ಮೂರು ಮದುವೆ ಮಾಡ್ಕೊಂಡು ನನ್ನ ಬದುಕಿನ 17 ವರ್ಷ ಹಾಳು ಮಾಡ್ಕೊಂಡೆ ; 44 ವರ್ಷದ ಖ್ಯಾತ ನಟಿಯ ಮನದ ನೋವು
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಮದುವೆ ಏಳೇಳು ಜನ್ಮದ ಅನುಬಂಧವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೂ ಬೆಲೆ ಇಲ್ಲ. ಮದುವೆ ಎಂಬ ಮೂರಕ್ಷರಕ್ಕೂ ಕಿಮ್ಮತ್ತು ಇಲ್ಲ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ .. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ.
ಚಿತ್ರರಂಗದವರ ಈ ಧೋರಣೆಯಿಂದ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಇದೆ. ಮದುವೆ ಎಂದರೆ ಇವರಿಗೆಲ್ಲಾ ಮಕ್ಕಳಾಟ ಎಂಬ ಆಕ್ರೋಶ ಕೂಡ ಆಗಾಗ ವ್ಯಕ್ತವಾಗುತ್ತೆ. ಅವಿವಾಹಿತರಾಗಿ ಉಳಿಯುವುದು ತಪ್ಪಲ್ಲ. ಆದರೆ ವಿವಾಹವ್ಯವಸ್ಥೆಯನ್ನೇ ಅವಹೇಳನ ಮಾಡುವುದು ತಪ್ಪು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತೆ.ಈ ಮಾತುಗಳಿಗೆ ಪೂರಕವಾಗಿ ಮೂರು ಮದುವೆ ಮಾಡ್ಕೊಂಡು ನನ್ನ ಬದುಕಿನ ಅತ್ಯಂತ ಅಮೂಲ್ಯವಾದ 17 ವರ್ಷಗಳನ್ನು ಹಾಳು ಮಾಡ್ಕೊಂಡೆ ಎಂದು ಮೀರಾ ವಾಸುದೇವನ್ ಹೇಳಿದ್ದಾರೆ. ಈ ಮೂಲಕ ವಿವಾಹ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ.

ಹೌದು, ಮೀರಾ ವಾಸುದೇವನ್... ಮಲಯಾಳಂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ಮುಂಬೈ ಮೂಲದ ತಮಿಳು ಚೆಲುವೆ. ಹೆಚ್ಚು ಕಡಿಮೆ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಮೀರಾ ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ, ಹಿಂದಿ.. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
''ಅಂಜಲಿ ಐ ಲವ್ ಯೂ''.. ''ತನ್ಮಾತ್ರ'' .. ''ಜೆರ್ರಿ'' .. ''ಗುಲ್ಮೋಹರ್''.. ''13 ಬಿ'' .. ''ರೂಲ್ಸ್- ಪ್ಯಾರ್ ಕಾ ಸೂಪರ್ ಹಿಟ್ ಫಾರ್ಮುಲಾ''.. ಹೀಗೆ ಇಲ್ಲಿಯವರೆಗೆ ಹತ್ತಾರು ಚಿತ್ರ.. ಹಲವಾರು ಪಾತ್ರ.. ಮಾಡಿರುವ ಮೀರಾ ವಾಸುದೇವನ್ ಇಲ್ಲಿಯವರೆಗೆ ಮೂರು ಮದುವೆ ಮಾಡಿಕೊಂಡಿದ್ದಾರೆ. ಆದರೆ ಇವರಿಗೆ ಸಂಸಾರದ ಸುಖ ಮಾತ್ರ ಸಿಗಲಿಲ್ಲ.
ಹೀಗಾಗಿ ತಮ್ಮ ಮೂರು ಗಂಡಂದಿರಿಗೆ ವಿಚ್ಚೇದನ ನೀಡಿ ದಾಂಪತ್ಯ ಜೀವನದಿಂದ ಮೀರಾ ಹೊರ ಬಂದಿದ್ದಾರೆ. ಸದ್ಯ ಮೀರಾ ವಾಸುದೇವನ್ ಅವರಿಗೆ 44 ವರ್ಷ. ಇಂಥಾ ಮೀರಾ ವಾಸುದೇವನ್ ಮದುವೆ ಮಾಡಿಕೊಂಡಿದ್ದು ನನ್ನ ಜೀವನದ ಬಹುದೊಡ್ಡ ತಪ್ಪು ಎಂದು ಹೇಳಿದ್ಧಾರೆ.
