ನಂಬಲು ಸಾಧ್ಯವಾಗುತ್ತಿಲ್ಲ ; ಪೃಥ್ವಿರಾಜ್ ಇದು 'ನೀವೇನಾ' ಎಂದ ಪ್ರಭಾಸ್...!
ತಮ್ಮನ್ನ ತಾವು ಪ್ರಯತ್ನಕ್ಕೆ ಹಾಗೂ ಪ್ರಯೋಗಕ್ಕೆ ಒಡ್ಡಿಕೊಳ್ಳುವರಲ್ಲಿ ಪೃಥ್ವಿರಾಜ್ ಸುಕುಮಾರನ್ ಕೂಡ ಒಬ್ಬರು. ತಮ್ಮ ಚಿತ್ರಗಳಿಂದ ಹಾಗೂ ಪಾತ್ರಗಳಿಂದ, ಕೇವಲ ಕೇರಳದಲ್ಲಿ ಅಷ್ಟೇ ಅಲ್ಲ ಭಾರತದೆಲ್ಲೆಡೆ ಮನೆ ಮಾತಾಗಿರುವ ಪೃಥ್ವಿರಾಜ್ ಸುಕುಮಾರನ್ ಸದ್ಯಕ್ಕೆ ಆಡು ಜೀವಿತಂ ಚಿತ್ರದ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ.
ಹೌದು, ಆಡು ಜೀವಿತಂ.. ಇದೇ ಮಾರ್ಚ್ 28ಕ್ಕೆ ತೆರೆಗೆ ಬರಲಿರುವ ಸಿನಿಮಾ. ಹಿಂದೆ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಈ ಚಿತ್ರದ ಟ್ರೇಲರ್ ಸದ್ಯಕ್ಕೆ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ಸದ್ದನ್ನೂ ಮಾಡುತ್ತಿದೆ.

ಪೃಥ್ವಿರಾಜ್ ಸುಕುಮಾರನ್ ಇಲ್ಲಿ ಬೇರೆಯದ್ದೇ ಅವತಾರ ಎತ್ತಿದ್ದಾರೆ. ಪಾತ್ರಕ್ಕಾಗಿ 30 ಕೆಜಿ ತೂಕವನ್ನೂ ಇಳಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಈ ಚಿತ್ರಕ್ಕೆ ರಕ್ತವನ್ನೇ ಬಸಿದಿದ್ದಾರೆ. ಬಿಡುಗಡೆಯಾದ ಟ್ರೇಲರ್ ಇದಕ್ಕೆ ಅತ್ಯುತ್ತಮ ಉದಾಹರಣೆ.
ಅಂದ್ಹಾಗೇ ಆಡು ಜೀವಿತಂ ನೈಜಕಥೆಯಾದಾರಿತ ಸಿನಿಮಾ. ಸೌದಿ ಅರೇಬಿಯಾದಲ್ಲಿ ನಜೀಬ್ ಎಂಬ ಮಲಯಾಳಿ ವ್ಯಕ್ತಿ ಅನುಭವಿಸಿದ್ದ ನರಕಯಾತನೆ ಈ ಚಿತ್ರದಲ್ಲಿದೆ. ಯಾರದ್ದೋ ಮಾತನ್ನ ನಂಬಿ ಜೀವನೋಪಾಯಕ್ಕೆ ಸೌದಿ ಅರೇಬಿಯಾಗೆ 1993ರಲ್ಲಿ ತೆರಳಿದ್ದ ನಜೀಬ್ ಅಲ್ಲಿಂದ ಜೀವಂತ ಮರಳಿದ್ದೇ ಪವಾಡ.

