Dr Priya: ಮಲಯಾಳಂ ಕಿರುತೆರೆಗೆ ಮತ್ತೊಂದು ಶಾಕ್: ಹೃದಯಾಘಾತದಿಂದ 8 ತಿಂಗಳ ಗರ್ಭಿಣಿ, ನಟಿ ಡಾ ಪ್ರಿಯಾ ನಿಧನ
ಒಂದು ಆಘಾತದಿಂದ ಹೊರ ಬರುವ ಮುನ್ನವೇ ಮಲಯಾಲಂ ಕಿರುತೆರೆಗೆ ಮತ್ತೊಂದು ದೊಡ್ಡ ಆಘಾತವುಂಟಾಗಿದೆ. ನಟಿ ರೆಂಜುಶಾ ಮೆನನ್ ಅವರ ಆಘಾತಕಾರಿ ಸಾವಿನಿಂದ ಚೇತರಿಸಿಕೊಳ್ಳುವ ಮುಬ್ಬವೇ ಕಿರುತೆರೆ ನಟಿ ಡಾ. ಪ್ರಿಯಾ ಹೃದಯಾಘಾತಕ್ಕೆ ಒಳಗಾಗಿ ಬುಧವಾರ ನಿಧನರಾಗಿದ್ದಾರೆ.
ಹಲವಾರು ಧಾರಾವಾಹಿಗಳಿಂದ ಖ್ಯಾತರಾಗಿದ್ದ 35 ವರ್ಷದ ನಟಿ ಡಾ. ಪ್ರಿಯಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಹೃದಯಾಘಾತಕ್ಕೆ ಒಳಗಾಗುವ ಮೊದಲು ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದರು. ಈ ದುಃಖದ ವಿಷಯವನ್ನು ನಟ ಕಿಶೋರ್ ಸತ್ಯ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ.

ಗರ್ಭಿಣಿ ನಟಿ ಡಾ. ಪ್ರಿಯಾ ನಿಧನ
ಖಾಸಗಿ ಆಸ್ಪತ್ರೆಯಲ್ಲಿ ಡಾ. ಪ್ರಿಯಾ ನಿಧನರಾಗಿದ್ದು, ಈ ವೇಳೆ ಮಗುವನ್ನು ಆಪರೇಷನ್ ಮೂಲಕ ಹೊರತೆಗೆಯಲಾಗಿದೆ. ಆಕೆಯ ನವಜಾತ ಶಿಶು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿದೆ. ನಟ ಕಿಶೋರ್ ಸತ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಅಭಿಮಾನಿಗಳಿಗೆ ಹೃದಯವಿದ್ರಾವಕ ಸುದ್ದಿಯನ್ನು ತಿಳಿಸಿದ್ದಾರೆ.
''ಮಲಯಾಳಂ ಕಿರುತೆರೆ ವಲಯದಲ್ಲಿ ಮತ್ತೊಂದು ಅನಿರೀಕ್ಷಿತ ಸಾವು ಉಂಟಾಗಿದೆ. ಡಾ.ಪ್ರಿಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಕೆ 8 ತಿಂಗಳ ಗರ್ಭಿಣಿಯಾಗಿದ್ದರು. ಮಗು ಐಸಿಯುನಲ್ಲಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ" ಎಂದು ಬರೆದಿದ್ದಾರೆ.
''ದೇವರು ನಂಬಿದ ಮುಗ್ಧ ಮನಸ್ಸುಗಳಿಗೆ ಯಾಕೆ ಈ ಕ್ರೌರ್ಯ ತೋರಿದ. ಮನಸು ಪ್ರಶ್ನೆಗಳನ್ನು ಮರುಕಳಿಸುತ್ತಲೇ ಇತ್ತು.... ಉತ್ತರವಿಲ್ಲದ ಪ್ರಶ್ನೆಗಳು... ರಂಜುಶಾ ಸಾವಿನ ಆಘಾತಕಾರಿ ಸುದ್ದಿ ಇನ್ನು ಮರೆಯಾಗುವ ಮುನ್ನವೇ ಮತ್ತೆ ಈ ಸುದ್ದಿ .... ಕೇವಲ 35 ವರ್ಷದ ವ್ಯಕ್ತಿ ಇಹಲೋಕ ತ್ಯಜಿಸಿದಾಗ ಸಾಂತ್ವನ ಹೇಳಲು ಮನಸ್ಸು ಭಾರವಾಗುತ್ತದೆ. ಪ್ರಿಯಾಳ ಪತಿ ಮತ್ತು ತಾಯಿ ಈ ದುಃಖವನ್ನು ಹೇಗೆ ಚೇತರಿಸಿಕೊಳ್ಳುತ್ತಾರೋ...ಗೊತ್ತಿಲ್ಲ" ಎಂದು ನೋವಿನಿಂದ ಪೋಸ್ಟ್ ಹಾಕಿದ್ದಾರೆ.
ನಟಿ ಡಾ. ಪ್ರಿಯಾ ಮಲಯಾಳಂ ಕಿರುತೆರೆಯಲ್ಲಿ ಚಿರಪರಿಚಿತರಾಗಿದ್ದರು. ಆದರೆ, ಮದುವೆಯಾದ ನಂತರ ನಟನೆಯಿಂದ ವಿರಾಮ ಪಡೆದಿದ್ದರು. ಸ್ಥಳೀಯ ವರದಿಗಳ ಪ್ರಕಾರ, ಪ್ರಿಯಾ ಎಂಡಿ ವ್ಯಾಸಂಗ ಮಾಡುತ್ತಿದ್ದರು ಜೊತೆಗೆ ತಿರುವನಂತಪುರಂನ ಪಿಆರ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಸೋಮವಾರ ಮಲಯಾಳಂ ನಟಿ ರೆಂಜುಶಾ ಮೆನನ್ ಅವರು ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 35 ವರ್ಷದ ನಟಿ ತಮ್ಮ ಪತಿ ಮನೋಜ್ ಅವರೊಂದಿಗೆ ಫ್ಲಾಟ್‌ನಲ್ಲಿ ವಾಸವಿದ್ದರು. ನಟಿ ರೆಂಜುಶಾ ಮೆನನ್ ಅವರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications











