ಅತ್ಯಾಚಾರ ಆರೋಪ: ಕೇರಳದ ನಟ, ನಿರ್ಮಾಪಕ ವಿಜಯ್ ಬಾಬುಗೆ ಜಾಮೀನು
ಕಳೆದೆರಡು ತಿಂಗಳಿನಿಂದಲೂ ತೀವ್ರ ಕುತೂಹಲ ಮೂಡಿಸಿರುವ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕೊನೆಗೂ ನಟನಿಗೆ ಜಾಮೀನು ದೊರೆತಿದೆ.
ಏಪ್ರಿಲ್ 22 ರಂದು ಯುವತಿಯೊಬ್ಬರು ವಿಜಯ್ ಬಾಬು ವಿರುದ್ಧ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ವಿಜಯ್ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ. ವಿಜಯ್ ಬಾಬು ತಮ್ಮ ಮೇಲೆ ಕೊಚ್ಚಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ತಮ್ಮ ವಿರುದ್ಧ ಪ್ರಕರಣ ದಾಖಲಾದಾಗಿನಿಂದಲೂ ನಾಪತ್ತೆಯಾಗಿದ್ದ ವಿಜಯ್ ಬಾಬು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸುತ್ತಲೇ ಇದ್ದರು. ಅಂತಿಮವಾಗಿ ಇದೀಗ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು ದೊರೆತಿದೆ. ಆದರೆ ಜಾಮೀನು ನೀಡಿರುವ ನ್ಯಾಯಾಧೀಶರು, ವಿಜಯ್ ಬಾಬು ಜೂನ್ 29 ರಂದು ಖಡ್ಡಾಯವಾಗಿ ಪೊಲೀಸರ ಎದುರು ಶರಣಾಗಿ ವಿಚಾರಣೆಗೆ ಸಹಕರಿಸಬೇಕು ಎಂದು ಷರತ್ತು ಹಾಕಿದ್ದಾರೆ.

ಒಂಬತ್ತು ದಿನಗಳ ಕಾಲ ವಿಚಾರಣೆ
ವಿಜಯ್ ಬಾಬು ಜೂನ್ 29 ರಂದು ಪೊಲೀಸರಿಗೆ ಶರಣಾದರೆ ಅಂದಿನಿಂದ ಒಂಬತ್ತು ದಿನಗಳ ಕಾಲ ಸತತ ಒಂಬತ್ತು ದಿನ ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಆ ನಂತರ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಅಲ್ಲದೆ, ಅರ್ಜಿದಾರರು ಅಥವಾ ಆರೋಪಿಯು ಸಂತ್ರಸ್ತೆ ಅಥವಾ ಆಕೆಯ ಕುಟುಂಬದ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವುದೇ ರೀತಿಯ ವಾಗ್ದಾಳಿ ಮಾಡಬಾರದು ಹಾಗೂ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಅವರು ಕೇರಳವನ್ನು ಬಿಡುವಂತಿಲ್ಲ ಎಂಬ ಷರತ್ತನ್ನೂ ಸಹ ನ್ಯಾಯಾಲಯ ಹೇರಿದೆ.

ಸಂತ್ರಸ್ತೆಯನ್ನು ಸಂಪರ್ಕಿಸುವಂತಿಲ್ಲ: ಷರತ್ತು
ವಿಚಾರಣೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಆರೋಪಿಯನ್ನು ವಶಕ್ಕೆ ಪಡೆಯುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ. ಆದರೆ ವಿಚಾರಣಾ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದರೆ ಆರೋಪಿಯನ್ನು ಐದು ಲಕ್ಷಗಳ ಬಾಂಡ್ ಕಟ್ಟಿಸಿಕೊಂಡ ಬಳಿಕವಷ್ಟೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಹಾಗೂ ಸಂತ್ರಸ್ತೆಯನ್ನು ಹಾಗೂ ಇತರ ಸಾಕ್ಷಿಗಳನ್ನು ಆರೋಪಿಯು ಸಂಪರ್ಕ ಮಾಡದಂತೆ ಷರತ್ತನ್ನು ಜಾಮೀನಿನಲ್ಲಿ ವಿಧಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನಟಿಯ ಹೆಸರು ಹೇಳಿದ್ದ ವಿಜಯ್ ಬಾಬು
ತಮ್ಮ ವಿರುದ್ಧ ನಟಿಯು ಅತ್ಯಾಚಾರ ಆರೋಪ ಮಾಡಿದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ನಟ, ನಿರ್ಮಾಪಕ ವಿಜಯ್ ಬಾಬು, ನಟಿಯ ವಿರುದ್ಧವೂ ಆರೋಪ ಮಾಡಿದರು. ನನ್ನ ಹೆಸರನ್ನು ಹೇಳಿದ ಮೇಲೆ ನಟಿಯ ಹೆಸರನ್ನು ಹೇಳಿಲ್ಲ ಏಕೆ ಎಂದು ಪ್ರಶ್ನಿಸಿ ನಟಿ ಹಾಗೂ ಕುಟುಂಬದ ಹೆಸರನ್ನು ಬಹಿರಂಗವಾಗಿ ಹೇಳಿದ್ದರು. ಅಲ್ಲದೆ ಆ ನಟಿಯು ದೂರು ನೀಡಿದ ಬಳಿಕವೂ ತಮಗೆ ಕಳಿಸಿರುವ ಸಂದೇಶಗಳೆಲ್ಲ ನನ್ನ ಬಳಿ ಇದ್ದು ಅವುಗಳನ್ನು ವಿಚಾರಣೆ ವೇಳೆ ಅಧಿಕಾರಿಗಳಿಗೆ ನೀಡಿವುದಾಗಿ ಹೇಳಿದ್ದರು.

ಎಲ್ಲವೂ ಗೊತ್ತಿದ್ದೆ ನನ್ನೊಟ್ಟಿಗೆ ಹಾಗೆ ಮಾಡಿದರು: ವಿಜಯ್ ಬಾಬು
ನಟಿಯು ವಿಜಯ್ ಬಾಬು ವಿರುದ್ಧ ಬಲವಂತದ ಅತ್ಯಾಚಾರ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿಜಯ್ ಬಾಬು, ಬಲವಂತದ ಲೈಂಗಿಕತೆ ನನ್ನಿಂದ ಆಗಿಲ್ಲ. ಆ ನಟಿಯ ವಯಸ್ಸು 25 ವರ್ಷ ಆಕೆಗೆ ಎಲ್ಲವೂ ಗೊತ್ತಿತ್ತು, ನನ್ನ ಕುಟುಂಬದ ಬಗ್ಗೆಯೂ ಗೊತ್ತಿತ್ತು. ಎಲ್ಲವೂ ಗೊತ್ತಿದ್ದೆ ಆಕೆ ನನ್ನೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿಕೊಂಡರು. ಆದರೆ ನಂತರ ನನ್ನನ್ನು ಬ್ಲಾಕ್‌ಮೇಲ್ ಮಾಡುವ ದೃಷ್ಟಿಯಿಂದ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ ಎಂದು ವಿಜಯ್ ಬಾಬು ಆರೋಪಿಸಿದ್ದಾರೆ.


Click it and Unblock the Notifications











