ಒಬ್ಬರಲ್ಲ, ಇಬ್ಬರಲ್ಲ 30 ಜನರಿಂದ ಅಶ್ಲೀಲ ಮೆಸೇಜ್, ನಟಿ ಮಾಡಿದ್ದೇನು ?
ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟಾತಿಕೆಟ್ಟ ಸಂದೇಶಗಳನ್ನು ಕಳಿಸೋದು, ಹೇಗೋ ಬಲೆಗೆ ಕೆಡವಿಕೊಂಡು ಬ್ಲಾಕ್‌ಮೇಲ್ ಮಾಡೋದೂ ಸೇರಿದಂತೆ ಡಿಜಿಟಲ್ ಕಾಮುಕರು ಥರ ಥರದಲ್ಲಿ ಕಾಡುತ್ತಿದ್ದಾರೆ. ಇಂಥಾ ಕಾಮುಕರ ಕಾಟದಿಂದ ರೋಸತ್ತು ಹೋದವರಲ್ಲಿ ಹನಿ ರೋಸ್ ಕೂಡ ಒಬ್ಬರು.
ಹೌದು, ತಮ್ಮ ಸೌಂದರ್ಯದಿಂದನೇ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುವ, ಎಲ್ಲರ ಕಣ್ಮನ ಸೆಳೆಯುವ ಮಲಯಾಳಂ ಚಿತ್ರರಂಗದ ಸುಂದರಿ ಹನಿ ರೋಸ್ ಚಿತ್ರಕ್ಕೆ ಬಣ್ಣ ಹಚ್ಚುವುದಕ್ಕಿಂತ ಸಭೆ-ಸಮಾರಂಭಕ್ಕೆ ಹೆಚ್ಚೆಚ್ಚು ಹೋಗುತ್ತಾರೆ. ಚಪ್ಪಲಿ ಅಂಗಡಿಯಿಂದ ಸೀರೆಯ ಮಳಿಗೆಗಳ ಉದ್ಘಾಟನಾ ಸಮಾರಂಭಕ್ಕೆ ತೆರಳಿ ರಿಬ್ಬನ್ ಕಟ್ ಮಾಡಿ ಬರುತ್ತಾರೆ.

ಇಂಥಾ ಹನಿ ರೊಸ್ ಅವರಿಗೆ ಕಾಮಾಂಧರು ಸಾಮಾಜಿಕ ಜಾಲತಾಣದಲ್ಲಿ ನಿತ್ಯ ನಿರಂತರ ಕಿರುಕುಳವನ್ನು ನೀಡುತ್ತಿದ್ದಾರೆ. ಕೊಳಕಾತಿ ಕೊಳಕು ಮೆಸೇಜ್‌ಗಳನ್ನು ಮತ್ತು ಕಾಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಕೂಡ ಇದೆಲ್ಲವನ್ನು ಇಲ್ಲಿಯವರೆಗೆ ಸಹಿಸಿಕೊಂಡು ಬಂದ ಹನಿ ರೋಸ್ ಈಗ ಆನ್‌ಲೈನ್ ಕಾಮುಕರ ವಿರುದ್ಧ ಸಮರ ಸಾರಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಹನಿ ರೋಸ್ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಹನಿ ರೋಸ್ ಅವರನ್ನು ಕಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ. ಕೊಚ್ಚಿಯ ಕುಂಬಳಂ ಪ್ರದೇಶದ ಶಾಜಿ ಎಂಬ ವ್ಯಕ್ತಿಯನ್ನು ಕಂಬಿಯ ಹಿಂದೆ ಕಳಿಸಿದ್ದಾರೆ.
ಇನ್ನು, ಶಾಜಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿ ಸುಮ್ಮನಾಗದ ಪೊಲೀಸರು ಹನಿಯ ಹಿಂದೆ ಕೈ ತೊಳೆದು ಬಿದ್ದಿರುವ ಮೂವತ್ತು ಜನರ ವಿರುದ್ಧ ಕೂಡ ಭಾರತೀಯ ನ್ಯಾಯ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ಧಾರೆ.
ಇನ್ನು, ತಾನು ಹೋದಲ್ಲಿ ಬಂದಲ್ಲಿ ವ್ಯಕ್ತಿಯೋರ್ವ ತನ್ನನ್ನೂ ಹಿಂಬಾಲಿಸುತ್ತಿದ್ದಾನೆ ಎಂದು ಕೂಡ ಹೇಳಿರುವ ಹನಿ ರೋಸ್ ಆ ವ್ಯಕ್ತಿ ಕರೆದ ಸಮಾರಂಭವೊಂದಕ್ಕೆ ನಾನು ಹೋಗಿರಲಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಹಗೆತನ ಸಾಧಿಸುತ್ತಿರುವ ಈ ವ್ಯಕ್ತಿ ನಾನು ಹೋಗುವ ಪ್ರತಿ ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುತ್ತಾನೆ ಎಂದು ಹೇಳಿದ್ದಾರೆ. ಬೇಕು ಬೇಕಂತಲೇ ಮಾಧ್ಯಮದವರ ಮುಂದೆ ನನಗೆ ಅವಮಾನವಾಗುವಂತೆ ಮಾತನಾಡುತ್ತಾನೆ. ನನ್ನ ಕುರಿತು ಡಬಲ್ ಮೀನಿಂಗ್ ಮಾತುಗಳನ್ನಾಡುತ್ತಾನೆ ಎಂದು ಹೇಳಿದ್ದಾರೆ. ಆದರೆ, ಇಲ್ಲಿಯವರೆಗೆ ಮಾನಸಿಕ ಅಸ್ವಸ್ಥರು ಎಂದುಕೊಂಡು ನಾನು ಸುಮ್ಮನಾಗಿದ್ದೆ. ನನ್ನ ಈ ಮೌನವನ್ನೇ ನನ್ನ ದೌರ್ಬಲ್ಯವೆಂದುಕೊಂಡು ಅನೇಕರು ಅವರಾಡಿದ್ದೇ ಆಟ ಎನ್ನುವಂತೆ ವರ್ತಿಸಲು ಶುರು ಮಾಡಿದ್ದರು. ಆದರೆ ಈಗ ನಾನು ಸುಮ್ಮನೆ ಇರುವುದಿಲ್ಲ ಎಂದು ಹೇಳಿರುವ ಹನಿ ರೋಸ್ ಕೆಟ್ಟ ಕಾಮೆಂಟ್‌ಗಳನ್ನು ಮಾಡುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಅಂದ್ಹಾಗೇ ಹನಿ ರೋಸ್ ಚಿತ್ರರಂಗದಲ್ಲಿ ಕಳೆದ ಎರಡು ದಶಕಗಳಿಂದ ಇದ್ದಾರೆ. ಮಲಯಾಳಂ ಜೊತೆ ತೆಲುಗು ಮತ್ತು ತಮಿಳಿನಲ್ಲಿ ಕೂಡ ನಾಯಕಿಯ ಪಾತ್ರವನ್ನು ನಿರ್ವಹಿಸಿರುವ ಹನಿ ರೋಸ್ ಕನ್ನಡದಲ್ಲಿ ನಂಜನಗೂಡು ನಂಜುಂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ರವಿಶಂಕರ್ ಎದುರು ನಾಯಕಿಯಾಗಿ ಮಿಂಚಿದ್ದರು. ಸದ್ಯ ಹನಿ ರೋಸ್ ರಾಚೆಲ್ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ.


Click it and Unblock the Notifications











