ಬಾಕ್ಸ್ ಆಫೀಸ್ ಕಿಂಗ್ ಮೋಹನ್ ಲಾಲ್: ಅತಿ ಹೆಚ್ಚು ಹಣ ಗಳಿಸಿದ 5 ಚಿತ್ರಗಳು
ಮಾಲಿವುಡ್ ಇಂಡಸ್ಟ್ರಿಯ ಸೂಪರ್ ಸ್ಟಾರ್ ಮೋಹನ್ ಲಾಲ್ 61ನೇ ವರ್ಷದ ಹುಟ್ಟುಹಬ್ಬದ ಆಚರಿಸಕೊಳ್ಳುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳಿಂದಲೂ ಮಲಯಾಳಂ ಚಿತ್ರರಸಿಕರನ್ನು ರಂಜಿಸುತ್ತಿರುವ ಲಾಲ್ ಅಭಿಮಾನಿಗಳ ನೆಚ್ಚಿನ ನಟ. ಮೋಹನ್ ಲಾಲ್ ಒಬ್ಬ ಪರಿಪೂರ್ಣ ನಟ ಎನ್ನುವುದಕ್ಕೆ ಅವರ ಚಿತ್ರಗಳೇ ಸಾಕ್ಷಿ.
ಕಮರ್ಷಿಯಲ್ ಚಿತ್ರಕ್ಕೂ ಸೈ, ಪ್ರಯೋಗಾತ್ಮಕ ಕಥೆಗೂ ಸೈ, ಪೌರಾಣಿಕ, ಐತಿಹಾಸಿಕ ಪಾತ್ರಗಳಿಗೂ ಜೀವ ತುಂಬಬಲ್ಲ ಕಲಾವಿದ. ಮೋಹನ್ ಲಾಲ್ ಮಾಲಿವುಡ್ ಬಾಕ್ಸ್ ಆಫೀಸ್‌ಗೆ ರಾಜ. ಇಂಡಸ್ಟ್ರಿಯಲ್ಲಿ ಸಾಕಷ್ಟು ದಾಖಲೆಗಳು ಅವರ ಹೆಸರಲ್ಲಿದೆ. ಅತಿ ಹೆಚ್ಚು ಗಳಿಕೆ ಕಂಡಿರುವ ಮಲಯಾಳಂ ಸಿನಿಮಾ ಸಹ ಮೋಹನ್ ಲಾಲ್ ನಟಿಸಿರುವ ಚಿತ್ರವೇ. ಮಲಯಾಳಂ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಹುಟ್ಟುಹಬ್ಬದ ವಿಶೇಷ ದಿನದಲ್ಲಿ ಮೋಹನ್ ಲಾಲ್ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡಿರುವ ಸಿನಿಮಾ ಯಾವುದು ಎಂದು ನೋಡೋಣ. ಮುಂದೆ ಓದಿ...

ಲೂಸಿಫರ್
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಲೂಸಿಫರ್' ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು. ಮಲಯಾಳಂ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿರುವುದು ಇದೇ ಲೂಸಿಫರ್. ವರ್ಲ್ಡ್‌ವೈಡ್ ತೆರೆಕಂಡಿದ್ದ ಈ ಚಿತ್ರ 175 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ವರದಿಯಾಗಿದೆ. ವೈಯಕ್ತಿಕವಾಗಿ ಮೋಹನ್ ಲಾಲ್ ವೃತ್ತಿ ಜೀವನದಲ್ಲೂ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಲೂಸಿಫರ್ ಅಗ್ರಸ್ಥಾನದಲ್ಲಿದೆ.

ಪುಲಿ ಮುರುಗನ್
2016ರಲ್ಲಿ ಬಿಡುಗಡೆಯಾದ ಚಿತ್ರ ಪುಲಿ ಮುರುಗನ್. ಲೂಸಿಫರ್ ಸಿನಿಮಾ ಬರುವವರೆಗೂ ಮಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಮಲಯಾಳಂನಲ್ಲಿ ಮೊದಲು ನೂರು ಕೋಟಿ ಗಳಿಸಿದ ಚಿತ್ರ ಪುಲಿ ಮುರುಗನ್. ದಾಖಲೆಗಳ ಪ್ರಕಾರ ಈ ಚಿತ್ರ 150 ಕೋಟಿ ಅಧಿಕ ಹಣ ಕಲೆಕ್ಷನ್ ಮಾಡಿದೆ.

ಒಪ್ಪಂ
2016ರಲ್ಲಿ ಬಿಡುಗಡೆಯಾದ ಮತ್ತೊಂದು ಹಿಟ್ ಸಿನಿಮಾ ಒಪ್ಪಂ. ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೋಹನ್ ಲಾಲ್ ಈ ಪಾತ್ರದ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ದಾಖಲೆಗಳ ಪ್ರಕಾರ ಈ ಚಿತ್ರ 65 ಕೋಟಿವರೆಗೂ ಗಳಿಕೆ ಕಂಡಿದೆ.

ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್
2017ರಲ್ಲಿ ರಿಲೀಸ್ ಆದ ಸಿನಿಮಾ 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್'. ಈ ಚಿತ್ರದ ಅಭಿನಯಕ್ಕಾಗಿ ಮೋಹನ್ ಲಾಲ್ ಅತ್ಯುತ್ತಮ ನಟ ಜ್ಯೂರಿ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಚಿತ್ರ 50 ಕೊಟಿವರೆಗೂ ಹಣ ಗಳಿಸಿದೆ ಎಂದು ವರದಿಯಾಗಿದೆ.
Recommended Video

ದೃಶ್ಯಂ
ಮೋಹನ್ ಲಾಲ್ ಅಭಿನಯದ ಚಿತ್ರಗಳ ಪೈಕಿ ಹೆಚ್ಚು ಜನಪ್ರಿಯತೆ ಗಳಿಸಿದ ಸಿನಿಮಾಗಳಲ್ಲಿ 'ದೃಶ್ಯಂ' ಸಹ ಒಂದು. ಮಲಯಾಳಂನಲ್ಲಿ ದೊಡ್ಡ ಸಕ್ಸಸ್ ಕಂಡ ಈ ಚಿತ್ರ ನಂತರ ತೆಲುಗು, ತಮಿಳು, ಕನ್ನಡ, ಹಿಂದಿಯಲ್ಲೂ ರಿಮೇಕ್ ಆಗಿದೆ. ಜಿತು ಜೋಸೆಫ್ ನಿರ್ದೇಶಿಸಿದ್ದ ಈ ಚಿತ್ರ ಸುಮಾರು 55 ಕೋಟಿವರೆಗೂ ಹಣ ಗಳಿಸಿದೆ ಎಂದು ಹೇಳಲಾಗಿದೆ. 2013ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಇತ್ತೀಚಿಗಷ್ಟೆ ದೃಶ್ಯಂ 2 ಸಿನಿಮಾನೂ ತೆರೆಕಂಡಿದೆ.


Click it and Unblock the Notifications