ನಿಂತು ಹೋಗಿದ್ದ ಮೋಹನ್ ಲಾಲ್ 1000 ಕೋಟಿ ರೂಪಾಯಿ ಬಜೆಟ್ ಸಿನಿಮಾ ರಿಷಬ್ ಶೆಟ್ಟಿ ತೆಕ್ಕೆಗೆ?
'ಕಾಂತಾರ- 1' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಸೈಲೆಂಟ್ ಆಗಿದ್ದಾರೆ. ಎರಡ್ಮೂರು ವರ್ಷ ಆ ಚಿತ್ರದಲ್ಲಿ ಮುಳುಗಿದ್ದ ಡಿವೈನ್ ಸ್ಟಾರ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದೆ ತೆಲುಗಿನ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಆದರೆ ಈವರೆಗೆ ಆ ಬಗ್ಗೆ ಅಪ್‌ಡೇಟ್ ಸಿಕ್ಕಿಲ್ಲ. ಶಿವಾಜಿ ಬಯೋಪಿಕ್ ಸಿನಿಮಾ ಕೂಡ ಘೋಷಣೆ ಆಗಿದೆ.
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ದೊಡ್ಡದೊಡ್ಡ ಕನಸುಗಳನ್ನು ಕಾಣುವವರ ಜೊತೆ ಕೈ ಜೋಡಿಸಬೇಕಿದೆ. ಅಥವಾ ದೊಡ್ಡ ಕನಸುಗಳನ್ನು ಕಾಣಬೇಕಿದೆ. ಸದ್ಯಕ್ಕೆ ರಿಷಬ್ ಯಾವುದೇ ಸಿನಿಮಾ ನಿರ್ದೇಶನ ಮಾಡುವುದು ಅನುಮಾನ ಎನ್ನುವಂತಾಗಿದೆ. ಹೀರೊ ಆಗಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಲು ಮನಸ್ಸು ಮಾಡಿದಂತಿದೆ. ಇದೆಲ್ಲದರ ನಡುವೆ 1000 ಕೋಟಿ ರೂ. ಬಜೆಟ್ ಚಿತ್ರಕ್ಕೆ ಡಿವೈನ್ ಸ್ಟಾರ್ ಹೆಸರು ಕೇಳಿಬರ್ತಿದೆ.

ಶುರುವಾದ ಸಿನಿಮಾಗಳು ನಿಂತು ಹೋಗುವುದು ಚಿತ್ರರಂಗದಲ್ಲಿ ಹೊಸದೇನು ಅಲ್ಲ. ಒಬ್ಬರು ಕೈಬಿಟ್ಟ ಚಿತ್ರವನ್ನು ಮತ್ತೊಬ್ಬರು ಕೈಗೆತ್ತಿಕೊಂಡಿರುವ ಉದಾಹರಣೆಗಳಿವೆ. ಅದೇ ರೀತಿ ಮೋಹನ್ ಲಾಲ್ ಹೀರೊ ಆಗಿ ಘೋಷಣೆಯಾಗಿದ್ದ ಭಾರೀ ಬಜೆಟ್ ಸಿನಿಮಾವೊಂದು ಕಾರಣಾಂತರಗಳಿಂದ ನಿಂತು ಹೋಗಿತ್ತು. ಆ ಚಿತ್ರವನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸ್ವತಃ ರಿಷಬ್ ಶೆಟ್ಟಿ ಚಿತ್ರ ನಿರ್ದೇಶಿಸಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.
ಮಲಯಾಳಂನಲ್ಲಿ 'ರಂಡಮೂಳಂ' ಎಂಬ ಕಾದಂಬರಿ ಬಹಳ ಜನಪ್ರಿಯ. ಭೀಮನ ದೃಷ್ಟಿಕೋನದಲ್ಲಿ ಮಹಾಭಾರತ ಕಾವ್ಯವನ್ನು ಎಂ. ಟಿ. ವಾಸುದೇವನ್ ನಾಯರ್ ಕಾದಂಬರಿಯಾಗಿ ರಚಿಸಿದ್ದರು. 40 ವರ್ಷಗಳ ಹಿಂದೆ ಪ್ರಕಟವಾಗಿದ್ದ ಕಾದಂಬರಿ ದಾಖಲೆ ಬರೆದಿತ್ತು. ದಶಕಗಳಿಂದ ಈ ಕಾದಂಬರಿಯನ್ನು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಆದರೆ ಬಜೆಟ್ ಕಾರಣಕ್ಕೆ ಸಾಧ್ಯವಾಗುತ್ತಿರಲಿಲ್ಲ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಇಂತಾದೊಂದು ಕನಸಿಗೆ ಜೀವ ಬಂದಿತ್ತು. 'ಬಾಹುಬಲಿ' ಸರಣಿ ಸಿನಿಮಾಗಳ ಗೆಲುವು ಮತ್ತಷ್ಟು ಧೈರ್ಯ ತುಂಬಿತ್ತು.

