ಮಲಯಾಳಂ ಚಿತ್ರರಂಗದ 'ಕಾಮಕಾಂಡ' ಬಯಲು, 'ಹೇಮಾ ಆಯೋಗ'ದ ವರದಿಗೆ ಅಲ್ಲೋಲ ಕಲ್ಲೋಲ...!
ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಇಂದು ಬಿಡುಗಡೆಯಾದ ಹೇಮಾ ಆಯೋಗದ ವರದಿ ಮಲಯಾಳಂ ಚಿತ್ರರಂಗವನ್ನು ಬೆಚ್ಚಿ ಬೀಳಿಸುವುದರ ಜೊತೆ ದೇವರ ನಾಡಿನಲ್ಲಿರುವ ಕಾಮಾಂಧರ ಅಸಲಿ ಬಣ್ಣವನ್ನೂ ಬಯಲು ಮಾಡಿದೆ.
ಹೌದು, ನಿಮಗೆ ನೆನಪಿದ್ದರೆ, ಕೆಲ ವರ್ಷದ ಹಿಂದೆ ಮಲಯಾಳಂ ಸೇರಿ ಬೇರೆ ಬೇರೆ ಭಾಷೆಯಲ್ಲಿ ಹೆಸರು ಮಾಡಿರುವ ನಾಯಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಪ್ರಕರಣದ ನಂತರ ಮಾಲಿವುಡ್‌ನಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಈ ಆಯೋಗ ಐದು ವರ್ಷಗಳ ಸುಧೀರ್ಘ ಅವಧಿಯ ನಂತರ,233 ಪುಟಗಳನ್ನು ಒಳಗೊಂಡ ವರದಿಯ ಸಂಕ್ಷಿಪ್ತ ಆವೃತ್ತಿಯನ್ನು ಇಂದು ಬಿಡುಗಡೆ ಮಾಡಿದೆ. ಮಲಯಾಳಂ ಚಿತ್ರರಂಗದ ಕರಾಳತೆಯನ್ನು ಬಯಲಿಗೆಳೆದಿದೆ.

ಪಾತ್ರಕ್ಕಾಗಿ ಪಲ್ಲಂಗ ಹತ್ತುವಂತೆ ನಾಯಕಿಯರನ್ನು ಪೀಡಿಸುವ ಬಹುದೊಡ್ಡ ವರ್ಗ ಮಲಯಾಳಂ ಚಿತ್ರರಂಗದಲ್ಲಿದೆ ಎನ್ನುವ ಆಘಾತಕಾರಿ ವಿಚಾರವನ್ನು ಹೊರಗೆಡವಿರುವ ಈ ವರದಿಯಲ್ಲಿ ಅನೇಕ ನಾಯಕಿಯರು ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇನ್ನೂ ಮಲಯಾಳಂ ಚಿತ್ರರಂಗ ಕಾಮುಕರಿಂದ ತುಂಬಿ ತುಳುಕುತ್ತಿದೆ ಎಂದು ಈ ವರದಿಯಲ್ಲಿ ಹೇಳಿರುವ ಆಯೋಗ, ಕನಸೊತ್ತು ಚಿತ್ರರಂಗಕ್ಕೆ ಬರುವ ಯುವತಿಯರ ಬಳಿ ಚಿತ್ರ ಮತ್ತು ಪಾತ್ರ ಬೇಕೆಂದರೆ ನಮ್ಮ ಜೊತೆ ರಾಜಿಯಾಗಬೇಕೆಂದು ನಿರ್ಮಾಪಕರು,ನಿರ್ದೇಶಕರು ಮಾತ್ರವಲ್ಲದೇ ಚಿತ್ರರಂಗದ ಸ್ಟಾರ್‌ಗಳು ಹೇಳಿದ್ದಾರೆ ಎಂದು ಕೂಡ ಹೇಳಲಾಗಿದೆ. ಲೈಂಗಿಕ ಬೇಡಿಕೆಯನ್ನು ಪೂರೈಸುವಂತೆ ಒತ್ತಾಯ ಮಾಡಲಾಗುತ್ತೆ ಎಂದು ಕೂಡ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲ ರಾಜಿ ಮಾಡಿಕೊಳ್ಳುವ ನಟಿಯರ ಪಟ್ಟಿ ಮಲಯಾಳಂ ಚಿತ್ರರಂಗದಲ್ಲಿ ಅನೇಕರ ಕೈಯಲ್ಲಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.

