ಗೀತೂ ಮೊದಲ ಚಿತ್ರವೇ ಆಸ್ಕರ್ ರೇಸಿಗೆ ಆಯ್ಕೆ
ಸಿನಿ ಜಗತ್ತಿನ ಮಂದಿಗೆ ರೋಮಾಂಚನ ಹುಟ್ಟಿಸಬಲ್ಲ ಆಸ್ಕರ್ ಪ್ರಶಸ್ತಿಗೆ ಈ ಬಾರಿ ಭಾರತದಿಂದ 'ಲಯರ್ಸ್ ಡೈಸ್' ಹೆಸರಿನ ಹಿಂದಿ ಚಿತ್ರ ಸ್ಪರ್ಧಿಸುತ್ತಿದೆ. ಮಲೆಯಾಳಂನಲ್ಲಿ ನಟಿಯಾಗಿ ಜನಪ್ರಿಯತೆ ಗಳಿಸಿದ್ದ ಗೀತೂ ಮೋಹನ್ ದಾಸ್ ಅವರು ಪ್ರಪ್ರಥಮ ಬಾರಿಗೆ ನಿರ್ದೇಶಿಸಿದ ಚಿತ್ರವೇ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
30ಕ್ಕೂ ಅಧಿಕ ಚಿತ್ರಗಳನ್ನು ನೋಡಿ ಅಳೆದು ತೂಗಿದ ಫಿಲಂ ಫೆಡರೇಷನ್ ಆಫ್ ಇಂಡಿಯಾದ 12 ಜನರಿದ್ದ ಜ್ಯೂರಿ ಸದಸ್ಯರು ಗೀತೂ ಮೋಹನ್ ದಾಸ್ ಅವರ ನಿರ್ದೇಶನದ ಲಯರ್ಸ್ ಡೈಸ್ ಚಿತ್ರವನ್ನು ಆಯ್ಕೆ ಮಾಡಿದ್ದಾರೆ ಎಂದು ಎಫ್ಎಫ್ಐನ ಪ್ರಧಾನ ಕಾರ್ಯದರ್ಶಿ ಸುಪ್ರಾಣ್ ಸೇನ್ ಪ್ರಕಟಿಸಿದ್ದಾರೆ.

ಎರಡು ರಾಷ್ಟ್ರಪ್ರಶಸ್ತಿ ಗಳಿಸಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ಗೀತಾಂಜಲಿ ಥಾಪಾ ಮುಖ್ಯಭೂಮಿಕೆಯಲ್ಲಿದ್ದಾರೆ. ಹಿಮಾಚಲ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗಳೊಂದಿಗೆ ಕಳೆದು ಹೋದ ಪತಿಗಾಗಿ ಹುಡುಕಾಟ ನಡೆಸುತ್ತಾಳೆ. ಈ ಸಂದರ್ಭದಲ್ಲಿ ಆರ್ಮಿ ಮ್ಯಾನ್ ನವಾಜುದ್ದೀನ್ ಸಿದ್ದಿಕಿ ನೆರವಿಗೆ ಬರುತ್ತಾನೆ. [ಆಸ್ಕರ್ ಚಿತ್ರ ಗ್ರಂಥಾಲಯಕ್ಕೆ ಪ್ರಭುದೇವ ಚಿತ್ರ]
61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಲಯರ್ಸ್ ಡೈಸ್ ಚಿತ್ರ ಎರಡು ಪದಕ ಪಡೆದಿದ್ದು, ಶ್ರೇಷ್ಠ ನಟಿಯಾಗಿ ಗೀತಾಂಜಲಿ ಥಾಪಾ ಹಾಗೂ ಛಾಯಾಗ್ರಾಹಕರಾಗಿ ರಾಜೀವ್ ರವಿ(ಗೀತೂ ಅವರ ಪತಿ) ಪ್ರಶಸ್ತಿ ಗಳಿಸಿದ್ದರು. ಈಗ 87ನೇ ಅಕಾಡೆಮಿ ಪ್ರಶಸ್ತಿಗಾಗಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಲಯರ್ಸ್ ಡೈಸ್ ಸ್ಪರ್ಧಿಸುತ್ತಿದೆ.

ಗಾಯತ್ರಿ ಮೋಹನ್ ದಾಸ್ ಅಲಿಯಾಸ್ ಗೀತೂ ಬಾಲನಟಿ ಹಾಗೂ ನಟಿಯಾಗಿ ಕೇರಳ ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ. ಕೆಳ್ಕುನ್ನಂಡೊ ಎಂಬ ಮಲೆಯಾಳಂ ಕಿರುಚಿತ್ರ ನಿರ್ದೇಶಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಹೆಸರು ಗಳಿಸಿದ ಗೀತೂ ನಿರ್ದೇಶಿಸಿದ ಪ್ರಥಮ ಹಿಂದಿ ಚಿತ್ರ ಲಯರ್ಸ್ ಡೈಸ್ ಚಿತ್ರ ಎರಡು ರಾಷ್ಟ್ರಪ್ರಶಸ್ತಿ, 18ನೇ ಸೋಫಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ(ವಿಶೇಷ ಜ್ಯೂರಿ) ಗಳಿಸಿದೆ. ನಟಿಯಾಗಿ ಗೀತೂ ಮೂರು ತಮಿಳು ಚಿತ್ರಗಳು ಸೇರಿ 40ಕ್ಕೂ ಅಧಿಕ ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಲಯರ್ಸ್ ಡೈಸ್ ಚಿತ್ರದ ಟ್ರೇಲರ್ ನೋಡಿ


Click it and Unblock the Notifications











