Shobana: ಹಿರಿಯ ನಟಿ ಶೋಭನಾ ಮನೆಯಲ್ಲಿ ಕಳ್ಳತನ: ಕಳ್ಳಿ ಸಿಕ್ಕಿಬಿದ್ದರೂ ಕ್ಷಮಿಸಿ ಬಿಟ್ಟಿದ್ದೇಕೆ?
ಬಹುಭಾಷಾ ನಟಿ ಶೋಭನಾ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೇರಳ ಚೆಲುವೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಅಂದಹಾಗೆ ಇತ್ತೀಚೆಗೆ ಶೋಭನಾ ಮನೆಯಲ್ಲಿ ನಗದು ಕಳುವಾಗಿದೆ. ಮನೆ ಕೆಲಸದಾಕೆಯೇ ಹಣ ಕದ್ದು ಸಿಕ್ಕಿಬಿದ್ದಿದ್ದಾಳೆ. ಆದರೆ ಈ ವಿಚಾರ ತಿಳಿದು ನಟಿ ಶೋಭನಾ ಆಕೆಯನ್ನು ಕ್ಷಮಿಸಿ ಬಿಟ್ಟಿದ್ದಾರೆ. ಮತ್ತೆ ಮನೆ ಕೆಲಸಕ್ಕೆ ನಿಯಮಿಸಿಕೊಂಡಿದ್ದಾರೆ.
ಕಳ್ಳರಿಗೆ ಯಾವ ಮನೆಯಾದರೆ ಏನು? ಇನ್ನು ಉಂಡ ಮನೆಗೆ ದ್ರೋಹ ಬಗೆಯುವವರು ಕೂಡ ಇರುತ್ತಾರೆ. ಸಮಯದ ಸಂದರ್ಭ ಪರಿಸ್ಥಿತಿ ಕೂಡ ಕೆಲವೊಮ್ಮೆ ತಪ್ಪು ಮಾಡುವಂತೆ ಮಾಡಿಬಿಡುತ್ತದೆ. ಶೋಭನ ತಮ್ಮ ತಾಯಿಯೊಂದಿಗೆ ಚೆನ್ನೈನ ತೇನಂಪೇಟಾದ ಶ್ರೀನಿವಾಸ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಕಡಲೂರು ಜಿಲ್ಲೆಯ ಕೋವಿಲ್‌ನ ವಿಜಯಾ ಎಂಬ ಮಹಿಳೆ ವರ್ಷದ ಹಿಂದೆ ಮನೆ ಕೆಲಸಕ್ಕೆ ಸೇರಿದ್ದಳು.

ವಿಜಯಾ ಮನೆಗೆ ಬಂದಾಗಿನಿಂದ ಆಗಾಗ ಮನೆಯಲ್ಲಿ ಹಣ ಮಾಯವಾಗುತ್ತಿತ್ತು. ಇದರಿಂದ ಅನುಮಾನಗೊಂಡ ಶೋಭನಾ ಅವರು ತೇನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋಭನಾ ದೂರಿನನ್ವಯ ವಿಜಯಾ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ವಿಜಯಾ ತಾನು ಹಣ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕಳೆದ ಮಾರ್ಚ್‌ನಿಂದ ಜೂನ್‌ವರೆಗೆ ರೂ. 41 ಸಾವಿರ ಕದ್ದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
"ಬಡತನದಿಂದ ಈ ತಪ್ಪು ಮಾಡಿದೆ" ಎಂದು ವಿಜಯಾ ಶೋಭನ ಅವರ ಬಳಿ ವಿಜಯಾ ಕ್ಷಮಿಸುವಂತೆ ಕೇಳಿಕೊಂಡಿದ್ದಾಳೆ. ಆಕೆಯ ದೀನ ಸ್ಥಿತಿ ಕಂಡು ಶೋಭನಾ ದೂರು ವಾಪಸ್ ಪಡೆದಿದ್ದಾರೆ. ಮತ್ತೆ ತಮ್ಮ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಚಾರ ಅಭಿಮಾನಿಗಳು ನಟಿಯ ಒಳ್ಳೆ ಮನಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಂಡ ಮನೆಗೆ ಯಾರು ದ್ರೋಹ ಬಗೆಯಬಾರದು ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ.
