ಜಾಲಿ ರೆಡ್ಡಿ ಬಳಿಕ ಭನ್ವರ್ ಸಿಂಗ್ ಶೇಖಾವತ್ ದರ್ಶನ: 'ಪುಷ್ಪ' ಸಿನಿಮಾದ ಫಹಾದ್ ಲುಕ್ ರಿವೀಲ್
ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ 'ಪುಷ್ಪ' ಸಿನಿಮಾ ಅಭಿಮಾನಿಗಳಿಗೆ ಮತ್ತೊಂದು ದೊಡ್ಡ ಸರ್ಪ್ರೈಸ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಇತ್ತೀಚಿಗಷ್ಟೆ ಜಾಲಿ ರೆಡ್ಡಿಯನ್ನು ಪರಿಚಯಿಸಿದ್ದ ಪುಷ್ಪ ಸಿನಿಮಾದಿಂದ ಚಿತ್ರತಂಡ ಮತ್ತೊಬ್ಬ ವಿಲನ್ ಪಾತ್ರವನ್ನು ರಿವೀಲ್ ಮಾಡುವ ಮೂಲಕ ಚಿತ್ರಾಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ. ಪುಷ್ಪ ಚಿತ್ರದಲ್ಲಿ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ಬಣ್ಣಹಚ್ಚಿದ್ದಾರೆ ಎನ್ನುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇದೀಗ ಫಹಾದ್ ಲುಕ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.
ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ನಟ ಫಹಾದ್ ಭಿನ್ನ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಫಹಾದ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಫಹಾದ್ ಮಲಯಾಳಂ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತೆಲುಗು ಸಿನಿಮಾ ಫಹಾದ್ ಲುಕ್ ಸಖತ್ ಇಂಟ್ರಸ್ಟಿಂಗ್ ಆಗಿದ್ದಾರೆ.
ಚಿತ್ರದಲ್ಲಿ ಫಹಾದ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಹಾದ್ ವಿಲನ್ ಪೊಲೀಸ್ ಆಗಿದ್ದು, ಭನ್ವರ್ ಸಿಂಗ್ ಶೇಖಾವತ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಳು ತಲೆ, ಗಂಭೀರ ನೋಟ ಬೀರುತ್ತಾ ಪೊಲೀಸ್ ಸ್ಟೇಷನ್ ನಲ್ಲಿ ನಿಂತಿರುವ ಫೋಟೋವನ್ನು ಪುಷ್ಪ ತಂಡ ಬಿಡುಗಡೆ ಮಾಡಿದೆ. ಈ ಲುಕ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಫಹಾದ್ ಫಾಸಿಲ್ ತೆಲುಗು ಜೊತೆಗೆ ಇತ್ತೀಚಿಗಷ್ಟೆ ತಮಿಳು ಸಿನಿಮಾರಂಗಕ್ಕೂ ಎಂಟ್ಕಿ ರೊಟ್ಟಿದ್ದಾರೆ. ಖ್ಯಾತ ನಟ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾದಲ್ಲಿ ಫಹಾದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಫಹಾದ್ ಜೊತೆಗೆ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಅಂದಹಾಗೆ ಪುಷ್ಪ ಸಿನಿಮಾದಲ್ಲಿ ಕನ್ನಡ ನಟ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ಹುಟ್ಟುಹಬ್ಬದ ದಿನ ಧನಂಜಯ್ ಲುಕ್ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಅಂದಹಾಗೆ ಧನಂಜಯ್ ತೆಲುಗಿನಲ್ಲಿ ಜಾಲಿ ರೆಡ್ಡಿಯಾಗಿ ಮಿಂಚುತ್ತಿದ್ದಾರೆ. ಕ್ರೂರ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ಜಾಲಿ ರೆಡ್ಡಿ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. ಅಂದಹಾಗೆ ಧನಂಜಯ್ ಅವರಿಗೆ ಇದು ತೆಲುಗಿನ ಎರಡನೇ ಸಿನಿಮಾವಾಗಿದೆ.
ಇನ್ನು ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾರಿ ಡ್ರೈವರ್ ಆಗಿ ಮಿಂಚಿರುವ ಅಲ್ಲು ಅರ್ಜುನ್ ಡಿ ಗ್ಲಾಮ್ ಲುಕ್ ಭಾರಿ ವೈರಲ್ ಆಗಿತ್ತು. ಈಗಾಗಲೇ ಚಿತ್ರದಿಂದ ಟೀಸರ್, ಹಾಡು ಮತ್ತು ಪೋಸ್ಟರ್ ಬಿಡುಗಡೆಯಾಗಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಹಾಡು ಐದು ಭಾಷೆಯಲ್ಲಿ ಬಂದಿದ್ದು, ಬೇರೆ ಬೇರೆ ಭಾಷೆಯಲ್ಲಿ ಖ್ಯಾತ ಗಾಯಕರು ಧ್ವನಿ ನೀಡಿದ್ದಾರೆ.
ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಪುಷ್ಪ ಸಿನಿಮಾ ಪಾರ್ಟ್-1 ಮತ್ತು ಪಾರ್ಟ್-2 ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಸಿನಿಮಾತಂಡ ಅಂದುಕೊಂಡ ಪ್ರಕಾರ ಪುಷ್ಪ ಡಿಸೆಂಬರ್ ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಕ್ರಿಸ್ಮಸ್ ಗೆ ಪುಷ್ಪ ದರ್ಶನ ಆಗಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇನ್ನು ಕೆಲವು ಮೂಲಗಳ ಪ್ರಕಾರ ಪುಷ್ಪ ವರ್ಷ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ತೆರೆಗೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಇನ್ನು ಅಧಿಕೃತಗೊಳಿಸಿಲ್ಲ.


Click it and Unblock the Notifications











