ಪುರುಷ ಪ್ರಧಾನ ಚಿತ್ರರಂಗದ ನಗ್ನ ಸತ್ಯ, ಮಲಯಾಳಂ ಚಿತ್ರರಂಗದ ಬಗ್ಗೆ ಹೇಳಿದ್ದೇನು ಸ್ವರಾ ಭಾಸ್ಕರ್..?
ಮಲಯಾಳಂ ಚಿತ್ರರಂಗ ಅಲ್ಲೋಲ..ಕಲ್ಲೋಲವಾಗಿದೆ. ಚಿತ್ರರಂಗದಲ್ಲಿನ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ಸಲ್ಲಿಸಿದ ವರದಿಯಿಂದ ಮಲಯಾಳಂ ಚಿತ್ರರಂಗದ ಮುಖವಾಡ ಕಳಚಿ ಬಿದ್ದಿದೆ. ಅದು ತೆರೆದಿಟ್ಟಿರುವ ಸತ್ಯ ಕೇವಲ ಮಲಯಾಳಂ ಚಿತ್ರರಂಗವನ್ನಷ್ಟೇ ಅಲ್ಲ, ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ. ಇದಕ್ಕೆ ಪೂರಕವಾಗಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿರುವ ಪುರುಷರ ಮನಸ್ಥಿತಿಯ ಕುರಿತು ಕಿಡಿ ಕಾರುತ್ತಿದ್ದಾರೆ. ಸ್ವರಾ ಭಾಸ್ಕರ್ ಕೂಡ ಇದರಿಂದ ಹೊರತಾಗಿಲ್ಲ.
ಹೌದು, ತಮ್ಮ ನೇರಾ ನೇರ ಮಾತುಗಳಿಂದ ಮೊದಲೆಲ್ಲ ಸುದ್ದಿಯಾಗುತ್ತಿದ್ದ, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದ್ದ ಬಾಲಿವುಡ್‌ನ ನಾಯಕಿ ಸ್ವರಾ ಭಾಸ್ಕರ್ ಹೇಮಾ ವರದಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳದ ಕುರಿತು ಮೊದಲಿಂದ ತಮ್ಮ ಧ್ವನಿ ಎತ್ತುತ್ತಾ ಬಂದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ನ ಧೈರ್ಯವನ್ನೂ ಮೆಚ್ಚಿಕೊಂಡಿರುವ ಸ್ವರಾ ಭಾಸ್ಕರ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಮುಂದುವರೆದು ಹೇಮಾ ಸಮಿತಿಯ ವರದಿಯ ಕುರಿತು ಓದುವುದು ತುಂಬಾ ದುಃಖಕರ ಎಂದಿರುವ ಸ್ವರಾ, ಬಹುಶಃ ಇದು ನಮಗೆ ಗೊತ್ತಿರುವ ಕಾರಣಕ್ಕೆ ಇನ್ನೂ ಹೆಚ್ಚೆಚ್ಚು ನೋವಾಗುತ್ತ. ಎಂದಿದ್ದಾರೆ. ಪ್ರತಿಯೊಂದು ವಿವರ ನಮ್ಮ ಅನುಭವಕ್ಕೆ ಬಾರದಿರಬಹುದು ಆದರೆ ಬಹುತೇಕ ಮಹಿಳೆಯರು ನುಡಿದ ಸಾಕ್ಷಿಗಳೆಲ್ಲ ಪರಿಚಿತವಾಗಿರುವಂತಹದ್ದೇ ಎಂದಿದ್ದಾರೆ.
ಇನ್ನೂ ಪುರುಷ ಪ್ರಧಾನ ಚಿತ್ರರಂಗದಲ್ಲಿ ಪಿತೃಪ್ರಭುತ್ವ ಶಕ್ತಿಯನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ ಎಂದಿರುವ ಸ್ವರಾ ಭಾಸ್ಕರ್, ಚಿತ್ರರಂಗದಲ್ಲಿ ಪ್ರತಿಯೊಂದು ಹಂತದಲ್ಲಿ ದುಡ್ಡು ಹರಿಯುತ್ತಿರುತ್ತದೆ. ಹೀಗಾಗಿ ಯಾರು ಅಡ್ಡಿಪಡಿಸಲು ಇಷ್ಟ ಪಡುವುದಿಲ್ಲ. ನೈತಿಕತೆಯನ್ನು ಉಳಿಸಿಕೊಂಡವರು ಧ್ವನಿ ಎತ್ತಿದರು ಕೂಡ ಅವರ ಧ್ವನಿಯನ್ನು ಇಲ್ಲಿ ಯಾರು ಕೇಳುವುದಿಲ್ಲ ಅಷ್ಟರ ಮಟ್ಟಿಗೆ ಇಲ್ಲಿ ಇಲ್ಲಿ ಆರ್ಥಿಕ ಒತ್ತಡ ಇದೆ ಎಂದಿದ್ದಾರೆ. ಎಲ್ಲರು ವ್ಯಾವಹಾರಿಕವಾಗಿದ್ದಾರೆ ಎಂದು ಹೇಳಿದ್ದಾರೆ ಸ್ವರಾ ಭಾಸ್ಕರ್.
ಉಳಿದಂತೆ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ನಿರ್ದೇಶಕ ರಂಜಿತ್ ಕೆಳಗಿಳಿದಿದ್ದಾರೆ. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA } ನಲ್ಲಿ ಪ್ರಧಾನ ಕಾರ್ಯದರ್ಶಿ ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಮಲಯಾಳಂ ಚಿತ್ರರಂಗದ ಸೀನಿಯರ್ ಆಕ್ಟರ್ ಸಿದ್ದಿಕ್ ಕೂಡ ಅತ್ಯಾಚಾರದ ಆರೋಪದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ {AMMA }ನ ಅಧ್ಯಕ್ಷ ಸ್ಥಾನಕ್ಕೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ರಾಜೀನಾಮೆ ನೀಡಿದ್ದಾರೆ. ಮತ್ತೊಂದು ಕಡೆ ಮಲಯಾಳಂ ಚಿತ್ರರಂಗದಲ್ಲಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಈಗಲೇ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಅಲ್ಲಿನ ಸರ್ಕಾರದ ಮೇಲೆ ಹೆಚ್ಚಾಗುತ್ತಿದೆ. ಮಲಯಾಳಂ ಚಿತ್ರರಂಗದ ಅನೇಕರ ವಿರುದ್ಧ ಒಂದಾದ ಮೇಲೊಂದು ದೂರುಗಳು ಕೂಡ ಕೇರಳದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ.


Click it and Unblock the Notifications