ಈ ಕುರಿತು ''ಧನ್ಯಾ ವರ್ಮಾ'' ಅವರಿಗೆ ನೀಡಿದ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಮೀರಾ ವಾಸುದೇವನ್, ನಾನು ಆ ಸಮಯದಲ್ಲಿ ಬುದ್ದಿವಂತಿಕೆಯಿಂದ ಕೆಲಸ ಮಾಡಿದ್ದರೆ, ನಾನು ಇನ್ನೂ ಏನೇನೋ ಸಾಧನೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಮದುವೆ ಮಾಡಿಕೊಳ್ಳದೇ ಸಿನಿಮಾ, ಫಿಟ್ನೆಸ್, ಉತ್ತಮಾದ ಸ್ನೇಹಿತರ ವರ್ಗ.. ಹೀಗೆ ನನಗೆ ಇಷ್ಟವಾದ ಕೆಲಸದ ಮೇಲೆ ಗಮನ ಕೊಡಬಹುದಿತ್ತು ಎಂದು ಹೇಳಿರುವ ಮೀರಾ ನನ್ನ ತಂದೆ ತಾಯಿ ನನ್ನ ಸಹೋದರಿಯರ ಜೊತೆ ಹೆಚ್ಚಿನ ಸಮಯ ಕಳೆಯಬಹುದಿತ್ತು, ಆದರೆ ನಾನು ಆ ಸಮಯವನ್ನೆಲ್ಲ ಬೇರೆಯವರಿಗೋಸ್ಕರ ಹಾಳು ಮಾಡಿದೆ ಎಂದು ತಮ್ಮ ಮನದ ಬೇಸರವನ್ನು ಹೊರ ಹಾಕಿದ್ದಾರೆ.
ಗೌರವ ಕೊಡದ, ನನ್ನನ್ನು ಕೀಳಾಗಿ ಕಂಡವರ ಜೊತೆ ಸಂಬಂಧದ ಹೆಸರಿನಲ್ಲಿ ಸುಮ್ಮನೆ ಕಾಲ ಹರಣ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿರುವ ಮೀರಾ ವಾಸುದೇವನ್, ನಾನು ನನ್ನ ಬದುಕಿನ 17 ವರ್ಷಗಳನ್ನು ಮೂರು ಮೂರ್ಖತನದ ಮದುವೆ ಮಾಡಿಕೊಂಡು ಹಾಳು ಮಾಡಿಕೊಂಡೆ ಎಂದು ನನ್ನ ಮಗನಿಗೆ ನಾನು ಎಷ್ಟೋ ಸಲ ಹೇಳಿದ್ದೇನೆ ಎಂದಿದ್ದಾರೆ.
ಅಂದ್ಹಾಗೇ 22 ವರ್ಷದ ಹಿಂದೆ ವಿಶಾಲ್ ಅಗರ್ ವಾಲ್ ಅವರನ್ನ ಮೀರಾ ಮದುವೆಯಾಗಿದ್ದರು. ಆದರೆ ಆ ಸಂಬಂಧ ಐದೇ ವರ್ಷಕ್ಕೆ ಉಸಿರು ಚೆಲ್ಲಿತು. ವಿಶಾಲ್ ಅಗರ್ ವಾಲ್ ಅವರಿಂದ ದೂರವಾದ ನಂತರ ಮೀರಾ ಮಲಯಾಳಂನ ಜನಪ್ರಿಯ ನಟ ಜಾನ್ ಕೊಕ್ಕೆನ್ ಜೊತೆ ಕಾಣಿಸಿಕೊಂಡರು. ಆ ನಂತರ ಜಾನ್ ಜೊತೆ ಮದುವೆಯಾಗಿ ಒಂದು ಮಗುವಿಗೆ ತಾಯಿಯೂ ಆದರು.
ಆದರೂ ಅದ್ಯಾಕೋ ಈ ಸಂಬಂಧ ಕೂಡ ಹೆಚ್ಚು ದಿನ ಉಳಿಯಲಿಲ್ಲ. 2016ರಲ್ಲಿ ಮೀರಾ ವಾಸುದೇವನ್, ಜಾನ್ ಕೊಕ್ಕೆನ್ ಅವರಿಂದ ವಿಚ್ಛೇದನ ಪಡೆದು ದೂರವಾದರು.
ಜಾನ್ ಅವರಿಂದ ದೂರವಾದ ಮೀರಾ 2024ರಲ್ಲಿ ತಮ್ಮ 44ನೇ ವರ್ಷದಲ್ಲಿ ತಮಗಿಂತ ಆರು ವರ್ಷ ಚಿಕ್ಕವರಾದ, ಮಲಯಾಳಂ ಚಿತ್ರರಂಗದಲ್ಲಿಯೇ ಸಿನಿಮ್ಯಾಟೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ವಿಪಿನ್ ಜೊತೆ ಸಪ್ತಪದಿ ತುಳಿದಿದ್ದರು.ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಮದುವೆಯಾಗಿದ್ದರು. ಆದರೆ ಈ ಜನುಮ ಜನುಮದ ಅನುಬಂಧ ಕೇವಲ ಒಂದು ವರ್ಷಕ್ಕೆ ಕಳಚಿ ಬಿತ್ತು.
ಸದ್ಯ ಮೂರು ಮದುವೆ ಮಾಡ್ಕೊಂಡು 17 ವರ್ಷ ಹಾಳು ಮಾಡ್ಕೊಂಡೆ ಎಂದು ಮೀರಾ ಹೇಳಿದ್ದು ಇವರ ಈ ಸಂದರ್ಶನ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications