ಚಿತ್ರಮಂದಿರಗಳಿಗೆ ದಾಂಗುಡಿ ಇಟ್ಟ 'ದೃಶ್ಯಂ 2'
ಮೋಹನ್‌ಲಾಲ್ ನಟನೆಯ 'ದೃಶ್ಯಂ 2' ಸಿನಿಮಾ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಲಗೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ದೊಡ್ಡ ಯಶಸ್ಸು ಕಂಡಿರುವ 'ದೃಶ್ಯಂ 2' ಸಿನಿಮಾ ಈಗ ಚಿತ್ರಮಂದಿರದಲ್ಲಿಯೂ ಬಿಡುಗಡೆ ಆಗಲು ಸಜ್ಜಾಗಿದೆ.
ಹೌದು, 'ದೃಶ್ಯಂ 2' ಸಿನಿಮಾ ಸೌದಿ ರಾಷ್ಟ್ರಗಳಲ್ಲಿ ಚಿತ್ರಮಂದಿರಗಳಲ್ಲಿ ಇಂದಿನಿಂದ ಬಿಡುಗಡೆ ಆಗಿದೆ. ಭಾರತದಲ್ಲಿ ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವಂತಿಲ್ಲ. ಆದರೆ ನಿರ್ಮಾಪಕರು ವಿದೇಶಗಳಲ್ಲಿ ಬಿಡುಗಡೆ ಮಾಡುವ ಹಕ್ಕುಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದರು ಹಾಗಾಗಿಯೇ ಮಲಯಾಳಂ ಭಾಷಿಕರು ಹೆಚ್ಚಿಗಿರುವ ಮತ್ತು ಮೋಹನ್‌ಲಾಲ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿರುವ ಸೌದಿ ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ.
ಯುಎಇ ನಲ್ಲಿ 27 ಚಿತ್ರಮಂದಿರಗಳಲ್ಲಿ, ಕತಾರ್‌ನಲ್ಲಿ ಎಂಟು ಚಿತ್ರಮಂದಿರಗಳಲ್ಲಿ, ಒಮನ್‌ನಲ್ಲಿ 2 ಚಿತ್ರಮಂದಿರಗಳಲ್ಲಿ 'ದೃಶ್ಯಂ 2' ಸಿನಿಮಾ ಜುಲೈ 1 ರಂದು ಬಿಡುಗಡೆ ಆಗಿದೆ.

ಮೋಹನ್‌ಲಾಲ್ ನಟನೆಯ ಹಲವಾರು ಸಿನಿಮಾಗಳು ಸೌದಿ ರಾಷ್ಟ್ರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿವೆ. 'ದೃಶ್ಯಂ 2' ಈಗಾಗಲೇ ಅತ್ಯುತ್ತಮ ಸಿನಿಮಾ ಎಂಬ ಖ್ಯಾತಿಗಳಿಸಿದೆ. ಒಟಿಟಿಯಲ್ಲಿ ಬಿಡುಗಡೆ ಆದಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದೇ ಪ್ರದರ್ಶನವನ್ನು ಚಿತ್ರಮಂದಿರದಲ್ಲಿ ಮುಂದುವರೆಸುತ್ತದೆಯೇ ಕಾದು ನೋಡಬೇಕಿದೆ.
'ದೃಶ್ಯಂ 2' ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಫೆಬ್ರವರಿ 9 ರಂದು ಬಿಡುಗಡೆ ಆಗಿತ್ತು. 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗವಾಗಿದ್ದ 'ದೃಶ್ಯಂ 2'ನಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ್ದ ನಟರೇ ನಟಿಸಿದ್ದಾರೆ. ಜೀತು ಜೋಸೆಫ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೋಹನ್‌ಲಾಲ್ ಆಪ್ತ ಆಂಟೋನಿ ಪೆರುವಂಬೂರ್.
Recommended Video
ಮೋಹನ್‌ಲಾಲ್ ನಟನೆಯ ಮತ್ತೊಂದು ದೊಡ್ಡ ಬಜೆಟ್ ಸಿನಿಮಾ 'ಮರಕ್ಕರ್' ಆಗಸ್ಟ್ 12 ರಂದು ತೆರೆಗೆ ಬರಲಿದೆ. ಕೇರಳದ ಎಲ್ಲ ಚಿತ್ರಮಂದಿರಗಳಲ್ಲಿ ಸತತ ಮೂರು ವಾರ ಅದೇ ಸಿನಿಮಾ ಪ್ರದರ್ಶನ ಕಾಣಲಿದೆ. ಅದರ ಹೊರತಾಗಿ ಮೋಹನ್‌ಲಾಲ್ ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸುತ್ತಿರುವ 'ಬಾರೋಜ್' ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದೆ.


Click it and Unblock the Notifications











