Dhoomam: ಫಹಾದ್ ಫಾಸಿಲ್ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು? ಮಿಸ್ ಆಗಿದ್ದು ಎಲ್ಲಿ?
ಲೂಸಿಯಾ ಪವನ್ ಕುಮಾರ್ ನಿರ್ದೇಶನದ 'ಧೂಮಮ್' ಸಿನಿಮಾ ಈ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಮತ್ತು ಮಲಯಾಳಂನಲ್ಲಿ ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಹೆಚ್ಚು ಪ್ರಚಾರ ಮಾಡದೇ ಚಿತ್ರವನ್ನು ತೆರೆಗೆ ತರಲಾಗಿದೆ. ಇನ್ನು ಫಹಾದ್ ಫಾಸಿಲ್ ಹಾಗೂ ಅಪರ್ಣಾ ಬಾಲಮುರಳಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ಧಾರೆ.
ಪವನ್ ಕುಮಾರ್ ಬಹಳ ಹಿಂದೆ ಬರೆದುಕೊಂಡಿದ್ದ ಕಥೆ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಯಲ್ಲಿ ಒಳ್ಳೆ ಕಥೆ ಇದೆ, ಒಳ್ಳೆ ಸಂದೇಶ ಕೂಡ ಇದೆ. ಆದರೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಸಿನಿಮಾ ಸೋತಿದೆ. ಆದರೆ ಕೆಲವರಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಕೆಲವರಿಗೆ ಬೋರ್ ಎನಿಸಿದರೆ ಮತ್ತೆ ಕೆಲವರಿಗೆ ಕಿಕ್ ಕೊಡ್ತಿದೆ. ಇನ್ನು ಮಲಯಾಳಂನಲ್ಲಿ ನಿರ್ಮಾಣವಾಗಿರುವ 'ಧೂಮಮ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಂದಿದೆ. ಕನ್ನಡದ ಡಬ್ಬಿಂಗ್ ಗುಣಮಟ್ಟ ಚೆನ್ನಾಗಿದೆ ಎಂದು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.

ಸಿಗರೇಟ್ ಸೇದುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪವನ್ ಸಿನಿಮಾದಲ್ಲಿ ಚರ್ಚಿಸಲಾಗಿದೆ. ನೀತಿ ಪಾಠ ಮಾಡುವ ಬದಲು ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ದಾಟಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆ ಹಾದಿಯಲ್ಲಿ ಎಷ್ಟರಮಟ್ಟಿಗೆ ತಂಡ ಗೆದ್ದಿದೆ ಎನ್ನುವುದನ್ನು ನೋಡಬೇಕಿದೆ. ಸಿಗರೇಟ್ ಸೇದುವವರಿಗೆಲ್ಲಾ ಸಿನಿಮಾ ಕನೆಕ್ಟ್ ಆಗುತ್ತದೆ. ಆದರೂ ಕೂಡ 'ಧೂಮಮ್' ಎಂಗೇಜಿಂಗ್ ಎನಿಸುವುದಿಲ್ಲ.
'ಧೂಮಮ್' ಫಸ್ಟ್ ಡೇ ಕಲೆಕ್ಷನ್
ಅತ್ತ ಮಾಲಿವುಡ್ ಇತ್ತ ಸ್ಯಾಂಡಲ್‌ವುಡ್ ಎರಡೂ ಕಡೆ ಹೆಚ್ಚು ಪ್ರಚಾರ ಮಾಡದೇ 'ಧೂಮಮ್' ಸಿನಿಮಾ ತೆರೆಗೆ ತರಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹೆಚ್ಚು ಪ್ರಚಾರ ಬೇಡ. ಮೌತ್ ಟಾಕ್‌ನಿಂದ ಜನ ಸಿನಿಮಾ ನೋಡೊಕೆ ಬರ್ತಾರೆ ಎನ್ನುವುದು ಹೊಂಬಾಳೆ ಸಂಸ್ಥೆಯ ಐಡಿಯಾ ಆಗಿತ್ತು. ಅದೇ ರೀತಿ ಸಿನಿಮಾ ತೆರೆಗೆ ಬಂದಿದೆ. ಇನ್ನು ಫಸ್ಟ್ ಡೇ ಮಲಯಾಳಂ ವರ್ಷನ್ ಅಂದಾಜು 1.8 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಓರ್ಮ್ಯಾಕ್ಸ್ ಸಂಸ್ಥೆ ವರದಿ ಮಾಡಿದೆ.

ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟು?
'ಧೂಮಮ್' ಸಿನಿಮಾ ಏಕಕಾಲಕ್ಕೆ ಕನ್ನಡದಲ್ಲೂ ರಿಲೀಸ್ ಆಗುತ್ತದೆ ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಒಂದು ದಿನ ಬಾಕಿ ಇರುವಂತೆ ಈ ಬಗ್ಗೆ ಚಿತ್ರತಂಡ ಹೇಳಿತ್ತು. ಡಬ್ಬಿಂಗ್ ಸಿನಿಮಾ ಎನ್ನುವ ಕಾರಣಕ್ಕೆ ಪ್ರಚಾರ ಕೂಡ ಕಡಿಮೆ ಮಾಡಲಾಗಿತ್ತು. ಮೊದಲ ದಿನ ಚಿತ್ರದ ಕನ್ನಡ ವರ್ಷನ್ 40 ರಿಂದ 50 ಲಕ್ಷ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಆ ಮೂಲಕ ದೇಶ್ಯಾದ್ಯಂತ ಮಲಯಾಳಂ ಮತ್ತು ಕನ್ನಡ ವರ್ಷನ್ ಸೇರಿ ಒಟ್ಟು ಗಳಿಕೆ ಒಂದೂವರೆ ಕೋಟಿ ರೂ. ದಾಟಿದಂತಾಗಿದೆ.
ಬಿಗ್ ಓಪನಿಂಗ್ ಸಿಗಲಿಲ್ಲ
ಈ ಸಿನಿಮಾ ಮೂಲಕ ಹೊಂಬಾಳೆ ಸಂಸ್ಥೆ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ. ಫಹಾದ್ ಫಾಸಿಲ್ ಒಂದು ವರ್ಗದ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತ. ಕಥೆ ಚೆನ್ನಾಗಿದ್ದರೆ ಹೀರೊ ಯಾರು ಅನ್ನೋದು ಮುಖ್ಯವಾಗಲ್ಲ ನಿಜ. ಆದರೂ 'ಧೂಮಮ್' ಚಿತ್ರದಲ್ಲಿ ಕನ್ನಡ ನಟ ನಟಿಸಿದ್ದರೆ ಒಳ್ಳೆ ಓಪನಿಂಗ್ ಸಿಗುತ್ತಿತ್ತು ಎನ್ನುವುದು ಕೆಲವರ ವಾದ. ಇನ್ನು ಹೆಚ್ಚು ಪ್ರಚಾರ ಮಾಡದೇ ಇದ್ದಿದ್ದು ಕೂಡ ಚಿತ್ರದ ಓಪನಿಂಗ್‌ಗೆ ಹಿನ್ನಡೆಯಾಗಿದೆ.
ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್
ಪ್ರಚಾರ ಹೆಚ್ಚು ಮಾಡದೇ ಇದ್ದರೂ 150ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಾಜ್ಯಾದ್ಯಂತ ಕನ್ನಡ ವರ್ಷನ್ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಶುಕ್ರವಾರಕ್ಕಿಂತ ಶನಿವಾರ ಶೋಗಳ ಸಂಖ್ಯೆ ಹೆಚ್ಚಾಗಿದೆ. ಆದಾಗ್ಯೂ ಟಿಕೆಟ್ ಬುಕ್ಕಿಂಗ್‌ಗೆ ಅಷ್ಟೇನು ಒಳ್ಳೆ ರೆಸ್ಪಾನ್ಸ್ ಸಿಕ್ತಿಲ್ಲ. ಕೆಲವರು ಇದು ಓಟಿಟಿ ಸಿನಿಮಾ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬರುವ ನಿರೀಕ್ಷೆಯಿದೆ.


Click it and Unblock the Notifications