಹೇಗೆ ಹಿಂದೆ ಸರಿಯುತ್ತಾರೆ?" ಎಂದು ಪಾರ್ವತಿ ಪ್ರಶ್ನಿಸಿದ್ದಾರೆ. ಮಲಯಾಳಂ ಕಲಾವಿದರ ಸಂಘದವರು (AMMA) ಹೇಗೆ ಕೆಲಸ ಮಾಡುತ್ತಾರೆ ಎಂದು ನನಗೆ ಚೆನ್ನಾಗಿ ಗೊತ್ತು. ನಾನು ಹಿಂದೆ ಸಂಘದಲ್ಲಿ ಕೆಲಸ ಮಾಡಿದ್ದೆ. ನಾನು ರಾಜಿನಾಮೆ ನೀಡಲು ಕಾರಣವಿತ್ತು. ಇಂತ ನಡೆಯಿಂದ ಅವರು ಎಲ್ಲರನ್ನೂ ಯಾಮಾರಿಸಲು ಸಾಧ್ಯವಿಲ್ಲ. ಈಗ ಅವರ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತಿದೆ" ಎಂದಿದ್ದಾರೆ.
"ಸಂಘದಲ್ಲಿ ನಮ್ಮ ಅಗತ್ಯಗಳ ಬಗ್ಗೆ ಮಾತನಾಡುವ ಹಕ್ಕು ನನ್ನಂತಹ ನಟಿಯರಿಗೆ ಇಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ಉತ್ತಮ ನಾಯಕತ್ವದ ಅಗತ್ಯವಿದೆ. ಪ್ರತಿಯೊಬ್ಬರೂ ಭವಿಷ್ಯದಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು" ಎಂದು ನಟಿ ಪಾರ್ವತಿ ಆಗ್ರಹಿಸಿದ್ದಾರೆ.


Click it and Unblock the Notifications











