Amala Paul: ಅದ್ಧೂರಿಯಾಗಿ 2ನೇ ಮದುವೆಯಾದ ಹೆಬ್ಬುಲಿ ನಟಿ ಅಮಲಾ ಪೌಲ್: ಇಲ್ಲಿದೆ ಫೋಟೊಸ್
ಇತ್ತೀಚೆಗಷ್ಟೇ ನಟಿ ಅಮಲಾ ಪೌಲ್ ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಗೆ ಸೈ ಎಂದಿದ್ದುಗೊತ್ತೇ ಇದೆ. ತಮ್ಮ ಹುಟ್ಟುಹಬ್ಬ ದಿನವೇ ಬಾಯ್ ಫ್ರೆಂಡ್ ಜಗತ್ ದೇಸಾಯಿ ಪ್ರಪೋಸ್ ಮಾಡಿದ್ದರು. ಕೂಡಲೇ ಅದಕ್ಕೆ ಆಕೆ ಯೆಸ್ ಹೇಳಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿದೆ. ಪ್ರಪೋಸ್ ಮಾಡಿ ವಾರ ಕಳೆಯುವ ಮುನ್ನ ಇಬ್ಬರೂ ಹಸೆಮಣೆ ಏರಿದ್ದಾರೆ.
ಅಮಲಾ ಪೌಲ್ ಹಾಗೂ ಜಗತ್ ದೇಸಾಯಿ ಇಬ್ಬರೂ ಇಂದು (ನವೆಂಬರ್ 5) ಕೊಚ್ಚಿಯಲ್ಲಿ ಮದುವೆ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಅಂದಹಾಗೆ ಇದು ನಟಿ ಅಮಲಾ ಪೌಲ್‌ಗೆ ಎರಡನೇ ಮದುವೆ. 2014ರಲ್ಲಿ ತಮಿಳು ಸಿನಿಮಾ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಅಮಲಾ ಪೌಲ್ 2017ರಲ್ಲಿ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಇನ್ನು 2018ರಲ್ಲಿ ತಮ್ಮ ಸ್ನೇಹಿತ, ಗಾಯಕ ಭುವಿಂದರ್ ಸಿಂಗ್ ಜೊತೆ ಅಮಲಾ ಮದುವೆ ಆಗಿದ್ದಾರೆ ಎನ್ನುವ ಗುಸು ಗುಸು ಕೇಳಿಬಂದಿತ್ತು. ಇಬ್ಬರೂ ಮದುವೆ ಆಗಿರುವಂತೆ ಫೋಟೊಗಳು ವೈರಲ್ ಆಗಿತ್ತು. ಆದರೆ ಅದೆಲ್ಲ ಸುಳ್ಳು ಎಂದು ಆಕೆ ಹೇಳಿದ್ದರು.

ಬಳಿಕ ಭಿನ್ನಾಭಿಪ್ರಾಯಗಳಿಂದ ಭುವಿಂದರ್- ಅಮಲಾ ದೂರಾಗಿದ್ದರು. ನನ್ನ ಮಾಜಿ ಬಾಯ್‌ಫ್ರೆಂಡ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಭುವಿಂದರ್ ವಿರುದ್ಧ್ ಅಮಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಕೂಡ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. 2018ರಲ್ಲಿ ನಟಿಗೆ ಭವಿಂದರ್ ಸಿಂಗ್ ಪರಿಚಯವಾಗಿತ್ತು. ಇಬ್ಬರು ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದರು. ಆದರೆ ಸಿನಿಮಾ ನಿರ್ಮಾಣ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಇಬ್ಬರೂ ದೂರಾಗಿದ್ದರು. ಬಳಿಕ ಆತನ ವಿರುದ್ಧ ನಟಿ ದೂರು ನೀಡಿದ್ದರು.
ಅಮಲಾ ಪೌಲ್‌ಗೆ ಡಿವೋರ್ಸ್ ನೀಡಿದ ನಿರ್ದೇಶಕ ಎ. ಎಲ್ ವಿಜಯ್ ಎರಡು ವರ್ಷಗಳ ಬಳಿಕ ಐಶ್ವರ್ಯ ಎಂಬುವರ ಕೈಹಿಡಿದಿದ್ದರು. ಇದೀಗ ಅಮಲಾ ಕೂಡ ಮದುವೆ ಆಗಿದ್ದಾರೆ. ಆಕೆಯ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ. ಗೋವಾ ಮೂಲಕ ಜಗತ್ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲ ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಮಲಾ ಪೌಲ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. 2017ರಲ್ಲಿ ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ಡಾ. ನಂದಿನಿ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಕೃಷ್ಣ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು. ಸುದೀಪ್- ಅಮಲಾ ಜೋಡಿ ಕೂಡ ಮೋಡಿ ಮಾಡಿದ್ದು ಸುಳ್ಳಲ್ಲ.
ಇತ್ತೀಚೆಗೆ ಅಮಲಾ ಪೌಲ್ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಸದಾ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೊನೆಯದಾಗಿ ಬಾಲಿವುಡ್‌ನ 'ಭೋಲಾ' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಆಡು ಜೀವಿತಂ, ಡಿವಿಜ ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಅಮಲಾ ಪೌಲ್ ನಟಿಸಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿ ಹುಟ್ಟಿ ಬೆಳೆದ ಅಮಲಾ ಪೌಲ್, 'ನೀಲತಾಮರ' ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. 'ವೀರಸೇಖರನ್' ತಮಿಳಿನಲ್ಲಿ ಮೊದಲು ನಟಿಸಿದ ಸಿನಿಮಾ. ಬಳಿಕ ತೆಲುಗು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಅಮಲಾ ನಟಿಸಲು ಆರಂಭಿಸಿದರು. ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ. 'ಕಡವೆರ್' ಎನ್ನುವ ಚಿತ್ರವನ್ನು ನಿರ್ಮಿಸಿ ಅಮಲಾ ಪೌಲ್ ನಟಿಸಿದ್ದರು.


Click it and Unblock the Notifications











