ದೇವಸ್ಥಾನದ ಬಾಗಿಲಲ್ಲೇ 'ಹೆಬ್ಬುಲಿ' ನಟಿಗೆ ಅವಮಾನ: ಏನಿದು ಘಟನೆ?
ಬಹುಭಾಷಾ ನಟಿ ಅಮಲಾ ಪೌಲ್‌ಗೆ ಕೇರಳದ ದೇವಸ್ಥಾನದಲ್ಲಿ ಕಹಿ ಅನುಭವವಾಗಿದೆ. ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಾಲಯಕ್ಕೆ ಪ್ರವೇಶಕ್ಕೆ ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ನಟಿ ಅಮಲಾ ಪೌಲ್ ದೂರಿದ್ದಾರೆ. ಸೋಮವಾರ ನಟಿ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿನ ಅಧಿಕಾರಿಗಳು ಒಳಗೆ ಬರಬೇಡಿ, ದೇವಸ್ಥಾನದ ಮುಂಭಾಗದಲ್ಲಿರುವ ದೇವಿಯ ದರ್ಶನ ಮಾಡಿಕೊಂಡು ಹೋಗಿ ಎಂದಿದ್ದಾರೆ ಎನ್ನಲಾಗಿದೆ.

ದೇಶದ ಕೆಲವು ಹಿಂದೂ ದೇವಾಲಯಗಳಲ್ಲಿ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಇತರ ಧರ್ಮದವರು ದೇವಸ್ಥಾನದ ಪ್ರವೇಶಿಸಲು ಒಪ್ಪದ ದೇವಾಲಯಗಳು ಇವೆ. ದೇವಸ್ಥಾನದ ಅರ್ಚಕರು, ಅಧಿಕಾರಿಗಳು ಇದನ್ನು ಬಹಳ ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಅದೇ ರೀತಿ ಅಮಲಾ ಪೌಲ್ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ಆಲಯಕ್ಕೆ ಬರದಂತೆ ತಡೆಯಲಾಗಿದೆ. ಈ ದೇವಸ್ಥಾನಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶ, ನೀವು ಪ್ರವೇಶಿಸಲು ಅವಕಾಶ ಇಲ್ಲ ಎಂದು ಅಧಿಕಾರಿಗಳು ಆಕೆಗೆ ಹೇಳಿದ್ದಾರೆ. ಅಮಲಾ ಪೌಲ್ ಕ್ರಿಶ್ಚಿಯನ್ ಧರ್ಮದವರು ಆಗಿರುವುದರಿಂದ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.

ಇನ್ನು ನಟಿ ಅಮಲಾ ಪೌಲ್ ದೇವಸ್ಥಾನದ ಸಂದರ್ಶಕರ ನೋಂದಣಿ ಪುಸ್ತಕದಲ್ಲಿ ತಮ್ಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. "2023ರಲ್ಲೂ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದು ದುಃಖಕರ ಹಾಗೂ ಮತ್ತು ನಿರಾಶಾದಾಯಕವಾಗಿದೆ. ನನಗೆ ಆಲಯ ಪ್ರವೇಶಿಸಲು ನಿರಾಕರಿಸಿದರೂ ದೂರದಿಂದಲೇ ದೈವಿಕ ಅನುಭವವಾಯಿತು. ನಾನು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ಆದಷ್ಟು ಬೇಗ ಈ ಧಾರ್ಮಿಕ ತಾರತಮ್ಯ ಬದಲಾಗಲಿ ಎಂದು ಆಶಿಸುತ್ತೇನೆ. ನಾವೆಲ್ಲರೂ ಒಂದೇ ಎಂದು ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಸಮಯ ಬರುತ್ತದೆ. ಧರ್ಮದ ಆಧಾರದ ಮೇಲೆ ಅಲ್ಲ" ಎಂದು ಅಮಲಾ ತಿಳಿಸಿದ್ದಾರೆ.

ಈ ಘಟನೆಯ ನಂತರ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಾಲಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ನ್ಯೂಸ್ 18 ಮಲಯಾಳಂ ವರದಿ ಪ್ರಕಾರ ಅಧಿಕಾರಿಗಳು ದೇವಸ್ಥಾದನ ನಿಯಮಗಳನ್ನು ಅನುಸರಿಸುತ್ತಿದ್ದಾರೆ. "ಅನ್ಯ ಧರ್ಮಿಯರು ದೇವಸ್ಥಾನಕ್ಕೆ ಬಂದಿದ್ದಾರೆ. ಆದರೆ ಯಾರಿಗೂ ಇದು ತಿಳಿದಿರಲಿಲ್ಲ. ಆದರೆ ಈ ರೀತಿ ಸೆಲೆಬ್ರೆಟಿಗಳು ಬಂದಾಗ ವಿವಾದ ಸ್ವರೂಪ ಪಡೆಯುತ್ತದೆ"ಎಂದು ದೇವಸ್ಥಾನದ ಟ್ರಸ್ಟ್ ಕಾರ್ಯದರ್ಶಿ ಪ್ರಸೂನ್ ಕುಮಾರ್ ಹೇಳಿದ್ದಾಗಿ ವರದಿಯಾಗಿದೆ.
ಎರ್ನಾಕುಲಂನಲ್ಲಿ ಹುಟ್ಟಿ ಬೆಳೆದ ಅಮಲಾ ಪೌಲ್, ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ದರು. ಮುಂದೆ ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದರು. 2017ರಲ್ಲಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು.


Click it and Unblock the Notifications











