ಎರಡು ಮದುವೆ, ಸಾವು-ನೋವು. ಈಗ ಬೆಂಗಳೂರಿನ ಈ ವ್ಯಕ್ತಿಯ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದಾರೆ ಶಿವಣ್ಣನ ಈ ನಾಯಕಿ..!
ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಸಿಕ್ಕರೂ ಕೂಡಾ ವಿಧಿ ಜೊತೆಯಾಗಿ ಬಾಳಲು ಅವಕಾಶವನ್ನು ನೀಡುವುದಿಲ್ಲ. ಕೆಲವರ ನಸೀಬೇ ಹಾಗೆ! ಯಾವುದನ್ನು ಹೆಚ್ಚು ಪ್ರೀತಿಸುತ್ತಾರೋ.. ? ಅತಿಯಾಗಿ ಮೋಹಿಸುತ್ತಾರೋ.. ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ... ಕಟ್ಟಕಡೆಯವರೆಗೂ ಅದು ಅವರ ಕೈಗೆಟುಕುವುದೇ ಇಲ್ಲ.
ಕಾಡಿಸಿ, ಪೀಡಿಸಿ ನಿರಾಸೆಯನ್ನಷ್ಟೇ ಉಳಿಸುತ್ತದೆ. ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ವ್ಯಕ್ತಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಕೈಗೊಬ್ಬರು ಕಾಲಿಗೊಬ್ಬರು ಸೇವಕರು ಇದ್ದರು ಸಂತೈಸಲು ಸಂಗಾತಿ ಇಲ್ಲವೆಂಬ ಕೊರಗು ಕಾಡುತ್ತಿರುತ್ತೆ. ಎಷ್ಟೇ ಪ್ರಯತ್ನ ಮಾಡಿದರೂ ಪ್ರೀತಿಯಲ್ಲಿ ಇವರು ಗೆಲ್ಲುವುದಿಲ್ಲ. ಪ್ರೀತಿ ದಕ್ಕುವುದಿಲ್ಲ. ಇದಕ್ಕೆ ಅಂಜು ಅರವಿಂದ್ ಸದ್ಯದ ತಾಜಾ ಉದಾಹರಣೆ.

ಹೌದು, ಅಂಜು ಅರವಿಂದ್.. ಮಲಯಾಳಂನ ಖ್ಯಾತ ಕಲಾವಿದೆ. ಇಷ್ಟೇ ಅಲ್ಲ ನೃತ್ಯಗಾರ್ತಿ ಕೂಡ ಹೌದು. 'ಅಕ್ಷರಂ'.. 'ಸ್ವಪ್ನ ಲೋಕಥೇ ಬಾಲ ಭಾಸ್ಕರನ್'.. 'ಕಿಡಿಲೋಲ್ ಕಿಡಿಲಾಂ'.. ಹೀಗೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅಂಜು ಅರವಿಂದ್ ಮೋಹನ್ ಲಾಲ್, ಮುಮ್ಮುಟ್ಟಿ, ರಜಿನಿಕಾಂತ್ ಅವರಂತಹ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಹಲವು ಧಾರಾವಾಹಿಗಳಿಗೆ ಕೂಡ ಅಂಜು ಅರವಿಂದ್ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಪ್ರೇಕ್ಷಕರ ಹೃದಯಕ್ಕೆ ಇನ್ನೂ ಹತ್ತಿರವಾಗಿದ್ದಾರೆ.
