ಹೊಂಬಾಳೆ ಹಾದಿಯಲ್ಲಿ ಕೆವಿಎನ್ ಸಂಸ್ಥೆ; ಹೊಸ ಅಧ್ಯಾಯ ಶುರು
ಕನ್ನಡ ಚಿತ್ರರಂಗದಲ್ಲಿ ಈಗ ದೊಡ್ಡ ದೊಡ್ಡ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಕನ್ನಡ ಚಿತ್ರ ನಿರ್ಮಾಣ ಸಂಸ್ಥೆಗಳು ನೂರಾರು ಕೋಟಿ ಹಣ ಹೂಡಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈಗಾಗಲೇ ಈ ದಿಶೆಯಲ್ಲಿ ದೊಡ್ಡ ಅಡಿ ಇಟ್ಟಿದೆ. ಇದೀಗ KVN ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಅದೇ ಹಾದಿಯಲ್ಲಿ ಕಾಲಿಟ್ಟಿದೆ.
ಸದ್ಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಭಾಷೆಯ ಗಡಿಮೀರಿ ದೊಡ್ಡ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ. ಅದಕ್ಕೆ ಇಂಡಿಯನ್ ಸಿನಿಮಾ ಎಂದು ಕರೆಯುತ್ತಿದ್ದಾರೆ. ಕನ್ನಡದ ಹೊಂಬಾಳೆ ಸಂಸ್ಥೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿ ಗೆದ್ದಿದೆ. ಇದೀಗ KVN ಪ್ರೊಡಕ್ಷನ್ಸ್ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ತೆಸ್ಪಿಯನ್ ಫಿಲ್ಮ್ಸ್ ಸಂಸ್ಥೆಗಳು ಜೊತೆಯಾಗಿ ಒಂದು ಮಲಯಾಳಂ ಚಿತ್ರ ಕೈಗೆತ್ತಿಕೊಂಡಿದೆ. ಚಿದಂಬರಂ ಮತ್ತು ಜೀತು ಮಾಧವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. 'ಮಂಜುಮ್ಮಲ್ ಬಾಯ್ಸ್' ಹಾಗೂ 'ಆವೇಶಂ' ಕಳೆದ ವರ್ಷ ಮಾಲಿವುಡ್ ಬಾಕ್ಸಾಫೀಸ್ ಶೇಕ್ ಮಾಡಿದ ಚಿತ್ರಗಳು. ಈ ಚಿತ್ರಗಳ ನಿರ್ದೇಶಕರು ಒಟ್ಟಿಗೆ ಒಂದು ಚಿತ್ರಕ್ಕೆ ಜೊತೆಯಾಗುತ್ತಿದ್ದಾರೆ.
ಕನ್ನಡದಲ್ಲಿ 'ಕೆಡಿ', 'ಟಾಕ್ಸಿಕ್' ರೀತಿಯ ದೊಡ್ಡ ದೊಡ್ಡ ಚಿತ್ರಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ದರ್ಶನ್- ಜೋಗಿ ಪ್ರೇಮ್ ಕಾಂಬಿನೇಷನ್ ಚಿತ್ರವನ್ನು ಘೋಷಿಸಿದ್ದಾರೆ. ಇನ್ನು ತಮಿಳಿನಲ್ಲಿ ಬಹುಕೋಟಿ ವೆಚ್ಚದ ದಳಪತಿ 69 ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಇದು ವಿಜಯ್ ನಟನೆಯ ಕೊನೆ ಸಿನಿಮಾ ಎನ್ನಲಾಗ್ತಿದ್ದು ಭಾರೀ ಬಜೆಟ್‌ನಲ್ಲಿ ಸಿನಿಮಾ ಮೂಡಿಬರಲಿದೆ. ಇದೆಲ್ಲದರ ನಡುವೆ ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇನ್ನು ಹೆಸರಿಡದ ಚಿತ್ರಕ್ಕೆ ಜಿತು ಮಾಧವನ್ ಕಥೆ ಬರೆದರೆ ಚಿದಂಬರಂ ಆಕ್ಷನ್ ಕಟ್ ಹೇಳಿದ್ದಾರೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಸುಶಿನ್ ಶ್ಯಾಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಗಣೇಶ್ ನಟಿಸಿ 'ಸಖತ್' ಚಿತ್ರದ ಮೂಲಕ ಕೆವಿಎನ್ ಸಂಸ್ಥೆ ಚಿತ್ರರಂಗಕ್ಕೆ ಬಂದಿತ್ತು. ಬಳಿಕ 'ಬೈಟು ಲವ್' ಚಿತ್ರ ನಿರ್ಮಿಸಿತ್ತು. 'ಟಾಕ್ಸಿಕ್' ಚಿತ್ರಕ್ಕಾಗಿ ಯಶ್ ಜೊತೆ ಕೈಜೋಡಿಸಿದ್ದಾರೆ. ಮುಂದೆ ನರ್ತನ್ ನಿರ್ದೇಶನದ ಚಿತ್ರಕ್ಕೆ ಹಣ ಸುರಿಯಲು ಕೆವಿಎನ್ ಸಂಸ್ಥೆ ಮುಂದಾಗಿದೆ. ಚಿತ್ರ ನಿರ್ಮಾಣ ಮಾತ್ರವಲ್ಲ ದೊಡ್ಡ ದೊಡ್ಡ ಸಿನಿಮಾಗಳನ್ನು ಸಂಸ್ಥೆ ವಿತರಣೆ ಮಾಡುತ್ತಿದೆ.
ಕನ್ನಡ ಮಾತ್ರವಲ್ಲ ಪರಭಾಷಾ ಚಿತ್ರಗಳ ವಿತರಣೆ ರೈಟ್ಸ್ ಕೊಂಡುಕೊಳ್ಳುತ್ತಿದೆ. ಇತ್ತೀಚಿಗೆ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಹಾಗೂ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಚಿತ್ರಗಳನ್ನು ಕೆವಿಎನ್ ಸಂಸ್ಥೆ ವಿತರಣೆ ಮಾಡಿತ್ತು. 'ಯುಐ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಿರ್ದೇಶಕ ಉಪ್ಪಿ ಖದರ್ ಏನು ಎನ್ನುವುದು ಮತ್ತೊಮ್ಮೆ ಸಾಬೀತಾಗಿತ್ತು.
ಕನ್ನಡ ಸಿನಿರಸಿಕರು ಕೆವಿಎನ್ ಸಂಸ್ಥೆ ಹೊಸ ಪ್ರಯತ್ನಕ್ಕೆ ಶುಭ ಕೋರುತ್ತಿದ್ದಾರೆ. ಜೊತೆಗೆ ಕನ್ನಡದಲ್ಲಿ ಹೆಚ್ಚು ಸಿನಿಮಾ ನಿರ್ಮಾಣ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನು ಕೆವಿಎನ್ ಮೊದಲ ಮಲಯಾಳಂ ಪ್ರಾಜೆಕ್ಟ್ ಕುತೂಹಲ ಮೂಡಿಸಿದೆ.


Click it and Unblock the Notifications











