ಗಣೇಶ್ ನಟಿಸಬೇಕಿದ್ದ 'ಧೂಮಂ' ಚಿತ್ರಕ್ಕೆ ಮಲಯಾಳಂನ ಫಹಾದ್ ನಾಯಕನಾಗಿದ್ದೇಕೆ? ಕೈಕೊಟ್ಟಿದ್ದು ಯಾರು?
ಧೂಮಂ.. ಈ ವರ್ಷ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಚಿತ್ರ. ಲೂಸಿಯಾ, ಯೂ ಟರ್ನ್ ರೀತಿಯ ವಿಭಿನ್ನ ಕಥಾ ಹಂದರವಿರುವ ಚಿತ್ರಗಳನ್ನು ನಿರ್ದೇಶನ ಮಾಡಿ ತಾನೊಬ್ಬ ವಿಭಿನ್ನ ನಿರ್ದೇಶಕ ಎನಿಸಿಕೊಂಡಿರುವ ಪವನ್ ಕುಮಾರ್ ನಿರ್ದೇಶನವಿರುವ ಚಿತ್ರ ಇದಾಗಿದೆ.
ಇನ್ನು ಈ ಚಿತ್ರಕ್ಕೆ ಕನ್ನಡದ ಪ್ರತಿಷ್ಟಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದ್ದು, ಓಟಿಟಿ ಮೂಲಕ ಬಿಗ್ಗೆಸ್ಟ್ ಸ್ಟಾರ್ ಆಗಿ ಖ್ಯಾತಿಯನ್ನು ಗಳಿಸಿ ದೇಶದ ಎಲ್ಲೆಡೆ ತನ್ನ ಅಭಿನಯದಿಂದ ಮೆಚ್ಚುಗೆ ಪಡೆದುಕೊಂಡಿರುವ ಮಲಯಾಳಂ ನಟ ಫಹಾದ್ ಫಾಸಿಲ್ ನಾಯಕನಾಗಿ ನಟಿಸಿದ್ದಾರೆ.

ನಾಯಕಿಯ ಪಾತ್ರಕ್ಕೂ ಸಹ ಮಲಯಾಳಂ ನಟಿಯನ್ನೇ ಆರಿಸಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣ ಬಾಲಮುರಳಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಗೊಂಡಿದ್ದು, ಚಿತ್ರದಲ್ಲಿ ಕನ್ನಡದ ಅಚ್ಯುತ್ ಕುಮಾರ್ ಸೇರಿದಂತೆ ಮಲಯಾಳಂನ ರೋಷನ್ ಮ್ಯಥ್ಯೂ, ಅನು ಮೋಹನ್ ಹಾಗೂ ವಿನೀತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಕನ್ನಡದ ನಿರ್ದೇಶಕ ನಿರ್ದೇಶನ ಮಾಡಿರುವ ಹಾಗೂ ಕನ್ನಡದ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂನ ನಟ ಹಾಗೂ ನಟಿಯರೇ ತುಂಬಿದ್ದು, ಎಲ್ಲರಲ್ಲಿಯೂ ಕನ್ನಡದ ನಟ - ನಟಿ ಈ ಚಿತ್ರಕ್ಕೆ ಸಿಗಲಿಲ್ವಾ ಎಂಬ ಪ್ರಶ್ನೆ ಮೂಡಿದೆ. ಆದರೆ ಇದು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಮಲಯಾಳಂ ಚಿತ್ರವಾಗಿದ್ದು, ಸಾಮಾನ್ಯವಾಗಿ ಮಲಯಾಳಂ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಲಯಾಳಂ ಕಲಾವಿದರನ್ನೇ ಆರಿಸಿಕೊಂಡಿದ್ದಾರೆ.
ಆದರೆ ಈ ಚಿತ್ರವನ್ನು ಪವನ್ ಕುಮಾರ್ ನೇರವಾಗಿ ಮಲಯಾಳಂ ಕಲಾವಿದರಿಗೆ ಮಾಡಲು ಹೊರಟವರಲ್ಲ. ಬದಲಾಗಿ ಅನೇಕ ಬಾರಿ ಕನ್ನಡ ಕಲಾವಿದರಿಗೇ ನಿರ್ದೇಶನ ಮಾಡಲು ಮುಂದಾಗಿ ದೊಡ್ಡ ಮಟ್ಟದಲ್ಲಿ ವಿಫಲ ಹೊಂದಿದ್ದರು. ಹೌದು, ಈ ವಿಷಯವನ್ನು ಪವನ್ ಕುಮಾರ್ ಕಳೆದ ವರ್ಷ ಧೂಮಂ ಚಿತ್ರ ಸೆಟ್ಟೇರುವ ಸಂದರ್ಭದಲ್ಲಿ ಡೆಕ್ಕನ್ ಹೆರಾಲ್ಡ್ ನಡೆಸಿದ ಸಂದರ್ಶನದ ಸಮಯದಲ್ಲಿ ಹಂಚಿಕೊಂಡಿದ್ದರು.
