Breaking: ಮಲಯಾಳಂ ನಟಿ ಕಿರುಕುಳ ಪ್ರಕರಣ; ಪಲ್ಸರ್ ಸುನಿ ಸೇರಿ 6 ಮಂದಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
2017ರಲ್ಲಿ ನಡೆದಿದ್ದ ಮಲಯಾಳಂ ನಟಿ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ತೀರ್ಪು ಹೊರಬಿದ್ದಿದೆ. ಎರ್ನಾಕುಲಂ ಸೆಷನ್ಸ್ ಕೋರ್ಟ್ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ 6 ಮಂದಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತಲಾ 50 ಸಾವಿರ ದಂಡ ಹಾಕಿದೆ.
ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಪ್ರಮುಖ ಆರೋಪಿಯಾದ ಮಲಯಾಳಂ ನಟ ದಿಲೀಪ್ ಖುಲಾಸೆಯಾಗಿದ್ದರು. ದಿಲೀಪ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಹಾಗೂ ಸಮರ್ಥ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ದಿಲೀಪ್ ಸೇರಿ ಇದೇ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಮೂವರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿದ್ದ ಕೋರ್ಟ್ ಇತರ 6 ಆರೋಪಿಗಳನ್ನು ತಪ್ಪಿತಸ್ಥರೆಂದು ಹೇಳಿತ್ತು.

ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದ 6 ಮಂದಿಗೆ ಇದೀಗ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಘೋಷಿಸಿದೆ. ಪ್ರಕರಣದಲ್ಲಿ ಅಪರಾಧಿಗಳ ಪಾತ್ರ ಏನು ಎನ್ನುವುದನ್ನು ಆಧರಿಸಿ ಶಿಕ್ಷೆ ಪ್ರಕಟವಾಗಿದೆ. 8 ವರ್ಷಗಳ ಹಿಂದೆ ಮಲಯಾಳಂ ನಟಿಯ ಅಪಹರಣ ಹಾಗೂ ಕಿರುಕುಳ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಚಲಿಸುತ್ತಿದ್ದ ವಾಹನದಲ್ಲಿ ಆಕೆಗೆ ಕಿರುಕುಳ ನೀಡಲಾಗಿತ್ತು.
ಪಲ್ಸರ್ ಸುನಿ (ಎ1), ಮಾರ್ಟಿನ್ ಆಂಟೋನಿ (ಎ2), ಬಿ ಮಣಿಕಂಠನ್ (ಎ3), ವಿಜೀಶ್ ವಿಪಿ (ಎ4), ಸಲೀಂ ಎಚ್ ಅಲಿಯಾಸ್ ವಡಿವಲ್ ಸಲೀಂ (ಎ5) ಹಾಗೂ ಪ್ರದೀಪ್ (ಎ6) ಕ್ರಿಮಿನಲ್ ಪಿತೂರಿ, ಅಪಹರಣ, ಕ್ರಿಮಿನಲ್ ಬಲಪ್ರಯೋಗ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪಗಳಲ್ಲಿ ತಪ್ಪಿತಸ್ಥರೆಂದು ವಿಚಾರಣೆಯಲ್ಲಿ ಸಾಬೀತಾಗಿದೆ.
ಪ್ರಕರಣದ ವಿವಾರಣೆ ಜನವರಿ 30, 2020 ರಂದು ಪ್ರಾರಂಭವಾಗಿತ್ತು. 5 ವರ್ಷಗಳ ಕಾಲ ವಿಚಾರಣೆ ನಡೆದಿದೆ. ಸಂತ್ರಸ್ತ ನಟಿ ವಿಚಾರಣೆಗೆ ಮಹಿಳಾ ನ್ಯಾಯಾಧೀಶರನ್ನು ಕೋರಿದ ನಂತರ ಹನಿ ಎಂ ವರ್ಗೀಸ್ ಅವರನ್ನು 2019ರಲ್ಲಿ ನೇಮಿಸಲಾಗಿತ್ತು.
