ದಕ್ಷಿಣಕ್ಕೆ ವಲಸೆ ಬಂದ ಸೋತು ಕಂಗಾಲಾದ ಕರಣ್ ಜೋಹರ್ ; ಚಿತ್ರದ ಹೆಸರೇನು ? ನಾಯಕ ಯಾರು ?
''ಪ್ಯಾನ್ ಇಂಡಿಯಾ'' ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಈ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್..
ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್‌ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಉತ್ತರ ಭಾರತದಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣದ ಈ ಸ್ಟಾರ್‌ಗಳ ಹಾವಳಿಯನ್ನು ಕಂಡು ಅಲ್ಲಿನವರ ಬುಡಕ್ಕೆ ಬೆಂಕಿ ಬಿದ್ದಿದೆ.

ಹೀಗಾಗಿ ನಿಧಾನಕ್ಕೆ ದಕ್ಷಿಣದ ಚಿತ್ರರಂಗವನ್ನು ಹೊಗಳುತ್ತಾ ಹಲವರು ಇತ್ತ ವಲಸೆ ಬರುತ್ತಿದ್ದಾರೆ. ಸೌತ್ ಇಂಡಸ್ಟ್ರೀಯ ಪ್ರತಿಭಾವಂತರ ಮೇಲೆ ಬಾಜಿ ಕಟ್ಟುತ್ತಿದ್ದಾರೆ. ಉದಾಹರಣೆಗೆ ಕರಣ್ ಜೋಹರ್.
ಹೌದು, ಕರಣ್ ಜೋಹರ್.. ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ. ಕಳೆದ ನಾಲ್ಕು ದಶಕಗಳಿಂದ ಹಿಂದಿ ಉದ್ಯಮದ ಕಳಶ ಪ್ರಾಯದಂತೆ ಇದೆ ಇವರ ''ಧರ್ಮ ಪ್ರೊಡಕ್ಷನ್ಸ್''. 1980ರಲ್ಲಿ ನಿರ್ಮಾಣವಾದ ''ದೋಸ್ತಾನಾ'' ಚಿತ್ರದಿಂದ ಹಿಡಿದು ಮೊನ್ನೆ ಮೊನ್ನೆ ಬಿಡುಗಡೆಯಾದ ''ಚಾಂದ್ ಮೇರಾ ದಿಲ್''ವರೆಗೆ ಸುಮಾರು 60ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಈ ಸಂಸ್ಥೆಯದ್ದು.
ಇನ್ನು ಕರಣ್ ಜೋಹರ್ ಕೇವಲ ನಿರ್ಮಾಪಕನಾಗಿ ಮಾತ್ರವಲ್ಲ ನಿರ್ದೇಶಕನಾಗಿ ಕೂಡ ಕೆಲ ಮರೆಯಲಾಗದ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ಧಾರೆ. ಉದಾಹರಣೆಗೆ ''ಕುಚ್ ಕುಚ್ ಹೋತಾ ಹೈ''.. ''ಕಭಿ ಖುಷಿ ಕಭಿ ಘಮ್''.
ಆದರೆ, ಅದ್ಯಾಕೋ ಏನೋ ಕಳೆದ ಕೆಲ ವರ್ಷಗಳಿಂದ ಕರಣ್ ಜೋಹರ್ ನಸೀಬು ಚೆನ್ನಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇವರ ನಿರ್ಮಾಣದಡಿ ಬಂದ ಸಿನಿಮಾಗಳು ಸಾಲು ಸಾಲಾಗಿ ಮಕಾಡೆ ಮಲಗಿವೆ.

ಸರಣಿ ಡಿಸಾಸ್ಟರ್ ಗಳಿಂದ ಕಂಗಾಲಾದ ಕರಣ್ ಜೋಹರ್, ನಷ್ಟದ ಹೊಡೆತ ತಾಳಲಾರದೇ ''ಕೋವಿಶೀಲ್ಡ್'' ತಯಾರಿಸಿದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯ ನಿರ್ವಹಣಾಧಿಕಾರಿ ಆಧಾರ್ ಪೂನಾವಾಲಾ ಅವರನ್ನು ತಮ್ಮ ಪಾಲುದಾರರನ್ನಾಗಿ ಮಾಡಿಕೊಂಡಿದ್ಧಾರೆ. ತಮ್ಮ ಧರ್ಮ ಸಂಸ್ಥೆಯಲ್ಲಿ 50% ಪಾಲು ನೀಡಿ ಒಪ್ಪಂದವನ್ನು ಕೂಡ ಮಾಡಿಕೊಂಡಿದ್ದಾರೆ. 1000 ಕೋಟಿಯ ಡೀಲ್ ಮಾಡಿಕೊಂಡಿದ್ದಾರೆ.
ಇಂಥಾ ಕರಣ್ ಜೋಹರ್ ಇದೀಗ ದಕ್ಷಿಣದತ್ತ ಮುಖ ಮಾಡಿದ್ದು, ಮಲಯಾಳಂ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ಧಾರೆ. ತಮ್ಮ ಮೊದಲ ಮಲಯಾಳಂ ಚಿತ್ರಕ್ಕೆ ಕರಣ್ ಜೋಹರ್ ಮಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ಪೃಥ್ವಿರಾಜ್ ಸುಕುಮಾರನ್ ಜೊತೆ ಕೈ ಜೋಡಿಸಿದ್ದು ತಮ್ಮ ಚೊಚ್ಚಲ ಚಿತ್ರದ ಘೋಷಣೆಯನ್ನು ಮಾಡಿದ್ದಾರೆ.
ಕರಣ್ ಜೋಹರ್ ನಿರ್ಮಾಣದಡಿ ಸಿದ್ದವಾಗುತ್ತಿರುವ ಈ ಚಿತ್ರಕ್ಕೆ ''ಒಡಿಯನ್'' ಎಂದು ಹೆಸರಿಡಲಾಗಿದೆ. ''ಭೂತಕಾಲಂ'' ಮತ್ತು ''ಭ್ರಮಯುಗಂ'' ಅಂತಹ ಚಿತ್ರಗಳನ್ನು ನೀಡಿರುವ ನಿರ್ದೇಶಕ ರಾಹುಲ್ ಸದಾಸಿವನ್ ಅವರ ಕೈಗೆ ಕರಣ್ ಜೋಹರ್ ತಮ್ಮ ಚೊಚ್ಚಲ ಚಿತ್ರದ ಚುಕ್ಕಾಣಿಯನ್ನು ನೀಡಿದ್ದು, ನಿರ್ದೇಶನದ ಜವಾಬ್ಧಾರಿಯನ್ನು ವಹಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರಿಗೆ ಇಲ್ಲಿ ಮಂಜು ವಾರಿಯರ್ ನಾಯಕಿ. ಹೆಚ್ಚು ಕಡಿಮೆ 7 ವರ್ಷದ ನಂತರ ಇವರಿಬ್ಬರು ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಇದು ಪ್ಯಾನ್ ಇಂಡಿಯಾ ಕಾಲ. ಹೀಗಾಗಿ ತಮ್ಮ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿಯೇ ಕರಣ್ ಜೋಹರ್ ಬಿಡುಗಡೆ ಮಾಡಲಿದ್ದು, ''ಒಡಿಯನ್'' ಮಲಯಾಳಂ ಜೊತೆ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡದಲ್ಲಿಯೂ ತೆರೆಗೆ ಬರಲಿದೆ.
ಸದ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಕರಣ್ ಜೋಹರ್, ಪೃಥ್ವಿರಾಜ್ ಮತ್ತು ನಾವು ಈಗಾಗಲೇ ಹಲವು ಸಿನಿಮಾಗಳಿಗೆ ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ಸುದೀರ್ಘ ಹಾದಿಯನ್ನು ಸವೆಸಿದ್ದೇವೆ ಮತ್ತು ಮುಂದೆಯೂ ಇಂತಹ ಇನ್ನೂ ಅನೇಕ ಸಿನಿಮಾಗಳು ನಮ್ಮಿಂದ ಬರಲಿವೆ ಎಂದು ಆಶಿಸುತ್ತೇನೆ ಎಂದು ಹೇಳಿದ್ಧಾರೆ. ನಮ್ಮ ಚಿತ್ರ ''ಒಡಿಯನ್'' ಅನ್ನು ಅನೌನ್ಸ್ ಮಾಡಲು ನಮಗೆ ಅಪಾರ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಸದ್ಯ ಕರಣ್ ಜೋಹರ್ ಅವರ ಈ ಹೊಸ ಪ್ರಯತ್ನಕ್ಕೆ ಹಲವರು ಶುಭ ಕೋರುತ್ತಿದ್ಧಾರೆ. ದಕ್ಷಿಣ ಚಿತ್ರರಂಗಕ್ಕೆ ಸ್ವಾಗತವನ್ನು ಕೋರುತ್ತಿದ್ಧಾರೆ.


Click it and Unblock the Notifications