ಪ್ರಿಯಕರನನ್ನು ಪರಿಚಯಿಸಿದ ಕೀರ್ತಿ ಸುರೇಶ್; ಆತನಿಗಾಗಿ ಮತಾಂತರ ಆಗ್ತಾರಾ ಮಹಾನಟಿ?
ಖ್ಯಾತ ನಟಿ ಕೀರ್ತಿ ಸುರೇಶ್ ಮದುವೆ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಮದುವೆ ಎನ್ನುವ ಅಂತೆ ಕಂತೆ ಸುದ್ದಿ ಕಳೆದೊಂದು ವಾರದಿಂದ ವೈರಲ್ ಆಗುತ್ತಿದೆ. ಇದೀಗ ಸ್ವತಃ ಕೀರ್ತಿ ಸುರೇಶ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಉದ್ಯಮಿ ಆಂಟನಿ ತಟ್ಟಿಲ್ ಜೊತೆ ಕೀರ್ತಿ ಬಹಳ ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎನ್ನಲಾಗಿತ್ತು. ಡಿಸೆಂಬರ್‌ನಲ್ಲಿ ಇಬ್ಬರು ಮದುವೆ ಆಗುತ್ತಾರೆ. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ ಎನ್ನಲಾಗಿತ್ತು. ಇದೀಗ ಕೀರ್ತಿ ಸುರೇಶ್ ಫೋಟೊವೊಂದನ್ನು ಹಂಚಿಕೊಂಡು 15 ವರ್ಷ, ಹಾಗೆ ಮುಂದುವರೆದಿದೆ. ಸದಾ ಮುಂದುವರೆಯುತ್ತದೆ. ಆಂಟೋನಿ ಹಾಗೂ ಕೀರ್ತಿ ಎಂದು ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಆಂಟೋನಿ ಜೊತೆ ಪಟಾಕಿ ಸಿಡಿಸಿ ಸಂಭ್ರಮಿಸಿರವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿಗೆ ಮಹಾನಟಿ ಮದುವೆ ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ಮುಂದಿನ ತಿಂಗಳು ಇಬ್ಬರು ಹೊಸಬಾಳಿಗೆ ಕಾಲಿಡಲಿದ್ದಾರೆ. ಕೊಚ್ಚಿನ್ ಮೂಲಕದ ಆಂಟನಿ ತಟ್ಟಿಲ್ ದುಬೈನಲ್ಲಿ ಉದ್ಯಮಿ ಆಗಿ ಗುರ್ತಿಸಿಕೊಂಡಿದ್ದಾರೆ. ಶಾಲಾ ದಿನಗಳಲ್ಲೇ ಇಬ್ಬರ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಇಬ್ಬರೂ ಪ್ರೀತಿಲಿ ಬಿದ್ದರು ಎನ್ನುವ ಮಾತುಗಳು ಕೇಳಿಬರ್ತಿದೆ.
ಒಟ್ಟಾರೆ ತಮ್ಮ ಶಾಲಾ ಸಹಪಾಠಿಯನ್ನೇ ಕೀರ್ತಿ ಸುರೇಶ್ ಜೀವನದ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಸದ್ಯ ಕೀರ್ತಿ ಮದುವೆ ವಿಚಾರ ಹಾಟ್ ಟಾಪಿಕ್ ಆಗಿದೆ. ಸೌತ್ ಸಿನಿದುನಿಯಾ ಮಾತ್ರವಲ್ಲದೇ ಮಹಾನಟಿ ಈಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಆಕೆಯ ಚೊಚ್ಚಲ ಹಿಂದಿ ಸಿನಿಮಾ 'ಬೇಬಿ ಜಾನ್' ಬಿಡುಗಡೆಗೆ ಸಜ್ಜಾಗಿದೆ.
'ಬೇಬಿ ಜಾನ್' ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮದುವೆ ಹೊಸ್ತಿಲಲ್ಲಿ ಇಷ್ಟು ಹಾಟ್ ಆಗಿ ಕುಣಿಯಬೇಕಿತ್ತೇ ಎಂದು ಕೆಲವರು ಟೀಕಿಸಿದ್ದರು. ಆದರೆ ಸಾಂಗ್ ಮಾತ್ರ ಹಿಟ್ ಆಗಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. 'ರಿವಾಲ್ವರ್ ರೀಟಾ' ಹಾಗೂ 'ಕನ್ನೆವೇಡು' ಎಂಬ ಮತ್ತೆರಡು ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ.
