ಕೇವಲ ಸಿನಿಮಾ ನೋಡುವುದೇ ಜೀವನ ಅಲ್ಲ ಅದರಾಚೆಯೂ ಬದುಕಿದೆ ;ಫಹಾದ್ ಫಾಸಿಲ್...!
ಸಿನಿಮಾ ಅಂದರೆ ಕಥೆಯಲ್ಲ... ಕಥೆಯಂತೆ ಇರುವ ಬದುಕಿನ ಪಾಠ. ಈ ಕಾರಣಕ್ಕಾಗಿಯೇ ಚಿತ್ರವೊಂದನ್ನ ಕಣ್ತುಂಬಿಕೊಂಡು, ಚಿತ್ರಮಂದಿರದಿಂದ ಆಚೆ ಬಂದ ನಂತರವೂ ಕೂಡ ಅನೇಕರು ಚಿತ್ರದ ಬಗ್ಗೆ ಮಾತನಾಡುತ್ತಾರೆ. ತಮ್ಮ ಮನೆಯ ಅಂಗಳದಿಂದ ಹಿಡಿದು, ತಾವು ಮಲಗುವ ಕೋಣೆಯವರೆಗೆ ತಮ್ಮಿಷ್ಟದ ಚಿತ್ರ ಮತ್ತು ಪಾತ್ರವನ್ನ ಕೊಂಡೊಯ್ಯುತ್ತಾರೆ. ಕಚೇರಿಯಲ್ಲಿ ಅಥವಾ ತಾವು ಮಾಡುವ ಕೆಲಸದ ಸ್ಥಳದಲ್ಲಿಯೂ ಕೂಡ ಸಿನಿಮಾ..ಸಿನಿಮಾ..ಸಿನಿಮಾ.. ಹೀಗೆ ಕೇವಲ ಸಿನಿಮಾದ ಬಗ್ಗೆಯೇ ಚರ್ಚೆ ಮಾಡುತ್ತಾರೆ. ಆ ಸಿನಿಮಾದಿಂದ ಏನಾದರೂ ಪಾಠ ಕಲಿತಿದ್ದರೆ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡ್ತಾರೆ.
ಇನ್ನೂ ಅಭಿಮಾನ ಚಿಗುರೊಡೆಯುವುದು ಇದೇ ಸಿನಿಮಾದ ಸಹವಾಸದಿಂದಲೇ. ಆದರೆ ಈ ಸಹವಾಸ ಒಳ್ಳೇಯದಲ್ಲ.. ಸಿನಿಮಾನೇ ಬದುಕಲ್ಲ.. ಎಂಬ ಹೊಸ ಪಾಠವನ್ನ ಮಲಯಾಳಂನ ಸೂಪರ್ ಸ್ಟಾರ್ ಫಹಾದ್ ಫಾಸಿಲ್ ಹೇಳಿದ್ದಾರೆ. ಒಂದು ಚಿತ್ರವನ್ನ ಆ ಕ್ಷಣಕ್ಕೆ ನೋಡಿ, ಖುಷಿ ಪಡಿ.. ಆ ನಂತರ ಮರೆತು ಬಿಡಿ ಎಂದಿದ್ದಾರೆ.