ಇಂಥಾ ಅಂಜು ಅರವಿಂದ್ ಇತ್ತೀಚೆಗೆ 'ಅವಲ್ ವಿಕಟನ್'ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವ್ಯೆಯಕ್ತಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಅಂಜು ಅರವಿಂದ್ ನನ್ನ ಮೊದಲ ಮದುವೆ ವಿಚ್ಚೇದನದಲ್ಲಿ ಅಂತ್ಯವಾಯ್ತು. ಆ ನಂತರ ಎರಡನೇ ಮದುವೆಯಾದೆ. ಅವರ ಜೊತೆ ಖುಷಿಯಾಗಿದ್ದೇ.. ಆದರೆ ಅವರು ಬಹುಬೇಗ ತೀರಿಕೊಂಡರು, ಈಗ ಕಳೆದ 5 ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ನನ್ನ ಸಂಗಾತಿಯ ಹೆಸರು ಸಂಜಯ್ ಅಂಬಾಲ ಪರಂಬತ್ ಎಂದು ಹೇಳಿರುವ ಅಂಜು ಅರವಿಂದ್, ಬೆಂಗಳೂರಿನಲ್ಲಿ ಸದ್ಯ ನಾನು ಡ್ಯಾನ್ಸ್ ಟೀಚರ್ ಆಗಿದ್ದೇನೆ, ನನ್ನದೇ ಅಂಜು ಅರವಿಂದ್ ಡ್ಯಾನ್ಸ್ ಅಕಾಡೆಮಿಯನ್ನು ಹೊಂದಿದ್ದೇನೆ, ಇದೆಲ್ಲದಕ್ಕೂ ಕಾರಣ ಸಂಜಯ್ ಅವರೇ ಎಂದು ಹೇಳಿದ್ದಾರೆ. ನಾನು 8ನೇ ತರಗತಿಯಲ್ಲಿದ್ದಾಗ ನನಗೆ ಸಂಜಯ್ ಮೇಲೆ ಕ್ರಶ್ ಆಗಿತ್ತು. ಆದರೆ.. ಆ ಕಾಲದಲ್ಲಿ ಮೊಬೈಲ್ ಎಲ್ಲ ಇರಲಿಲ್ಲ ಹೀಗಾಗಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಬದುಕಿನ ತಿರುವಿನಲ್ಲಿ ಆ ನಂತರ ಅವರು ಬೇರೆ ಕಡೆ ಹೋದರು ನನ್ನ ದಾರಿ ಬೇರೆ ಆಯ್ತು ಎಂದಿರುವ ಅಂಜು ಅರವಿಂದ್ ಆ ವಿಧಿಯೇ ನಮ್ಮನ್ನು ಮತ್ತೆ ಸೇರುವಂತೆ ಮಾಡಿತು ಎಂದು ಹೇಳಿದ್ದಾರೆ.
ನನ್ನ ನೃತ್ಯ ಅಕಾಡೆಮಿಗೆ ಹೆಸರಿಟ್ಟಿದ್ದು ಕೂಡ ಅವರೇ ಎಂದು ಹೇಳಿರುವ ಅಂಜು ಅರವಿಂದ್, ಐಟಿ ಕಂಪನಿಯಲ್ಲಿ ಅವರು ಕೆಲಸ ಮಾಡ್ತಿದ್ದರು ಆದರೆ ಈಗ ನಿವೃತ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಸಿ ಪ್ರೇಮ್ ಕುಮಾರ್ ನಿರ್ದೇಶನದ 96 ಚಿತ್ರವನ್ನು ನಾವು ಜೊತೆಯಲ್ಲಿ ನೋಡಿದ್ವಿ ಆಗ ನಮ್ಮ ಶಾಲಾ ದಿನಗಳೆಲ್ಲ ನೆನಪಾದವು ಎಂದಿರುವ ಅಂಜು ಅರವಿಂದ್ ನಮ್ಮ ಕಥೆಯನ್ನು ಸಿನಿಮಾವನ್ನಾಗಿ ಮಾಡಬಹುದು ಎಂದು ಕೂಡ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಅಂದ್ಹಾಗೇ ಅಂಜು ಅರವಿಂದ್ ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿದ್ದರು. 'ಜನುಮದಾತ' ಆ ಚಿತ್ರದ ಹೆಸರು. ಟಿ ಎಸ್ ನಾಗಾಭರಣ ನಿರ್ದೇಶನದ ಈ ಚಿತ್ರ 1999ರಲ್ಲಿ ಬಿಡುಗಡೆಯಾಗಿತ್ತು. ಇನ್ನುಳಿದಂತೆ ಅಂಜು ಅರವಿಂದ್ ಅವರಿಗೆ ಎದೆಯೆತ್ತರಕ್ಕೆ ಬೆಳೆದ ಅನ್ವಿಕಾ ಎಂಬ ಮಗಳಿದ್ದಾಳೆ.


Click it and Unblock the Notifications











