"ಇದು ED ನಿರ್ದೇಶನದ ಜಾಹೀರಾತು.. ಸಾಮಾನ್ಯರು ಅಟಲ್ ಸೇತುವೆ ಬಳಸುತ್ತಿದ್ದಾರಾ?" ರಶ್ಮಿಕಾಗೆ ಕಾಂಗ್ರೆಸ್ ಪಾಠ!
ಅಟಲ್ ಸೇತುವೆ ಹಾಗೂ ದೇಶದ ಮೂಲಸೌಕರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ್ಣ ಭಾರೀ ಟೀಕೆ ಎದುರಿಸುವಂತಾಗಿದೆ. ಕೆಲವರು ಇದನ್ನು ಬಿಜೆಪಿ ಪಕ್ಷದ ಪ್ರಚಾರದ ಗಿಮಿಕ್ ಎಂದು ಆರೋಪಿಸುತ್ತಿದ್ದಾರೆ. ಹಿಂದು ಮುಂದು ಗೊತ್ತಿಲ್ಲದೇ ರಶ್ಮಿಕಾ ಮಂದಣ್ಣ ಈ ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪ್ರತಿಪಕ್ಷಗಳು ಕೂಡ ರಶ್ಮಿಕಾ ಮಂದಣ್ಣ ಅಟಲ್ ಸೇತುವೆ ಬಗ್ಗೆ ಮಾತನಾಡಿರುವ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದೀಗ ಕೇರಳ ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆಯಲಾಗಿದೆ. ರಶ್ಮಿಕಾಗೆ ಖಡಕ್ ಕೌಂಟರ್ ಕೊಟ್ಟಿದ್ದಾರೆ. ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಲಿಂಕ್ ಸೇತುವೆಯನ್ನು ತೋರಿಸಿ ಕೇರಳ ಕಾಂಗ್ರೆಸ್ ರಶ್ಮಿಕಾಗೆ ಟಾಂಗ್ ಕೊಟ್ಟಿದೆ.

ಪ್ರೀತಿಯ ರಶ್ಮಿಕಾ ಮಂದಣ್ಣ ಅವರೇ, "ಈವರೆಗೆ ಪಾವತಿಸಿದ ಜಾಹೀರಾತುಗಳು ಹಾಗೂ ಸಾರೋಗ್ರೇಟ್(ಬಾಡಿಗೆ) ಜಾಹೀರಾತುಗಳನ್ನು ಮಾತ್ರ ನೋಡುತ್ತಿದ್ದೆವು. ಆದರೆ ಇದೇ ಮೊದಲ ಬಾರಿಗೆ ಇಡಿ ನಿರ್ದೇಶನದ ಜಾಹೀರಾತನ್ನು ನೋಡುವಂತಾಗಿದೆ ಎಂದು ಕೇರಳ ಕಾಂಗ್ರೆಸ್ ರಶ್ಮಿಕಾ ಮಂದಣ್ಣ ಪೋಸ್ಟ್ ಬಗ್ಗೆ ವ್ಯಂಗ್ಯವಾಡಿದೆ. "ನೀವು ಹಂಚಿಕೊಂಡ ವೀಡಿಯೊದಲ್ಲಿ ಅಟಲ್ ಸೇತು ಖಾಲಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ನಾವು ಕೇರಳದಿಂದ ಬಂದಿದ್ದರಿಂದ ಮುಂಬೈನಲ್ಲಿ ಟ್ರಾಫಿಕ್ ಕಡಿಮೆ ಎಂದು ಅನಿಸಿತು. ಬಳಿಕ ನಾವು ಮುಂಬೈ ಕಾಂಗ್ರೆಸ್ ಸ್ನೇಹಿತರಿಂದ ಅದೇ ಬಗ್ಗೆ ವಿಚಾರಿಸಲು ಪ್ರಯತ್ನಿಸಿದ್ದೇವೆ. ಅಟಲ್ ಸೇತುವಿಗೆ ಹೋಲಿಸಿದರೆ ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ವಾಹನ ಚಾಲಕರು ಹೆಚ್ಚು ಬಳಸುತ್ತಾರೆ"
"ಬೇಕಿದ್ದರೆ ಈ ವಿಡಿಯೋ ನೋಡಿ. ವೀಡಿಯೊ ಮಾತ್ರವಲ್ಲ, ನಾವು ಕೆಲವು ಡೇಟಾವನ್ನು ಸಹ ನೋಡಿದ್ದೇವೆ. 1,634 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿದ 5.6 ಕಿಮೀ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು 2009 ರಲ್ಲಿ ಉದ್ಘಾಟಿಸಲಾಯಿತು. ಯಾವುದೇ ಶೋ ಆಫ್ ಇಲ್ಲದೇ ಆರಂಭವಾದ ಈ ಸಮುದ್ರದ ಮೇಲಿನ ಸೇತುವೆ ಮೂಲಕ ಹೆಚ್ಚು ಪ್ರಯಾಣಿಸಲು ವಾಹನ ಸವಾರರು ಆಸಕ್ತಿ ತೋರುತ್ತಿದ್ದಾರೆ. ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕಕ್ಕೆ ಪ್ರತಿ ಕಾರಿಗೆ ರೂ.85 ಮಾತ್ರ ವಿಧಿಸಲಾಗುತ್ತದೆ" ಎಂದು ಡೇಟಾ ಕೂಡ ಪೋಸ್ಟ್ ಮಾಡಿದ್ದಾರೆ.