ಭರತನಾಟ್ಯ ಡ್ಯಾನ್ಸರ್ ಕೂಡ ಆಗಿರುವ ಶೋಭನಾ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಮಾತ್ರವಲ್ಲದೇ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದ ಆಕೆ ಮುಂದೆ ನಾಯಕಿ ಕೂಡ ಆದರು. 'ಏಪ್ರಿಲ್-18' ಎನ್ನುವ ಮಲಯಾಳಂ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.
'ರುದ್ರವೀಣ', 'ಮಣಿ ಚಿತ್ರತ್ತಾಳ್', 'ಹಿಟ್ಲರ್', 'ಅಗ್ನಿ ಸಾಕ್ಷಿ', 'ಮಕ್ಕಳಕ್ಕು', 'ವಾರನೆ ಅವಶ್ಯಮುಂಡ್', 'ಕೊಚಡಿಯನ್' ಹೀಗೆ ಹಲವು ಜನಪ್ರಿಯನ ಸಿನಿಮಾಗಳಲ್ಲಿ ಶೋಭನಾ ನಟಿಸಿದ್ದಾರೆ. ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಜೋಡಿಯಾಗಿ 'ಶಿವಶಂಕರ್' ಚಿತ್ರದಲ್ಲಿ ನಟಿಸಿದ್ದರು. 'ಗಿರಿ ಬಾಲೆ' ಆಕೆ ನಟಿಸಿದ ಮತ್ತೊಂದು ಕನ್ನಡ ಸಿನಿಮಾ.
ಭರತನಾಟ್ಯ ಡ್ಯಾನ್ಸರ್ ಆಗಿ ಸಾಕಷ್ಟು ವೇದಿಕೆಗಳಲ್ಲಿ ಶೋಭನಾ ಹೆಚ್ಚೆ ಹಾಕಿದ್ದಾರೆ. 'ಕಳಿಪಿಣ್ಯ' ಎಂಬ ಡ್ಯಾನ್ಸ್ ಸ್ಕೂಲ್ ಕೂಡ ನಡೆಸಿದ್ದರು. ಬಳಿಕ ಚೆನ್ನೈನಲ್ಲಿ ಪಲಾರ್ಪಣ ಎನ್ನುವ ಭರತನಾಟ್ಯ ಶಾಲೆ ಕೂಡ ಆರಂಭಿಸಿದರು. ವಯಸ್ಸು 50 ದಾಟಿದ್ರು ಶೋಭನಾ ಮದುವೆ ಆಗಿಲ್ಲ. ಆದರೆ ಹೆಣ್ಣು ಮಗುವನ್ನು ದತ್ತು ಪಡೆದು ಸಿಂಗಲ್ ಪೇರೆಂಟ್ ಆಗಿ ಸಾಕುತ್ತಿದ್ದಾರೆ. ಮಗಳಿಗೆ ಅನಂತ ನಾರಾಯಣಿ ಎಂದು ಹೆಸರಿಟ್ಟಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶೋಭನಾ, "ನಾನು ಒಬ್ಬೊಂಟಿಯಾಗಿಯೇ ಖುಷಿಯಾಗಿದ್ದೀನಿ. ನನ್ನ ಜೀವನದ ಬಗ್ಗೆ ತೃಪ್ತಿಯಿದೆ. ಮದುವೆ ಒಂದೇ ಸಂತೋಷ ಕೊಡುತ್ತದೆ ಎಂದು ನಾನು ಒಪ್ಪುವುದಿಲ್ಲ. ಮದುವೆ ಒಂದೇ ಜೀವನವನ್ನು ಪರಿಪೂರ್ಣಗೊಳಿಸೋಕೆ ಸಾಧ್ಯ ಎಂದು ಎಲ್ಲರೂ ಹೇಳಿವುದು ಕೇಳಿದರೆ ಬೇಸರವಾಗುತ್ತದೆ. ಪ್ರತಿಯೊಬ್ಬರ ಜೀವನ ಬೇರೆ ಬೇರೆ ರೀತಿ ಇರುತ್ತದೆ. ನೀವು ಎಲ್ಲವನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ" ಎಂದಿದ್ದರು.


Click it and Unblock the Notifications











