ದಂತ ಪ್ರಕರಣ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ವಿಚಾರಣೆಗೆ ಕೇರಳ ಹೈಕೋರ್ಟ್ ತಡೆ
ಅಕ್ರಮವಾಗಿ ಆನೆ ದಂತ ಹೊಂದಿದ್ದ ಪ್ರಕರಣದಲ್ಲಿ ಮೋಹನ್ ಲಾಲ್ ವಿರುದ್ಧದ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿ ಕೇರಳ ಹೈಕೋರ್ಟ್ ಆದೇಶ ನೀಡಿದೆ. ಪೆರುಂಬವೂರ್ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ (ಜೆಎಫ್‌ಎಂಸಿ) ಬಾಕಿ ಉಳಿದಿರುವ ಪ್ರಕರಣದಲ್ಲಿ ಆರು ತಿಂಗಳ ಕಾಲ ತಡೆ ವಿಚಾರಣೆಗೆ ತಡೆ ನೀಡಲಾಗಿದೆ.
ನಟ ಮೋಹನ್ ಲಾಲ್ ಅವರು ದಂತದ ಕಲಾಕೃತಿಗಳು ಮತ್ತು ಆನೆಯ ದಂತಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ಪ್ರಕರಣ ದಾಖಲಾಗಿದೆ. ಪೆರುಂಬವೂರ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ (ಜೆಎಫ್‌ಎಂಸಿ) ವಿಚಾರಣೆಗೆ ಬಾಕಿ ಇರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮೋಹನ್ ಲಾಲ್ ಅರ್ಜಿ ಸಲ್ಲಿಸಿದ್ದರು. ಇದರ ನಂತರ, ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ.

ನಟ ಮೋಹನ್ ಲಾಲ್ ನಾಲ್ಕು ಆನೆ ದಂತಗಳನ್ನು ಹೊಂದಿರುವುದು ಸಂಪೂರ್ಣವಾಗಿ ಕಾನೂನುಬದ್ಧವಾಗಿದೆ ಎಂದು ಮೋಹನ್ ಲಾಲ್ ವಕೀಲರು ವಾದಿಸಿದ್ದಾರೆ. ನಾಲ್ಕು ಆನೆ ದಂತಗಳ ಮಾಲೀಕತ್ವದ ಪ್ರಮಾಣಪತ್ರವನ್ನು ನ್ಯಾಯಾಲಯದ ಮುಂದೆ ಇರಿಸಿದ್ದಾರೆ. ಜೊತೆಗೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಥವಾ ಕೇರಳ ವನ್ಯಜೀವಿ (ರಕ್ಷಣೆ) ನಿಯಮಗಳ ಅಡಿಯಲ್ಲಿ ಯಾವುದೇ ನಿಬಂಧನೆಗಳನ್ನು ನಟ ಉಲ್ಲಂಘಿಸಿಲ್ಲ. ಅರ್ಜಿದಾರರ ವಿರುದ್ಧ ಎರ್ನಾಕುಲಂನ ಮೆಕ್ಕಪ್ಪಲಾ ಅರಣ್ಯ ಠಾಣೆಯ ಸೆಪ್ಟೆಂಬರ್ 16, 2019 ರ ವರದಿಯು ಸಮರ್ಥನೀಯವಲ್ಲ ಎಂದು ಮೋಹನ್ ಲಾಲ್ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನವೆಂಬರ್ 3 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮೋಹನ್ ಲಾಲ್ ಅವರಿಗೆ ಸೂಚಿಸಲಾಗಿತ್ತು. 2011ರಲ್ಲಿ ಕೊಚ್ಚಿಯಲ್ಲಿರುವ ಮೋಹನ್ ಲಾಲ್ ಅವರ ನಿವಾಸದಿಂದ ಆನೆ ದಂತಗಳು ಮತ್ತು 13 ದಂತದ ಕಲಾಕೃತಿಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ನಂತರ ಪ್ರಕರಣ ದಾಖಲಾಗಿತ್ತು. ಮೋಹನಲಾಲ್ ಮತ್ತು ಇತರ ಸಂಬಂಧಿತರ ವಿರುದ್ಧ 2019 ರಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.
ಕೇರಳ ರಾಜ್ಯ ಸರ್ಕಾರವು 2022 ರಲ್ಲಿ ಪ್ರಾಸಿಕ್ಯೂಷನ್ ಹಿಂಪಡೆಯಲು ಪ್ರಯತ್ನಿಸಿತ್ತು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅದನ್ನು ನಿರಾಕರಿಸಿತ್ತು. ಸದ್ಯ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರ ಏಕ ಸದದ್ಯ ಪೀಠ ಆರು ತಿಂಗಳಕಾಲ ವಿಚಾರಣೆಗೆ ತಡೆ ನೀಡಿದೆ.

ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರು ಸದ್ಯ ಬಹು ನಿರೀಕ್ಷಿತ ಲಿಜೋ ಜೋಸ್ ಪೆಲ್ಲಿಸ್ಸೆರಿ ಅವರ ಮಲೈಕೊಟ್ಟೈ ವಾಲಿಬನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications










