ಸಿನಿಮಾ ಬಗ್ಗೆ ಮಾತಾಡಿ ಎಂದು 'ಕಾಥಲ್' ನಿರ್ದೇಶಕನನ್ನು ಕರೆದು, ಕಾರ್ಯಕ್ರಮವನ್ನೇ ರದ್ದು ಮಾಡಿದ ಕಾಲೇಜು!
ಮಲಯಾಳಂನ 'ದಿ ಗ್ರೇಟ್ ಇಂಡಿಯನ್ ಕಿಚನ್' ಮತ್ತು 'ಕಾಥಲ್ - ದಿ ಕೋರ್' ಎರಡೂ ಚಿತ್ರಗಳ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಸಿನಿಪ್ರೇಮಿಗಳಿಗೆ ಚಿರಪರಿಚಿತರು. ತಮ್ಮ ಸಿನಿಮಾಗಳ ಮೂಲಕ ಅವರು ಕಟ್ಟಿಕೊಟ್ಟ ಸಂದೇಶ ಪ್ರಸ್ತಿತ ಜಗತ್ತಿಗೆ ಅನಿವಾರ್ಯ. ಈಗ ಅವರು ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
ಹೌದು.... ಖ್ಯಾತ ನಿರ್ದೇಶಕ ಜಿಯೋ ಬೇಬಿ ಅವರನ್ನು ಈ ಹಿಂದೆ ಕಾಲೇಜು ಒಂದರಲ್ಲಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಸಮಾರಂಭದಲ್ಲಿ 'ವರ್ತಮಾನದ ಮಲಯಾಳಂ ಚಿತ್ರರಂಗದ ಸೂಕ್ಷ್ಮ ರಾಜಕೀಯ' ಎಂಬ ವಿಷಯದ ಬ್ಗಗೆ ಮಾತನಾಡಬೇಕಿತ್ತು. ಆದರೆ, ಕಾರ್ಯಕ್ರಮ ರದ್ದು ಮಾಡಲಾಗಿದೆ. ನೀವು ಬರುವ ಅಗತ್ಯವಿಲ್ಲ ಎಂದು ಅವರನ್ನು ಕಾಲೇಜಿಗೆ ಬರದಂತೆ ತಡೆಯಲಾಗಿದೆ.

ಕಾಥಲ್ ನಿರ್ದೇಶಕ ಜಿಯೋ ಬೇಬಿಗೆ ಕಾಲೇಜಿನಿಂದ ಅವಮಾನ!?
ಕೇರಳದ ಕೋಝಿಕ್ಕೋಡ್‌ನಲ್ಲಿರುವ ಫಾರೂಕ್ ಕಾಲೇಜಿನ ಫಿಲ್ಮ್ ಕ್ಲಬ್‌ನಿಂದ ನಿರ್ದೇಶಕರನ್ನು ಕಾರ್ಯಕ್ರಮದ ಭಾಗವಾಗಿ 'ವರ್ತಮಾನದ ಮಲಯಾಳಂ ಚಿತ್ರರಂಗದ ಸೂಕ್ಷ್ಮ ರಾಜಕೀಯ'ದಲ್ಲಿ ಸಂವಾದ ನಡೆದುವಂತೆ ಆಹ್ವಾನಿಸಲಾಗಿತ್ತು. ಹೀಗಾಗಿ ಕಾರ್ಯಕ್ರಮಕ್ಕಾಗಿ ನಿರ್ದೇಶಕರು ಮೊದಲೇ ಕೋಝಿಕ್ಕೋಡ್‌ಗೆ ಆಗಮಿಸಿದ್ದರೂ, ಯಾವುದೇ ಸರಿಯಾದ ಕಾರಣ ನೀಡದೇ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಅವರಿಗೆ ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮಾತನಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ನಿರ್ದೇಶಕರು ಕಾಲೇಜು ಮ್ಯಾನೇಜ್‌ಮೆಂಟ್ ಮತ್ತು ಅವರ ವಿದ್ಯಾರ್ಥಿಗಳ ಒಕ್ಕೂಟದ ವಿರುದ್ಧ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಕಾರ್ಯಕ್ರಮ ರದ್ದಾಗಿರುವುದಕ್ಕೆ ಸ್ವೀಕರಿಸಿದ ಫಾರ್ವರ್ಡ್ ಸಂದೇಶವನ್ನು ಉಲ್ಲೇಖಿಸಿದ್ದಾರೆ.
"ಡಿಸೆಂಬರ್ 5 ರಂದು, ಕೋಝಿಕೋಡ್‌ನ ಫಾರೂಕ್ ಕಾಲೇಜ್‌ನಿಂದ ಕಾಲೇಜಿನ ಫಿಲ್ಮ್ ಕ್ಲಬ್ ಆಯೋಜಿಸಿದ್ದ 'ಸಬ್ಟಲ್ ಪಾಲಿಟಿಕ್ಸ್ ಆಫ್ ವರ್ತಮಾನದ ಮಲಯಾಳಂ ಸಿನಿಮಾ' ಎಂಬ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ನಾನು ಕಾರ್ಯಕ್ರಮಕ್ಕಾಗಿ ಕೋಝಿಕ್ಕೋಡ್‌ಗೆ ಮೊದಲೇ ಹೋಗಿದ್ದೆ. ಕಾರ್ಯಕ್ರಮ ನಡೆಯುವ ದಿನ ಬೆಳಗ್ಗೆ ಕಾರ್ಯಕ್ರಮವನ್ನು ಸಂಘಟಿಸುವ ಶಿಕ್ಷಕರು ನನಗೆ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವ ಬಗ್ಗೆ ನನಗೆ ತಿಳಿಸಿದ್ದರು. ಅದಕ್ಕಾಗಿ ಅವರು ಅಸಮಾಧಾನಗೊಂಡಿದ್ದರೂ ಸಹ, ಅವರು ರದ್ದುಗೊಳಿಸಲು ಸರಿಯಾದ ಕಾರಣವನ್ನು ನೀಡಲಿಲ್ಲ" ಎಂದು ಹೇಳಿದ್ದಾರೆ.
ಮುಂದುವರಿದು, "ಈವೆಂಟ್ ರದ್ದುಗೊಳ್ಳಲು ಕಾರಣವನ್ನು ತಿಳಿಯಲು ನಾನು ಕಾಲೇಜಿನ ಪ್ರಾಂಶುಪಾಲರಿಗೆ ಇಮೇಲ್ ಕಳುಹಿಸಿದ್ದೆ. ವಾಟ್ಸಾಪ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಇಲ್ಲಿಯವರೆಗೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ, ಕಾಲೇಜಿನ ವಿದ್ಯಾರ್ಥಿಗಳ ಒಕ್ಕೂಟದ ಪತ್ರವನ್ನು ಒಳಗೊಂಡ ಫಾರ್ವರ್ಡ್ ಮಾಡಿದ ಸಂದೇಶ ನನಗೆ ಸಿಕ್ಕಿದೆ" ಎಂದು ತಿಳಿಸಿದ್ದಾರೆ.

ಫಾರ್ವರ್ಡ್ ಪತ್ರವನ್ನು ಉಲ್ಲೇಖಿಸಿರುವ ಜಿಯೋ ಬೇಬಿ, "ನಿರ್ದೇಶಕರ ಮೌಲ್ಯಗಳು ಮತ್ತು ಅಭಿಪ್ರಾಯಗಳು ಕಾಲೇಜಿನ ಧಾರ್ಮಿಕ ಮೌಲ್ಯಗಳಿಗೆ ವಿರುದ್ಧವಾಗಿರುವುದರಿಂದ ಈವೆಂಟ್ ರದ್ದು ಮಾಡಲಾಗಿದೆ ಎಂಬ ಕಾರಣವನ್ನು ಈ ಪತ್ರ ಒಳಗೊಂಡಿದೆ" ಎಂದು ಹೇಳಿದ್ದಾರೆ.
"ಈ ಕಾರ್ಯಕ್ರಮಕ್ಕೆ ಹಾಜರಾಗಲು ನಾನು ಕೋಝಿಕ್ಕೋಡ್‌ಗೆ ಪ್ರಯಾಣಿಸಬೇಕಾಯಿತು. ವಿದ್ಯಾರ್ಥಿಗಳ ಒಕ್ಕೂಟದಿಂದ ನನಗೆ ಉತ್ತರ ಸಿಕ್ಕಿತು. ಆದರೆ ಈಗ ಕಾಲೇಜು ಆಡಳಿತ ಮಂಡಳಿ ಅದನ್ನು ಏಕೆ ರದ್ದುಗೊಳಿಸಿದೆ ಎಂದು ನನಗೂ ತಿಳಿಯಬೇಕಾಗಿದೆ. ನಾನು ಇದರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇನೆ. ನಾನು ಈ ರೀತಿ ಪ್ರತಿಭಟಿಸದಿದ್ದರೆ, ನನಗೆ ಆದಂತೆ ಮತ್ತೊಬ್ಬರಿಗೂ ಆಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಯೋ ಬೇಬಿ ನಿರ್ದೇಶನದ 'ಕಾಥಲ್ - ದಿ ಕೋರ್' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಮತ್ತು ಜ್ಯೋತಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಸ್ಟಾರ್‌ಡಂ ಬಿಟ್ಟು ನಟ ಸಲಿಂಗಿಯಾಗಿ ನಟಿಸಿದ್ದು, ಸಿನಿಮಾ ಬಗ್ಗೆ ಉತ್ತಮ ವಿಮರ್ಶೆಗಳು ಬರುತ್ತಿವೆ.


Click it and Unblock the Notifications