ಈ ಸಂದರ್ಶನದ ಮೂಲಕ ಪವನ್ ಕುಮಾರ್ ಧೂಮಂ ಚಿತ್ರವನ್ನು ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ನಿರ್ದೇಶಿಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದರು ಎಂಬುದೂ ಸಹ ತಿಳಿದುಬಂತು. ಕಥೆ ನಟನಿಗೆ ಇಷ್ಟವಾದರೆ ನಿರ್ಮಾಪಕರು ಸಿಗುತ್ತಿರಲಿಲ್ಲ, ನಿರ್ಮಾಪಕರು ಸಿಕ್ಕಾಗ ನಟರು ಚಿತ್ರಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದು ಪವನ್ ಕುಮಾರ್ ಹೇಳಿಕೊಂಡಿದ್ದರು.
ಇನ್ನು ಈ ಚಿತ್ರದ ಕಥೆಯನ್ನು ಪವನ್ ಕುಮಾರ್ ನಿರ್ದೇಶಕನಾಗುವ ಮುನ್ನವೇ 2008ರಲ್ಲಿ ಬರೆದಿದ್ದರು. ಆ ಬಳಿಕ 2011ರಲ್ಲಿ ಲೈಫು ಇಷ್ಟೇನೆ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಪವನ್ ಕುಮಾರ್‌ಗೆ ಈ ಚಿತ್ರವನ್ನು ತೆರೆಯ ಮೇಲೆ ತರಲು ಅವಕಾಶ ಸಿಕ್ಕಿದ್ದು ಈಗಲೇ.
ಧೂಮಂ ರೀತಿಯೇ 2007ರಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ 'ನೋ ಸ್ಮೋಕಿಂಗ್' ಎಂಬ ಚಿತ್ರ ತೆರೆಗೆ ಬಂದಿತ್ತು. ಆ ಚಿತ್ರವೂ ಸಹ ಧೂಮಪಾನದ ಮೇಲೆ ಆಧಾರವಾಗಿದ್ದ ಕಥೆಯನ್ನು ಹೊಂದಿತ್ತು. ಆದರೆ ಈ ಚಿತ್ರ ಯಶಸ್ಸು ಗಳಿಸದೇ ಸೋತಿತ್ತು.
ಈ ಕುರಿತು ಮಾತನಾಡಿದ್ದ ಪವನ್ ಕುಮಾರ್ "ಈ ಚಿತ್ರ ನಿರೀಕ್ಷಿಸಿದ ಯಶಸ್ಸು ಗಳಿಸಲಿಲ್ಲ. ವಿಮರ್ಶಕರೂ ಸಹ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರಲಿಲ್ಲ. ನೋ ಸ್ಮೋಕಿಂಗ್ ಚಿತ್ರ ಸೋತ ಕಾರಣದಿಂದೇನೋ ನನ್ನ ಚಿತ್ರಕ್ಕೆ ಬಂಡವಾಳ ಹೂಡಲು ಯಾರೂ ಮುಂದೆ ಬಂದಿರಲಿಲ್ಲ" ಎಂದು ಹೇಳಿಕೊಂಡಿದ್ದರು.
ಇನ್ನು ಈ ಚಿತ್ರಕ್ಕೆ ಮೊದಲು ಪವನ್ ಕುಮಾರ್ "C10H14N2" ಎಂಬ ಶೀರ್ಷಿಕೆಯನ್ನು ಇಟ್ಟಿದ್ದ ಪವನ್ ಕುಮಾರ್ ಈಗ ಧೂಮಂ ಎಂದು ಬದಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ನಿರ್ಮಾಪಕರ ಬೆಂಬಲ ಸಿಗದ ಕಾರಣ ಈ ಚಿತ್ರದಲ್ಲಿ ಇದೀಗ ಮಲಯಾಳಂ ನಟ ನಾಯಕನಾಗಿದ್ದಾರೆ. ಅಂದುಕೊಂಡಂತೆ ಮೊದಲೇ ನಿರ್ಮಾಪಕರು ಬಂಡವಾಳ ಹೂಡಲು ಮುಂದಾಗಿದ್ದರೆ, ಕನ್ನಡದ ನಟರೇ ಈ ಚಿತ್ರದಲ್ಲಿ ನಟಿಸಿರುತ್ತಿದ್ದರು ಹಾಗೂ ಚಿತ್ರ ಈಗಾಗಲೇ ತೆರೆಕಂಡು ವರ್ಷಗಳು ಉರುಳಿರುತ್ತಿದ್ದವು.


Click it and Unblock the Notifications