ದುಬೈ ಮೂಲದ ಉದ್ಯಮಿ ಬಿಆರ್ ಶೆಟ್ಟಿ 'ರಂಡಮೂಳಂ' ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. 8 ವರ್ಷಗಳ ಹಿಂದೆ ಸಿನಿಮಾ ಘೋಷಣೆ ಆಗಿತ್ತು. ನಿರ್ದೇಶಕ ಶ್ರೀಕುಮಾರ್ ಚಿತ್ರಕ್ಕೆ ಚಿತ್ರಕಥೆ ಸಿದ್ಧಪಡಿಸಿದ್ದರು. ಆದರೆ ಬರಹಗಾರ ವಾಸುದೇವ್ ನಾಯರ್ ಜೊತೆಗೆ ನಿರ್ದೇಶಕರ ಭಿನ್ನಾಭಿಪ್ರಾಯಗಳಿಂದ ಸಿನಿಮಾ ನಿಂತು ಹೋಗಿತ್ತು. ಈ ವಿಚಾರವನ್ನು ಸ್ವತಃ ಬಿಆರ್ ಶೆಟ್ಟಿ ಸ್ಪಷ್ಟಪಡಿಸಿದ್ದರು. ತಡವಾದರೂ ಪರವಾಗಿಲ್ಲ ಮುಂದಿನ ದಿನಗಳಲ್ಲಿ ಈ ಸಿನಿಮಾ ನಿರ್ಮಿಸುತ್ತೇನೆ ಎಂದಿದ್ದರು.
2018ರಲ್ಲಿ ಚಿತ್ರೀಕರಣ ಆರಂಭಿಸಿ ಎರಡು ಭಾಗಗಳಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೆದಿತ್ತು. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಬೇಕು ಎಂದುಕೊಂಡಿದ್ದರು. ಭೀಮನ ಪಾತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಾರೆ ಎನ್ನುವ ಚರ್ಚೆ ಕೂಡ ಆಗಿತ್ತು. ನಟ ಅಂಬರೀಷ್ ಅವರಿಗೂ ಉಡುಪಿ ಮೂಲದ ಬಿಆರ್ ಶೆಟ್ಟಿ ಸ್ನೇಹಿತರಾಗಿದ್ದರು. 2020ರಲ್ಲಿ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲಿಗೆ 'ರಂಡಮೂಳಂ' ಸಿನಿಮಾ ಕನಸು ಕಮರಿ ಹೋಗಿತ್ತು.
'ರಂಡಮೂಳಂ' ಸಿನಿಮಾ ಶೀಘ್ರದಲ್ಲೇ ನಿರ್ಮಾಣವಾಗುತ್ತದೆ ಎಂದು ಎಂ. ಟಿ. ವಾಸುದೇವನ್ ನಾಯರ್ ಪುತ್ರಿ ಅಶ್ವತ್ತಿ ನಾಯರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಅಂತಿಮ ಹಂತ ತಲುಪಿದೆ. ಟೈಟಲ್ ರಿಜಿಸ್ಟರ್ ಕೆಲಸಗಳು ನಡೀತಿದೆ. ಶೀಘ್ರದಲ್ಲೇ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಸಿನಿಮಾ ಘೋಷಿಸುತ್ತದೆ ಎಂದು ಹೇಳಿದ್ದಾರೆ. ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಪ್ರಶ್ನೆಗೆ ಹೌದು, ಇಲ್ಲ ಎಂದು ಹೇಳದೇ ಶೀಘ್ರದಲ್ಲೇ ಎಲ್ಲಾ ಗೊತ್ತಾಗುತ್ತದೆ ಎಂದಿದ್ದಾರೆ.


Click it and Unblock the Notifications