A1 ಆರೋಪಿ ಕಿರುಕುಳ ನೀಡಿದಾಗ ಇತರರು ಅವನಿಗೆ ಸಹಕರಿಸಿದ್ದಾರೆ ಎಂದು ಗಮನಿಸಿದ ನ್ಯಾಯಾಲಯ, ಎಲ್ಲರಿಗೂ ಸಮಾನ ಶಿಕ್ಷೆ ನೀಡಬೇಕೇ, ಬೇಡವೇ ಎಂಬುದರ ಕುರಿತು ಪ್ರಾಸಿಕ್ಯೂಷನ್‌ನಿಂದ ಸ್ಪಷ್ಟನೆ ಕೇಳಿತ್ತು. ತಪ್ಪಿತಸ್ಥರೆಲ್ಲರಿಗೂ ಸಮಾನ ಮತ್ತು ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಅದನ್ನು ನ್ಯಾಯಾಲಯ ಪುರಸ್ಕರಿಸಿದೆ.
ವಿಚಾರಣೆ ವೇಳೆ ಪಲ್ಸರ್ ಸುನಿಲ್ ತನ್ನ ವೃದ್ಧ ತಾಯಿಯ ಬಗ್ಗೆ ಹೇಳಿ ಕ್ಷಮೆ ಕೇಳಿದ್ದಾನೆ. 2ನೇ ಆರೋಪಿ ಮಾರ್ಟಿನ್ ಆಂಟನಿ ಮತ್ತು 6ನೇ ಆರೋಪಿ ಪ್ರದೀಪ್ ಕೂಡ ನ್ಯಾಯಾಲಯದಲ್ಲಿ ತಮ್ಮ ಕುಟುಂಬದ ಕಷ್ಟಗಳನ್ನು ಬಗ್ಗೆ ಹೇಳಿ ಕನಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ನ್ಯಾಯಾಧೀಶರು ಒಪ್ಪಲಿಲ್ಲ.
ಪಬ್ಲಿಕ್ ಪ್ರಾಸಿಕ್ಯೂಟರ್ ವಿ. ಅಜಯ್ ಕುಮಾರ್ ವಾದ ಮಂಡಿಸಿ, ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಲ್ಲಾ ಆರೋಪಿಗಳಿಗೂ ಒಂದೇ ರೀತಿಯ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದರು. ಈ ಶಿಕ್ಷೆಯು ಸಮಾಜಕ್ಕೆ ಬಲವಾದ ಸಂದೇಶವಾಗಬೇಕು ಎಂದಿದ್ದರು. ಅಜಯ್ ಕುಮಾರ್ ಶಿಕ್ಷೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಇದು ಕಾನೂನಿನಡಿಯಲ್ಲಿ ಅನುಮತಿಸಬಹುದಾದ ಕನಿಷ್ಠ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಪ್ರಕರಣದಲ್ಲಿ 12 ಆರೋಪಿಗಳಿದ್ದರು. ಅದರಲ್ಲಿ ಪ್ರತೀಶ್ ಚಾಕೊ ಮತ್ತು ರಾಜು ಜೋಸೆಫ್ ಅವರನ್ನು ಬಿಡುಗಡೆ ಮಾಡಲಾಯಿತು. ವಿಷ್ಣು ಎಂಬಾತ ಅಪ್ರೂವರ್ ಮಾಡಲಾಯಿತು. ಫೆಬ್ರವರಿ 17, 2017ರಂದು ಕೊಚ್ಚಿನ್ ನಗರದ ಹೊರವಲಯದಲ್ಲಿ ನಟಿಯನ್ನು ಅಪಹರಿಸಿ ಚಲಿಸುತ್ತಿದ್ದ ಆಕೆಗೆ ಲೈಂಗಿಕ ದೌರ್ಜನ್ಯ ನೀಡಲಾಗಿತ್ತು. ಆರೋಪಿಗಳು ಹಲ್ಲೆಯ ವೀಡಿಯೊಗಳನ್ನು ಸಹ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.


Click it and Unblock the Notifications











