ಅಲ್ಲು ಅರ್ಜುನ್, ರಜನಿಕಾಂತ್ ಅಭಿಮಾನಿಗಳನ್ನು ಕೆಣಕಿದ್ರಾ ಫಹಾದ್ ಫಾಸಿಲ್?
ಮಲಯಾಳಂ ನಟ ಫಹಾದ್ ಫಾಸಿಲ್ ಸೌತ್ ಸಿನಿದುನಿಯಾದಲ್ಲಿ ದೊಡ್ಡ ಹೆಸರು. ತಮ್ಮ ವೈವಿಧ್ಯಮಯ ಪಾತ್ರಗಳಿಂದ ಸಂಚಲನ ಸೃಷ್ಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. ತಮ್ಮ ನೇರಾನೇರ ಮಾತುಗಳಿಂದಲೂ ಕೆಲವೊಮ್ಮೆ ಸುದ್ದಿ ಆಗುತ್ತಾರೆ.
ಕಳೆದ ವರ್ಷ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಹಾಗೂ 'ಪುಷ್ಪ'-2 ಸಿನಿಮಾಗಳಲ್ಲಿ ಫಹಾದ್ ನಟಿಸಿದ್ದರು. ಎರಡೂ ಸಿನಿಮಾಗಳಲ್ಲಿ ಅವರ ಪಾತ್ರಗಳಿಗೆ ಬಹಳ ಸ್ಕೋಪ್ ಇತ್ತು. ಒಳ್ಳೆ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ನಾನು ಕಳೆದ ಒಂದು ವರ್ಷದಲ್ಲಿ ನಟಿಸಿದ ಸಿನಿಮಾಗಳ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಫಹಾದ್ ಹೇಳಿದ್ದಾರೆ. ಇದು ರಜನಿಕಾಂತ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಕೆಣಕುವಂತೆ ಮಾಡಿದೆ.

ಫಹಾದ್ ನಟನೆಯ 'ಮಾರೀಸನ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದ ಪ್ರಚಾರ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಅವರು ಭಾಗವಹಿಸಿದ್ದಾರೆ. 'ದಿ ಹಾಲಿವುಡ್ ರಿಪೋರ್ಟರ್' ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ "ಕಳೆದ ವರ್ಷ ಒಂದು ದೊಡ್ಡ ಸಿನಿಮಾದಲ್ಲಿ ನಾನು ಫೇಲ್ ಆಗಿದ್ದೆ. ಅದರ ಬಗ್ಗೆ ಮಾತನಾಡಬೇಕು ಎನಿಸುತ್ತಿಲ್ಲ. ಕೆಲವು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹಾಗಿರುವಾಗ ಅದನ್ನೆಲ್ಲಾ ಬಿಟ್ಟುಬಿಡಬೇಕು. ಪಾಠ ಕಲಿಯಬೇಕು" ಎಂದು ಹೇಳಿದ್ದಾರೆ.
'ವೆಟ್ಟೆಯಾನ್' ಚಿತ್ರದಲ್ಲಿ ರಜನಿಕಾಂತ್ ಜೊತೆ ಫಹಾದ್ ನಟಿಸಿದ್ದರು. ಇನ್ನು 'ಪುಷ್ಪ' ಸೀಕ್ವೆಲ್‌ನಲ್ಲಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಅಬ್ಬರಿಸಿದ್ದರು. ಯಾವ ಸಿನಿಮಾ ಬಗ್ಗೆ ಫಹಾದ್ ಈ ರೀತಿ ಹೇಳಿದ್ದಾರೆ? ಎಂದು ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. 'ಪುಷ್ಪ'-2 ಚಿತ್ರದಲ್ಲಿ ಭನ್ವರ್ ಸಿಂಗ್ ಪಾತ್ರ ಅಷ್ಟಾಗಿ ವರ್ಕ್ ಆಗಲಿಲ್ಲ. ಚಿತ್ರದ ಪ್ರಚಾರದಲ್ಲಿ ಕೂಡ ಭಾಗಿ ಆಗಿರಲಿಲ್ಲ. ಅದಕ್ಕೆ ಫಹಾದ್ ಹೀಗೆ ಹೇಳಿರಬಹುದು ಎನ್ನುವುದು ಕೆಲವರ ವಾದ. 'ವೆಟ್ಟೆಯಾನ್' ಕೂಡ ದೊಡ್ಡ ಸಿನಿಮಾ, ಅದರ ಬಗ್ಗೆ ಹೇಳಿರಬಹುದು ಎನ್ನುವ ಅಲ್ಲು ಅರ್ಜುನ್ ಅಭಿಮಾನಿಗಳ ವಾದ.
ಒಟ್ಟಾರೆ ಫಹಾದ್ ಹೇಳಿಕೆ ಅಲ್ಲು ಅರ್ಜುನ್ ಹಾಗೂ ರಜನಿಕಾಂತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಸದ್ದು ಮಾಡ್ತಿದೆ. ಸಿನಿಮಾ ಮುಗಿದ ಬಳಿಕ ಬಿಟ್ಟು ಬಿಡಬೇಕು. ಸೂಪರ್ ಹಿಟ್ ಆಗಿರುವ ಸಿನಿಮಾ ಬಗ್ಗೆ ಹೀಗೆ ಕೆದಕಿ ಮಾತನಾಡಬಾರದು ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ಬೇರೆ ನಟರ ಕಲಾವಿದರು ಟ್ರೋಲ್ ಮಾಡುತ್ತಿದ್ದಾರೆ.
ಕಳೆದ ವರ್ಷ ಡಿಸೆಂಬರ್ 5ರಂದು 'ಪುಷ್ಪ'-2 ಸಿನಿಮಾ ತೆರೆಗೆ ಬಂದಿತ್ತು. ಟಿಕೆಟ್ ದರ ಹೆಚ್ಚಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದರು. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಗೆದ್ದರು. ಸಿನಿಮಾ 1700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹೈದರಾಬಾದ್‌ನಲ್ಲಿ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಜೈಲಿಗೂ ಹೋಗುವಂತಾಯಿತು. ಹಾಗಾಗಿ ಚಿತ್ರತಂಡ ಸಂಭ್ರಮಾಚರಣೆ ಮಾಡಲು ಸಾಧ್ಯವಾಗಲಿಲ್ಲ.
'ಪುಷ್ಪ'-2 ಸಿನಿಮಾ ಚಿತ್ರೀಕರಣದ ವೇಳೆಯೇ ಫಹಾದ್ ಹಾಗೂ ಚಿತ್ರತಂಡದ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಎಲ್ಲವನ್ನು ಮೀರಿ ಸಿನಿಮಾ ತೆರೆಗೆ ಬಂದಿತ್ತು. ಪಾರ್ಟ್-3 ಮಾಡುವುದಾಗಿಯೂ ಚಿತ್ರತಂಡ ಘೋಷಿಸಿದೆ.


Click it and Unblock the Notifications