ಹೌದು, ಆವೇಶಂ ಚಿತ್ರದ ಗೆಲುವಿನ ಅಲೆಯಲ್ಲಿರುವ ಫಹಾದ್ ಫಾಸಿಲ್, ಗಲಾಟಾ ಪ್ಲಸ್ ಯುಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಬದುಕಿನ ಕಥೆ-ವ್ಯಥೆಯ ಬಗ್ಗೆ ಮಾತನಾಡಿರುವ ಫಹಾದ್, ಇದೇ ಸಮಯದಲ್ಲಿ.. ಕೇವಲ ಸಿನಿಮಾ ನೋಡುವುದಷ್ಟೇ ಜೀವನ ಅಲ್ಲ, ಸಿನಿಮಾದಾಚೆಯೂ ಬದುಕಿದೆ ಅಂದಿದ್ದಾರೆ.
ನನ್ನ ಚಿತ್ರಗಳನ್ನ ಚಿತ್ರಮಂದಿರದಲ್ಲಿ ಕುಳಿತು ನೀವು ನೋಡುವಾಗ ಮಾತ್ರ ನನ್ನ ಬಗ್ಗೆ ಯೋಚಿಸಿ, ನನ್ನನ್ನೂ ಗಂಭೀರವಾಗಿ ಪರಿಗಣಿಸಿ, ಅದಕ್ಕೂ ಮೀರಿ ಚಿತ್ರ ಅಥವಾ ಪಾತ್ರ ಇಷ್ಟವಾದರೆ ಮನೆಗೆ ತೆರಳುವ ಸಮಯದಲ್ಲಿ ಚರ್ಚೆ ಮಾಡಿ ಎಂದಿರುವ ಫಹಾದ್, ಯಾವುದೇ ಕಾರಣಕ್ಕೂ ಚಿತ್ರ ಮತ್ತು ಪಾತ್ರದ ಕುರಿತು ಚರ್ಚೆಯನ್ನ ಊಟ ಮಾಡುವ ಸಮಯದಲ್ಲಿ ಮಾಡಬೇಡಿ, ಮನೆಯಲ್ಲಿ ಆ ಕುರಿತು ಮಾತಾಡಲೇಬೇಡಿ ಎಂದಿದ್ದಾರೆ. ನಾನು ಅದನ್ನ ಬಯಸುವುದು ಇಲ್ಲವೆಂದಿದ್ದಾರೆ ಫಹಾದ್ ಫಾಸಿಲ್.

ಇನ್ನೂ ಸಿನಿಮಾ ಬಿಟ್ಟು ಪ್ರೇಕ್ಷಕರು.. ನನ್ನ ಬಗ್ಗೆ ಯೋಚಿಸುವುದು ಅಥವಾ ನನ್ನ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಚಿಂತಿಸಲಿ ಎಂದು ಕೂಡ ನಾನು ಬಯಸುವುದಿಲ್ಲ ಎಂದಿರುವ ಫಹಾದ್, ಎಲ್ಲದಕ್ಕೂ ಮೀತಿ ಇರುತ್ತೆ, ಸಿನಿಮಾ ನೋಡುವುದರ ಜೊತೆ ಬದುಕಿನಲ್ಲಿ ಸಾಧಿಸುವುದು ಬೇಕಾದಷ್ಟಿರುತ್ತೆ, ಜವಾಬ್ದಾರಿ ಇರುತ್ತೆ ಆ ಕಡೆಯೂ ಗಮನ ವಹಿಸಿ ಎಂದು ಮನವಿಯನ್ನೂ ಫಹಾದ್ ಫಾಸಿಲ್ ಮಾಡಿಕೊಂಡಿದ್ದಾರೆ.
ಫಹಾದ್ ಫಾಸಿಲ್ ಅವರ ಈ ಮಾತು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನ ಹುಟ್ಟು ಹಾಕಿದೆ. ಕೆಲವರಿಗೆ ಫಹಾದ್ ಅವರ ಈ ಅಂತರಂಗದ ನುಡಿ ಇಷ್ಟವಾಗಿದ್ದರೆ,ಇನ್ನೂ ಕೆಲವರು ಫಹಾದ್ ಮಾತು ಕೇಳಿ ಸಿಡಿಮಿಡಿಗೊಂಡಿದ್ದಾರೆ. ಪುಷ್ಪ-02 ನೋಡುವುದಾ..ಬಿಡುವುದಾ.. ಎಂಬ ಗೊಂದಲ ಕೂಡ ಇದೇ ವೇಳೆ ಅನೇಕರಿಗೆ ಕಾಡುತ್ತಿದೆ.

ಒಟ್ನಲ್ಲಿ ಒಂದಾದ ಮೇಲೊಂದು ಭಿನ್ನ ಚಿತ್ರ ಮತ್ತು ಪಾತ್ರಗಳಿಂದ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಭಾರತದೆಲ್ಲೆಡೆ ಮನೆ ಮಾತಾದ ಫಹಾದ್, ಈಗ ತಮ್ಮ ಮಾತುಗಳಿಂದ ಸುದ್ದಿಯಲ್ಲಿದ್ದಾರೆ. ಅರ್ಥೈಸಿಕೊಳ್ಳುವುದು ನಿಮಗೆ ಬಿಟ್ಟಿದ್ದು


Click it and Unblock the Notifications