ಇನ್ನೂ, ಮದ್ಯದ ಅಮಲಿನಲ್ಲಿ ತೂರಾಡುವವರ ಸಂಖ್ಯೆ ಕೂಡ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚಿದ್ದು, ಕುಡಿದ ಮತ್ತಿನಲ್ಲಿ ಅನೇಕರು ಚಿತ್ರದಲ್ಲಿ ಅಭಿನಯಿಸುವ ಮಹಿಳಾ ಕಲಾವಿದರ ಕೋಣೆಗಳಿಗೆ ಬಲವಂತವಾಗಿ ನುಗ್ಗುವ ಪ್ರಯತ್ನವನ್ನು ಈ ಹಿಂದೆಯಷ್ಟೇ ಅಲ್ಲದೇ ಈಗಲೂ ಕೂಡ ಮಾಡುತ್ತಾರೆ ಎಂದು ಹೇಮಾ ಆಯೋಗದ ವರದಿ ತಿಳಿಸಿದೆ. ಈ ಕಾರಣಕ್ಕೆ ಅಸುರಕ್ಷಿತ ಭಾವದಿಂದ ನರಳುವ ಯುವತಿಯರು ಚಿತ್ರದ ಚಿತ್ರೀಕರಣ ನಡೆಯುವ ಸಮಯದಲ್ಲಿ ಸುರಕ್ಷತೆಗೆ ತಮ್ಮ ಕುಟುಂಬಸ್ಥರನ್ನು ತಮ್ಮ ಜೊತೆ ಕರೆದೊಯ್ಯುತ್ತಾರೆ ಎಂದು ಕೂಡ ಈ ವರದಿಯಲ್ಲಿ ಹೇಳಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಹುಡುಗಿಯರು ಹಾಸಿಗೆ ಹಂಚಿಕೊಳ್ಳಬೇಕಾದ ಪರಿಸ್ಥಿತಿ ಇದ್ದರೂ, ಪೊಲೀಸರಿಗೆ ದೂರು ನೀಡಲು ಬಹುತೇಕರು ಹಿಂಜರಿಯುತ್ತಾರೆ ಎಂದು ಹೇಳಿರುವ ಹೇಮಾ ಆಯೋಗ ದೂರು ನೀಡಿದರೆ ಕೆಲಸ ಕಳೆದುಕೊಳ್ಳುವ ಭಯ ಮತ್ತು ಲೈಂಗಿಕ ಕಿರುಕುಳದ ಕಳಂಕ ಹಾಗೂ ಮುಜುಗರವನ್ನು ತಪ್ಪಿಸಲು ಅನೇಕರು ಮೌನಕ್ಕೆ ಶರಣಾಗುತ್ತಾರೆ, ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಗೆತನ, ದ್ವೇಷಕ್ಕೆ ಬಲಿಯಾಗಬೇಕಾಗುತ್ತೆ ಎಂದು ಸುಮ್ಮನಾಗಿರುವುದಾಗಿ ಅನೇಕರು ಸಾಕ್ಷ್ಯವನ್ನು ನೀಡಿದ್ಧಾರೆ ಎಂದು ಕೂಡ ಈ ವರದಿಯ ಮೂಲಕ ಹೇಳಲಾಗಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಅನೇಕರು ತಮ್ಮ ತಮ್ಮ ಮನೆಯವರಿಂದನೇ ಮುಚ್ಚಿಟ್ಟಿದ್ದಾರೆ ಎಂದು ಕೂಡ ಉಲ್ಲೇಖಿಸಲಾಗಿದೆ.

ಈ ಲೈಂಗಿಕ ಕಿರುಕುಳದ ಜೊತೆ ಆನ್ ಲೈನ್ ಕಿರುಕುಳದಿಂದ ಅನೇಕ ನಾಯಕಿಯರು ಹೈರಾಣಾಗಿದ್ದಾರೆ. ಸಾರ್ವಜನಿಕ ಬೆದರಿಕೆಗಳು, ಅಸಭ್ಯ ಕಾಮೆಂಟ್‌ಗಳು, ನಗ್ನ ವಿಡಿಯೋಗಳನ್ನು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ, ಇಷ್ಟೇ ಅಲ್ಲದೆ ಅತ್ಯಾಚಾರ ಬೆದರಿಕೆಗಳನ್ನು ಅನೇಕರು ಹಾಕುತ್ತಾರೆ ಎಂದು ಕೂಡ ಈ ವರದಿಯಲ್ಲಿ ಹೇಳಲಾಗಿದೆ.
ಸದ್ಯಕ್ಕೆ ಈ ವರದಿಯನ್ನು ನೋಡಿ ಮಲಯಾಳಂ ಚಿತ್ರರಂಗ ಬೆಚ್ಚಿ ಬಿದ್ದಿದೆ. ದೇಶವ್ಯಾಪಿ ತನ್ನ ಪ್ರಯತ್ನ ಪ್ರಯೋಗಗಳ ಮೂಲಕ ಹೆಸರುವಾಸಿಯಾದ, ಈ ವರ್ಷದ ಯಶಸ್ವೀ ಚಿತ್ರರಂಗ ಅನಿಸಿಕೊಂಡ ಮಲಯಾಳಂ ಚಿತ್ರರಂಗದ ಮುಖವಾಡ ಈ ಮೂಲಕ ಕಳಚಿ ಬಿದ್ದಿದೆ.


Click it and Unblock the Notifications











