ಯುವ ರೈತನ ನೋವಿಗೆ ನೆರವಾಗಲು ಸಿನಿಮಾ ಕಾರ್ಯಕ್ರಮಕ್ಕೆ ಇಟ್ಟಿದ ಹಣ ನೀಡಿದ ಘೋಸ್ಟ್ ನಟ ಜಯರಾಮ್
ಕೇರಳದ ಯುವ ಹೈನುಗಾರನೊಬ್ಬ ತಾನು ಸಾಕಿದ ಹಸುಗಳನ್ನು ಕಳೆದುಕೊಂಡು ನೋವು ತೋಡಿಕೊಂಡ ಬಳಿಕ ಆತನಿಗೆ ಹಣಕಾಸಿನ ನೆರವು ಹರಿದು ಬರುತ್ತಿದೆ. ಒಂದೇ ಬಾರಿ 20 ಹಸುಗಳಲ್ಲಿ 13 ಹಸುಗಳು ಶಂಕಿತ ವಿಷಪ್ರಾಶನದಿಂದ ಸಾವನ್ನಪ್ಪಿವೆ ಎಂದು ಆರೋಪಿಸಲಾಗಿದೆ. ಈ ಘಟನೆ ಕೇರಳದ ಪರ್ವತ ಜಿಲ್ಲೆ ಇಡುಕ್ಕಿಯಲ್ಲಿ ನಡೆದಿದೆ.
ಘಟನೆ ನಡೆದು ಎರಡು ದಿನಗಳ ನಂತರ ಯುವ ರೈತನ ನೆರವಿಗೆ ಹಲವು ಮಂದಿ ಮುಂದೆ ಬಂದಿದ್ದಾರೆ. ಸಚಿವರು, ಸಾಮಾನ್ಯ ಜನರು ಮತ್ತು ಸೆಲಬ್ರಿಟಿಗಳು ಆತನಿಗೆ ಹಣಕಾಸಿನ ಸಹಾಯ ಮಾಡಿದ್ದಾರೆ. ಇದರಲ್ಲಿ ಇತ್ತೀಚೆಗೆ ಶಿವರಾಜ್‌ಕುಮಾರ್ ನಟನೆಯ ಘೋಸ್ಟ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ನಟ ಜಯರಾಮ್ ಕೂಡ ಸೇರಿದ್ದಾರೆ.

ಯುವ ರೈತನಿಗೆ ಹೆಗಲಾದ ನಟ ಜಯರಾಮ್
ಕೇರಳ ರಾಜ್ಯ ಸಚಿವರಾದ ಜೆ ಚಿಂಚು ರಾಣಿ ಮತ್ತು ರೋಶಿ ಅಗಸ್ಟಿನ್, ಹಸುಗಳನ್ನು ಕಳೆದುಕೊಂಡ ವೆಲ್ಲಿಯಮಟ್ಟಂ ಗ್ರಾಮದ 15 ವರ್ಷದ ಯುವ ರೈತ ಮ್ಯಾಥ್ಯೂ ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದಿಂದ ಬೆಂಬಲ ಮತ್ತು ನೆರವು ನೀಡಿದರು. ಕೇರಳದ ಸಚಿವರಲ್ಲದೆ, ನಟ ಜಯರಾಮ್ ಕೂಡ ಕೇರಳದ ರೈತನಿಗೆ ಸಹಾಯ ಹಸ್ತ ಚಾಚಿದ್ದಾರೆ.
ಜಯರಾಮ್ ಅವರು ಚಲನಚಿತ್ರ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಿದ ಹಣವನ್ನು ದೇಣಿಗೆ ನೀಡಿದ್ದಾರೆ. ಪ್ರಾಣಿಗಳ ಬಗ್ಗೆ ಹೆಚ್ಚು ಪ್ರೀತಿ ಹೊಂದಿರುವ ನಟ ಜಯರಾಮ್ ಬಾಲಕನ ಮನೆಗೆ ಭೇಟಿ ನೀಡಿ ಹೊಸ ಹಸುಗಳನ್ನು ಖರೀದಿಸಲು ಮತ್ತು ಅವನ ತೋಟವನ್ನು ಮತ್ತೆ ಕಟ್ಟಿಕೊಳ್ಳಲು ಸಹಾಯವಾಗಲು 5 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾರೆ.
ಜಯರಾಮ್ ಅವರ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ರದ್ದು!
ನಟ ಜಯರಾಮ್ ನಟಿಸಿರುವ ಮಲಯಾಳಂ ಚಲನಚಿತ್ರ 'ಅಬ್ರಹಾಂ ಓಜ್ಲರ್'ನ ಚಿತ್ರತಂಡವು ಜನವರಿ 4 ರಂದು ನಿಗದಿತ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿತ್ತು. ಆದರೆ, ಈಗ ಕಾರ್ಯಕ್ರಮ ರದ್ದುಗೊಳಿಸಲು ನಿರ್ಧರಿಸಿದೆ. ಅದೇ ಹಣವನ್ನು ಬದಲಿಗೆ ಮ್ಯಾಥ್ಯೂ ಅವರ ಕುಟುಂಬಕ್ಕೆ 5 ಲಕ್ಷ ದೇಣಿಗೆ ನೀಡಲು ನಿರ್ಧರಿಸಿದೆ ಎಂದು ಜಯರಾಮ್ ಹೇಳಿದರು.