"ಇನ್ನು ಅಟಲ್ ಸೇತುವೆಯನ್ನು ರೂ.17,840 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿ ಕಾರಿಗೆ ಪ್ರಯಾಣಕ್ಕೆ ರೂ. 250 ಟೋಲ್ ಸಂಗ್ರಹಿಸಲಾಗುತ್ತಿದೆ. ಈ ದರ ಸಾಮಾನ್ಯ ವಾಹನ ಸವಾರರಿಗೆ ಕೈಗೆಟುಕುವಂತಿಲ್ಲ. ಈ ಸೇತುವೆಯನ್ನು ಜನವರಿ 12 ರಂದು ಉದ್ಘಾಟನೆ ಮಾಡಲಾಗಿದ್ದು, ಏಪ್ರಿಲ್ 23 ರವರೆಗೆ 22.57 ಕೋಟಿ ರೂಪಾಯಿ ಮಾತ್ರ ಟೋಲ್ ಸಂಗ್ರಹಿಸಲಾಗಿದೆ. ಅಂದರೆ ತಿಂಗಳಿಗೆ ರೂ. 6.6 ಕೋಟಿ ಸಂಗ್ರಹವಾಗಲಿದೆ. ಈ ದರದ ಪ್ರಕಾರ ರೂ. 17,840 ಕೋಟಿ ಹೂಡಿಕೆಯು ಚೇತರಿಸಿಕೊಳ್ಳಲು 225 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಬಡ್ಡಿಗೆ ಲೆಕ್ಕವಿಲ್ಲ"
"ವಾಸ್ತವವಾಗಿ ಅಟಲ್ ಸೇತುವೆಯಿಂದ ತಿಂಗಳಿಗೆ ರೂ. 30 ಕೋಟಿ ಬರುವ ನಿರೀಕ್ಷೆ ಇತ್ತು. ಆದರೆ, ಈಗ ಬರುತ್ತಿಲ್ಲ. ಈ ಸೇತುವೆಯನ್ನು ಮುಂಬೈನ ಜನರು ಏಕೆ ಬಳಸುವುದಿಲ್ಲ ಎಂದು ನೀವು ವೀಡಿಯೊ ಮಾಡಿದರೆ ಒಳ್ಳೆಯದು" ಎಂದು ಸುದೀರ್ಘವಾಗಿ ಬರೆಯಲಾಗಿದೆ. ಇನ್ನು ರಶ್ಮಿಕಾ ಮಂದಣ್ಣ ಪೋಸ್ಟ್‌ಗೆ ಮಹಾರಾಷ್ಟ್ರ ಕಾಂಗ್ರೆಸ್ ಪ್ರತಿಕ್ರಿಯಿಸಬೇಕಿತ್ತು. ಆದರೆ ಕೇರಳ ಕಾಂಗ್ರೆಸ್ ಯಾಕೆ ಪ್ರತಿಕ್ರಿಯಿಸುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಎರಡು ದಿನಗಳ ಹಿಂದೆ ಮುಂಬೈನ ಅಟಲ್ ಸೇತುವೆ ಮೇಲೆ ಪ್ರಯಾಣಿಸಿದ್ದ ರಶ್ಮಿಕಾ ಮಂದಣ್ಣ, ಸೇತುವೆ ಅದ್ಭುತವಾಗಿದೆ ಎಂದು ಹೇಳಿದ್ದರು. ಕಳೆದ 10 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ, ಅದಕ್ಕೆ ಉದಾಹರಣೆ ಅಟಲ್ ಸೇತು ಸೇತುವೆ. ಈ ಸೇತುವೆ ಮೂಲಕ 2 ಗಂಟೆ ಪ್ರಯಾಣವನ್ನು 20 ನಿಮಿಷಕ್ಕೆ ಇಳಿಸಲಾಗಿದೆ. ಭಾರತವು ಅಭಿವೃದ್ಧಿಯಲ್ಲಿ ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅಭಿವೃದ್ಧಿಗಾಗಿ ಮತ ನೀಡಿ ಎಂದು ಕರೆ ನೀಡಿದರು.
ರಶ್ಮಿಕಾ ಮಂದಣ್ಣ ಪೋಸ್ಟ್ ಅನ್ನು ಪ್ರಧಾನಿ ಮೋದಿ ಶೇರ್ ಮಾಡಿ ಕಾಮೆಂಟ್ ಮಾಡಿದ್ದರು. ಅಲ್ಲಿಂದ ಮುಂದೆ ಸಾಕಷ್ಟು ಟೀಕೆಗಳು ಶುರುವಾಯಿತು. ಇದು ಚುನಾವಣೆಯ ಪ್ರಚಾರ ಅಲ್ಲದೇ ಮತ್ತೇನು ಅಲ್ಲ ಎಂದು ಕಾಮೆಂಟ್ ಶುರುವಾಯಿತು.


Click it and Unblock the Notifications











