ಚಿತ್ರೀಕರಣ ಮುಗಿಸಿದ ದೃಶ್ಯಂ 2 ತಂಡ: ಪೋಸ್ಟ್ ಪ್ರೊಡಕ್ಷನ್ ಶುರು
ಸೂಪರ್ ಹಿಟ್ ಸಿನಿಮಾ ದೃಶ್ಯಂ ನ ಮುಂದಿನ ಭಾಗದ ಚಿತ್ರೀಕರಣ ಮುಗಿದಿದೆ ಎಂದು ಚಿತ್ರತಂಡ ಪ್ರಕಟಿಸಿದೆ.
ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ದೃಶ್ಯಂ 2 ಸಿನಿಮಾವನ್ನು ನಿರ್ದೇಶಕ ಜೀತು ಜೋಸೆಫ್ ಘೋಷಿಸಿದ್ದರು. ಚಿತ್ರೀಕರಣ ಮಾಡಲು ಅನುಮತಿ ನೀಡಿದ ಕೂಡಲೇ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಲಾಗಿತ್ತು.
ದೃಶ್ಯಂ ನಲ್ಲಿ ನಟಿಸಿದ್ದ ಮೋಹನ್‌ಲಾಲ್, ಮೀನಾ ಮಕ್ಕಳ ಪಾತ್ರದಲ್ಲಿ ನಟಿಸಿದ್ದ ಅನ್ಸಿಬಾ, ಎಸ್ತರ್ ಅನಿಲ್ ಅವರುಗಳೇ ಈ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ದೃಶ್ಯಂ 2 ಸಹ ಥ್ರಿಲ್ಲರ್ ಕತೆ ಹೊಂದಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ನಿರ್ದೇಶಕ ಜೀತು ಜೋಸೆಫ್.

ಮೇ 21 ರಂದು ಸಿನಿಮಾ ಘೋಷಣೆ ಆಗಿತ್ತು
ದೃಶ್ಯ 2 ಸಿನಿಮಾ ನಿರ್ದೇಶಿಸುತ್ತಿರುವುದಾಗಿ ಮೇ 21 ರಂದು ನಿರ್ದೇಶಕ ಜೀತು ಜೋಸೆಫ್ ಘೋಷಿಸಿದ್ದರು. ಸೆಪ್ಟೆಂಬರ್ 23 ರಿಂದ ಚಿತ್ರೀಕರಣ ಪ್ರಾರಂಭವಾಯಿತು. 44 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಚಿತ್ರತಂಡ.

ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಾಗಿದೆ
ಇನ್ನು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭವಾಗಲಿದ್ದು, ಸಂಕಲನ, ಹಿನ್ನೆಲೆ ಸಂಗೀತ, ಡಬ್ಬಿಂಗ್, ಸ್ಫೆಷಲ್ ಎಫೆಕ್ಟ್ಸ್, ಸಂಗೀತಿ ರೀಮಿಕ್ಸಿಂಗ್, ಸೆನ್ಸಾರ್, ಪ್ರಚಾರದ ನಂತರ ಸಿನಿಮಾ ಬಿಡುಗಡೆ ಆಗಲಿದೆ. ಇದೆಲ್ಲದಕ್ಕೂ ಸುಮಾರು ಒಂದು ತಿಂಗಳು ಸಮಯ ಹಿಡಿಯುವ ಸಾಧ್ಯತೆ ಇದೆ.

ಚೈನೀಸ್, ಸಿಂಹಳಿ ಭಾಷೆಗೂ ರೀಮೇಕ್
ದೃಶ್ಯಂ ಮೊದಲ ಸಿನಿಮಾ ಬಿಡುಗಡೆ ಆಗಿ ಭಾರಿ ದೊಡ್ಡ ದಾಖಲೆ ಸೃಷ್ಟಿಸಿತು. ದೃಶ್ಯಂ ಸಿನಿಮಾವು, ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳೀ ಭಾಷೆ ಹಾಗೂ ಚೈನೀಸ್ ಭಾಷೆಗೂ ರೀಮೇಕ್ ಆಯಿತು. ವಿಶೇಷವೆಂದರೆ ಬಹುತೇಕ ಭಾಷೆಗಳಲ್ಲಿ ಈ ಸಿನಿಮಾ ಹಿಟ್ ಆಯಿತು.
Recommended Video

ದೃಶ್ಯಂ 2 ಸಹ ಕನ್ನಡಕ್ಕೆ ರೀಮೇಕ್ ಆಗುತ್ತದೆಯೇ?
ಕನ್ನಡದಲ್ಲಿ ದೃಶ್ಯಂ ರೀಮೇಕ್‌ನಲ್ಲಿ ರವಿಚಂದ್ರನ್ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಯಿತು. ರವಿಚಂದ್ರನ್ ಅವರ ರಾಜೇಂದ್ರ ಪೊನ್ನಪ್ಪ ಪಾತ್ರ ಜನಪ್ರಿಯವಾಯಿತು. ಇದೀಗ ದೃಶ್ಯಂ 2 ಬಿಡುಗಡೆ ಆಗಲಿದ್ದು, ಆ ಸಿನಿಮಾವನ್ನೂ ಸಹ ಕನ್ನಡದಲ್ಲಿ ರೀಮೇಕ್ ಮಾಡುತ್ತಾರೆಯೇ ಕಾದು ನೋಡಬೇಕಿದೆ.


Click it and Unblock the Notifications