ಹೆಚ್ಚುವರಿಯಾಗಿ, ನಟರಾದ ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಸಹ ಕ್ರಮವಾಗಿ 1 ಲಕ್ಷ ಮತ್ತು 2 ಲಕ್ಷ ಆರ್ಥಿಕ ಸಹಾಯವನ್ನು ನೀಡಲಿದ್ದಾರೆ ಎಂದು ಜಯರಾಮ್ ರೈತ ಮ್ಯಾಥ್ಯೂಗೆ ತಿಳಿಸಿದ್ದಾರೆ. ಬಾಲಕ ಮ್ಯಾಥ್ಯೂ ತಂದೆಯ ಅಕಾಲಿಕ ಮರಣದ ನಂತರ 13 ನೇ ವಯಸ್ಸಿನಲ್ಲಿ ಎರಡು ವರ್ಷಗಳ ಹಿಂದೆ ಕೃಷಿ ಮಾಡಲು ಆರಂಭಿಸಿದ್ದರು.
ಇದಕ್ಕೂ ಮುನ್ನ ಮಾತನಾಡಿದ ಪಶುಸಂಗೋಪನಾ ಸಚಿವೆ ಚಿಂಚು ರಾಣಿ, ವಿಮೆ ಮಾಡಿಸಿದ ಐದು ಹಸುಗಳನ್ನು ಯುವ ರೈತನಿಗೆ ಶೀಘ್ರ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುವುದು. ಯುವ ರೈತ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ ನಂತರ ಅವರು ಒಂದು ತಿಂಗಳ ಕಾಲ ಜಾನುವಾರುಗಳ ಮೇವನ್ನು ಕೂಡ ಅವರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
"ಇದಲ್ಲದೆ, ಸಂಕಷ್ಟದಲ್ಲಿರುವ ರೈತರಿಗೆ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ದಿಂದ 45,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಎಲ್ಲಾ ಐದು ಹಸುಗಳು ಉತ್ತಮ ತಳಿಯಾಗಿರುತ್ತವೆ. ವಿಮೆ ಮಾಡಿದ ನಂತರ ಅವುಗಳನ್ನು ನೀಡಲಾಗುವುದು. ಜಾನುವಾರುಗಳಿಗೆ ಯಾವುದೇ ಹಾನಿ ಸಂಭವಿಸಿದಲ್ಲಿ, ಅವರು ಸಂಪೂರ್ಣ ಹಣವನ್ನು ಮರಳಿ ಪಡೆಯುತ್ತಾರೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.


Click it and Unblock the Notifications