ಹೌದು, ಅಸಲಿಗೆ ಇದ್ದ ಬದ್ದುದ ಜಮೀನು ಮಾರಿ, 55.000 ಹೊಂದಿಸಿ ಸೌದಿಗೆ ತೆರಳಿದ್ದ ನಜೀಬ್ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವ ಕನಸು ಕಂಡಿದ್ದರು. ಆದರೆ ಅಲ್ಲಿ ಕಾಲಿಟ್ಟ ನಂತರ ವಾಸ್ತವದ ಅರಿವು ಇವರಿಗೆ ಆಗಿತ್ತು. ಮರುಭೂಮಿಯನ್ನು ತಲುಪಿದ ನಂತರ ಒಬ್ಬ ವ್ಯಕ್ತಿ ಮತ್ತು ಅವನ ಸಹೋದರನನ್ನು ಹೊರತುಪಡಿಸಿ ಒಬ್ಬ ಮನುಷ್ಯನನ್ನು ನಜೀಬ್ ಅಲ್ಲಿ ನೋಡಲಿಲ್ಲ. ಮರಳುಗಾಡಿನಲ್ಲಿ 700 ಕುರಿಗಳನ್ನು ನೋಡಿಕೊಳ್ಳುವ ಕೆಲಸ ನಜೀಬ್ ಅವರದ್ದಾಗಿತ್ತು. 2018ರಲ್ಲಿ ಈ ಎಲ್ಲ ವಿಚಾರಗಳನ್ನ ಸಂದರ್ಶನವೊಂದರಲ್ಲಿ ನಜೀಬ್ ಹಂಚಿಕೊಂಡಿದ್ದರು.
ಇಂಥ ಸತ್ಯಕಥೆಯನ್ನ ಹೆಸರಾಂತ ಬರಹಗಾರ ಬೆನ್ಯಾಮಿನ್ ಅಕ್ಷರ ರೂಪಕ್ಕೆ ಇಳಿಸಿದ್ದರು. ಆಡು ಜೀವಿತಂ ಎಂಬ ಹೆಸರಿನಲ್ಲಿಯೇ ಕಾದಂಬರಿ ಬರೆದಿದ್ದರು. ವಿದೇಶಿ ಭಾಷೆಗಳು ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಿಸಲಾಗಿರುವ ಈ ಕಾದಂಬರಿ ಮಲಯಾಳಂ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದು. ಇದೇ ಕಾದಂಬರಿಯನ್ನ ಚಿತ್ರರೂಪಕವನ್ನಾಗಿಸಿದ್ದಾರೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ.

ಪೃಥ್ವಿರಾಜ್ ಸುಕುಮಾರನ್ ಹೊರತು ಪಡಿಸಿದರೆ, ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್ ಮತ್ತು ಕೆ.ಆರ್. ಗೋಕುಲ್ ಜೊತೆಗೆ ಖ್ಯಾತ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕ್ ಅಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಇದ್ದರೆ, ರೆಸುಲ್ ಪೂಕುಟ್ಟಿ ಧ್ವನಿ ವಿನ್ಯಾಸ ಮಾಡಿದ್ದಾರೆ. ಸುನಿಲ್ ಕೆ ಎಸ್ ಚಿತ್ರದ ಸಿನಿಮ್ಯಾಟೋಗ್ರಾಫರ್.
ನಂಬಲು ಸಾಧ್ಯವಾಗುತ್ತಿಲ್ಲ ಎಂದ ಪ್ರಭಾಸ್
ಪೃಥ್ವಿರಾಜ್ ಅಲಿಯಾಸ್ ಸಲಾರ್ ಚಿತ್ರದ ವರದರಾಜ್ ಮನ್ನಾರ್ ಅವರ ಈ ಗೆಟಪ್ ಕಂಡು, ದೇವ ಯಾನೆ ಪ್ರಭಾಸ್ ನಿಬ್ಬೇರಗಾಗಿದ್ದಾರೆ. ವರದರಾಜ ಮನ್ನಾರ್ ಪಾತ್ರ ಮಾಡಿದ್ದು ಇದೇ ವ್ಯಕ್ತಿ ಅಂತ ನಂಬಲಾಗುತ್ತಿಲ್ಲ ಎಂದಿದ್ದಾರೆ. ಪೃಥ್ವಿರಾಜ್ ಅವರಿಗೆ ಮನಪೂರ್ವಕವಾಗಿ ಶುಭಾಶಯವನ್ನೂ ಕೋರಿದ್ದಾರೆ. ಬ್ಲಾಕ್ ಬಸ್ಟರ್ ಗ್ಯಾರಂಟಿ ಎಂಬ ಭವಿಷ್ಯವನ್ನೂ ನುಡಿದಿದ್ದಾರೆ ಪ್ರಭಾಸ್.
ಸದ್ಯಕ್ಕೆ ಆಡುಜೀವಿತಂ ಚಿತ್ರದ ಟ್ರೇಲರ್, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದೆಲ್ಲೆಡೆ ಈ ಚಿತ್ರದ ಕುರಿತು ಚರ್ಚೆ ನಡೆಯುತ್ತಿದೆ. ಮಲಯಾಳಂ ಜೊತೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಮಾರ್ಚ್ 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ.


Click it and Unblock the Notifications