ಗೋವಾದಲ್ಲಿ ಮದುವೆ ಎನ್ನುವ ಚರ್ಚೆಯ ನಡುವೆ ಕೊಚ್ಚಿಯಲ್ಲೇ ಇಬ್ಬರೂ ಉಂಗುರ ಬದಲಿಸಿಕೊಳ್ಳುತ್ತಾರೆ ಎನ್ನುವ ಮಾತು ಕೇಳಿಬರ್ತಿದೆ. ಡಿಸೆಂಬರ್ 11ಕ್ಕೆ ಮದುವೆ ನಡೆಯುತ್ತದೆ ಎನ್ನಲಾಗ್ತಿದೆ. ಕೊಚ್ಚಿಯ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು ಪ್ರಿಯಕರನಿಗಾಗಿ ಕೀರ್ತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರಾ? ಎನ್ನುವ ಚರ್ಚೆ ಕೂಡ ಮುನ್ನಲೆಗೆ ಬಂದಿದೆ. ಈ ಬಗ್ಗೆ ಕೀರ್ತಿ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯಗಳಂತೆ ಕೀರ್ತಿ ಸುರೇಶ್ ಹಾಗೂ ಆಂಟನಿ ಮದುವೆ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಮಂತಾ ನಾಗಚೈತನ್ಯಾ, ಚಿರಂಜೀವಿ ಸರ್ಜಾ- ಮೇಘನಾ ರಾಜ್ ಹಾಗೂ ತರುಣ್ ಸುಧೀರ್- ಸೋನಲ್ ಇದೇ ರೀತಿ ಎರಡೂ ಸಂಪ್ರದಾಯಗಳಂತೆ ಮದುವೆ ಆಗಿದ್ದರು. ಇನ್ನು ಕೀರ್ತಿ ಕ್ರಿಶ್ಚಿಯನ್ ಧರ್ಮದ ಆಂಟನಿ ಜೊತೆ ಮದುವೆ ಆಗುತ್ತಿರುವುದಕ್ಕೆ ಕೆಲವರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಇದು ಮದುವೆ ಸಂಬಂಧ ಬಹಳ ದಿನ ಉಳಿಯಲ್ಲ ಟ್ರೋಲ್ ಮಾಡುತ್ತಿದ್ದಾರೆ.
ಬಾಲ ನಟಿಯಾಗಿ ಕೀರ್ತಿ ಸುರೇಶ್ ಚಿತ್ರರಂಗಕ್ಕೆ ಬಂದವರು. ತಂದೆ ಮಲಯಾಳಂ ಸಿನಿಮಾ ನಿರ್ಮಾಪಕ. ತಾಯಿ ತಮಿಳು ಸಿನಿಮಾ ನಟಿ ಆಗಿದ್ದರು. ಹಾಗಾಗಿ ಕೀರ್ತಿ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಮುಂದೆ ನಾಯಕಿಯಾಗಿ ಅವಕಾಶಗಳನ್ನು ಪಡೆದರು. ತೆಲುಗಿನ 'ಮಹಾನಟಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು.
'ಮಹಾನಟಿ' ಬಳಿಕ ಸೌತ್ ಸಿನಿದುನಿಯಾದಲ್ಲಿ ಕೀರ್ತಿ ಸುರೇಶ್ ಬಹಳ ಜನಪ್ರಿಯತೆ ಸಾಧಿಸಿದರು. ಆ ಪಾತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ನಂತರ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಕೀರ್ತಿ ಪೋಸ್ಟ್‌ಗೆ ರಾಶಿ ಖನ್ನಾ, ಮಾಳವಿಕಾ ಮೋಹನನ್, ಸಮಂತಾ, ಕಾಜಲ್, ಅನುಪಮಾ ಸೇರಿ ಹಲವು ಸೆಲೆಬ್ರೆಟಿಗಳು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ.


Click it and Unblock the Notifications











